ಒಂದೇ ದಿನ ಎರಡಕ್ಕೂ ಚಾಲನೆ ನೀಡಿದ ಸಚಿವ ಎಂ ಬಿ ಪಾಟೀಲ
ಬೆಂಗಳೂರು: ಆಸ್ಟ್ರೇಲಿಯಾದ ಸುಸಜ್ಜಿತ ಕಾನ್ಸುಲೇಟ್ ಜನರಲ್ ಕಚೇರಿ ಮತ್ತು ಆ ರಾಷ್ಟ್ರದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ನ್ಯೂಸೌತ್ ವೇಲ್ಸ್ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಎರಡಕ್ಕೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಶುಕ್ರವಾರ ಇಲ್ಲಿ ಚಾಲನೆ ನೀಡಿದರು.
ವಿಶ್ವವಿದ್ಯಾಲಯ ಕ್ಯಾಂಪಸ್ ಉದ್ಘಾಟನೆ ನಂತರ ಮಾತನಾಡಿದ ಅವರು, `ನ್ಯೂಸೌತ್ ವೇಲ್ಸ್ ವಿಶ್ವವಿದ್ಯಾಲಯವು ಜಗತ್ತಿನಲ್ಲಿ ಅಗ್ರಸ್ಥಾನದಲ್ಲಿರುವ 20 ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, ಆಸ್ಟ್ರೇಲಿಯಾದ ಅಗ್ರ ವಿ.ವಿ. ಆಗಿದೆ. ಇದರ ಬೆಂಗಳೂರು ಕ್ಯಾಂಪಸ್ ಹೆಬ್ಬಾಳದ ಸಮೀಪದಲ್ಲಿರುವ ಮಾನ್ಯತಾ ಟೆಕ್ ಪಾರ್ಕಿನಲ್ಲಿ ಇರಲಿದೆ. ರಾಜ್ಯದ ಯುವಜನರು ಮನೆಯ ಹತ್ತಿರದಲ್ಲೇ ಜಾಗತಿಕ ಗುಣಮಟ್ಟದ ಶಿಕ್ಷಣ ಪಡೆಯಲು ಈ ಕ್ಯಾಂಪಸ್ ಇನ್ನುಮುಂದೆ ಲಭ್ಯವಾಗಲಿದೆ. ಇದು ರಾಜ್ಯದಲ್ಲಿ ಕ್ಯಾಂಪಸ್ ತೆರೆಯುತ್ತಿರುವ 6ನೇ ವಿದೇಶಿ ವಿ.ವಿ. ಆಗಿದೆ’ ಎಂದಿದ್ದಾರೆ.
ನ್ಯೂಸೌತ್ ವೇಲ್ಸ್ ವಿ.ವಿ.ಯು ಆಸ್ಟ್ರೇಲಿಯಾದಲ್ಲಿ ತಾನು ಅನುಸರಿಸುವ ಪಠ್ಯಕ್ರಮ ಮತ್ತು ಬೋಧನಾ ವಿಧಾನವನ್ನೇ ಇಲ್ಲೂ ಅಳವಡಿಸಿಕೊಳ್ಳಲಿದೆ. ಸದ್ಯಕ್ಕೆ ಬಿಝಿನೆಸ್, ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್ ಮತ್ತು ಡಿಸಿಷನ್ಸ್ ವಿಷಯಗಳಲ್ಲಿ ಪದವಿ ಹಾಗೂ ಒಂದು ವರ್ಷ ಅವಧಿಯ ಸೈಬರ್ ಸೆಕ್ಯುರಿಟಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕೋರ್ಸುಗಳನ್ನು ಆರಂಭಿಸುತ್ತಿದೆ. ಪ್ರತಿಯೊಂದು ಕೋರ್ಸಿನಲ್ಲೂ ತಲಾ 30 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇರಲಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಲಿವರ್ಪೂಲ್, ಲ್ಯಾಂಕಾಸ್ಟರ್, ಲಾ ಟ್ರೋಬ್, ಫ್ಲಿಂಡರ್ಸ್ ಮತ್ತು ಲಂಡನ್ನಿನ ಇಂಪೀರಿಯಲ್ ಕಾಲೇಜ್ ವಿ.ವಿ.ಗಳು ತಮ್ಮ ಕ್ಯಾಂಪಸ್ ತೆರೆದಿವೆ. ಮುಂದಿನ ದಿನಗಳಲ್ಲಿ ಮತ್ತೊಂದಿಷ್ಟು ಜಾಗತಿಕ ಮಟ್ಟದ ವಿ.ವಿ.ಗಳು ನಮ್ಮಲ್ಲಿ ತಮ್ಮ ಕ್ಯಾಂಪಸ್ ತೆಗೆಯಲಿವೆ. ನಮ್ಮಲ್ಲಿರುವ ವಿಶ್ವ ದರ್ಜೆಯ ಸಂಶೋಧನಾ ಸಂಸ್ಥೆಗಳು, ಕೈಗಾರಿಕೋದ್ಯಮಗಳು ಮತ್ತು ನವೋದ್ಯಮ ಕಾರ್ಯಪರಿಸರಗಳು ಇದಕ್ಕೆ ಹೇಳಿ ಮಾಡಿಸಿದಂತಿವೆ ಎಂದು ಅವರು ವಿವರಿಸಿದ್ದಾರೆ.
ಕಾನ್ಸುಲೇಟ್ ಜನರಲ್ ಕಚೇರಿ
ಇದಕ್ಕೂ ಮೊದಲು ಸಚಿವ ಪಾಟೀಲರು, ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಆಸ್ಟ್ರೇಲಿಯಾದ ಕಾನ್ಸುಲೇಟ್ ಜನರಲ್ ಕಚೇರಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಸ್ಟ್ರೇಲಿಯಾವು ತನ್ನ ಕಾನ್ಸುಲೇಟ್ ಜನರಲ್ ಕಚೇರಿಗೆ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದು ಶ್ಲಾಘನೀಯವಾಗಿದೆ. ಈಗಾಗಲೇ ನಮ್ಮ ರಾಜಧಾನಿಯಲ್ಲಿ ಆಸ್ಟ್ರೇಲಿಯಾದ 40ಕ್ಕೂ ಹೆಚ್ಚು ಕಂಪನಿಗಳು ನೆಲೆಯೂರಿವೆ. ಆ ದೇಶವು ಕೂಡ ನಮ್ಮಲ್ಲಿ ನಡೆದುಕೊಂಡು ಬರುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶ, ಬೆಂಗಳೂರು ತಂತ್ರಜ್ಞಾನ ಶೃಂಗಸಭೆ, ಸ್ಪೇಸ್- ಎಕ್ಸ್ಪೋ ಮುಂತಾದವುಗಳಲ್ಲಿ ಪಾಲ್ಗೊಳ್ಳುತ್ತ ಬರುತ್ತಿದೆ. ಅಲ್ಲಿನ ಕ್ವೀನ್ಸ್ ಲ್ಯಾಂಡ್ ಮತ್ತು ವಿಕ್ಟೋರಿಯಾ ಪ್ರಾಂತ್ಯಗಳು ಬೆಂಗಳೂರಿನಲ್ಲೇ ತಮ್ಮ ವಾಣಿಜ್ಯ ವಹಿವಾಟು ಕಚೇರಿಗಳನ್ನು ಹೊಂದಿವೆ ಎಂದಿದ್ದಾರೆ.
ಕಾನ್ಸುಲೇಟ್ ಜನರಲ್ ಕಚೇರಿ ಆರಂಭದಿಂದ ನಮ್ಮ ದ್ವಿಪಕ್ಷೀಯ ಬಾಂಧವ್ಯವು ದೀರ್ಘಕಾಲೀನ ದೃಷ್ಟಿಕೋನದೊಂದಿಗೆ ಮುಂದುವರಿಯಲಿದೆ. ನಾವು ಅತ್ತ ಕಡೆಯಿಂದ ಹೂಡಿಕೆ, ಸಂಸ್ಥೆಗಳು ಮತ್ತು ನಾವೀನ್ಯತೆಯನ್ನು ನಮ್ಮಲ್ಲಿಗೆ ಬರುವುದನ್ನು ಎದುರು ನೋಡುತ್ತಿದ್ದೇವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಎರಡೂ ಕಾರ್ಯಕ್ರಮಗಳಲ್ಲಿ ಆಸ್ಟ್ರೇಲಿಯಾದ ಅಂತಾರಾಷ್ಟ್ರೀಯ ಶಿಕ್ಷಣ ಸಚಿವರಾದ ಜೂಲಿಯನ್ ಹಿಲ್, ಭಾರತದಲ್ಲಿರುವ ಆಸ್ಟ್ರೇಲಿಯನ್ ಹೈಕಮಿಷನರ್ ಫಿಲಿಫ್ ಗ್ರೀನ್, ಕೈಗಾರಿಕಾ ಇಲಾಖೆ ಆಯುಕ್ತರಾದ ಖುಷ್ಬು ಗೋಯಲ್, ಬೆಂಗಳೂರಿನಲ್ಲಿರುವ ಕಾನ್ಸುಲ್ ಜನರಲ್ ಹಿಲರಿ ಮೆಗಿಚಿ, ನ್ಯೂಸೌತ್ ವೇಲ್ಸ್ ವಿವಿ ಕುಲಪತಿ ಪ್ರೊ.ಆ್ಯಟಿಲಾ ಬ್ರಂಗ್ಸ್ ಭಾಗವಹಿಸಿದ್ದರು.
