Sunday, July 26, 2026
Homeಶಿಕ್ಷಣದಾಖಲಾತಿ ಆಂದೋಲನದಿಂದ ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಗೆ ಹೊಸ ಜೀವ

ದಾಖಲಾತಿ ಆಂದೋಲನದಿಂದ ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಗೆ ಹೊಸ ಜೀವ

ಗಂಗಾವತಿ, ಜು.23: ಕಳೆದ ವರ್ಷ ಕೇವಲ ನಾಲ್ಕು ವಿದ್ಯಾರ್ಥಿಗಳ ದಾಖಲಾತಿ ಇದ್ದ ಕಾರಣ ಮುಚ್ಚುವ ಹಂತಕ್ಕೆ ತಲುಪಿದ್ದ ನಗರದ ಗುಂಡಮ್ಮ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಳೀಯ ಯುವಕರ ತಂಡ ಹಾಗೂ ಶಿಕ್ಷಕರ ಜಂಟಿ ಪ್ರಯತ್ನದಿಂದ ದಾಖಲಾತಿ ಆಂದೋಲನ ನಡೆಸಿ ಉಳಿಸಿರುವುದು ಶ್ಲಾಘನೀಯ ಕಾರ್ಯ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಂಪನ್ಮೂಲ ವ್ಯಕ್ತಿ ಧನರಾಜ್ ತಿಳಿಸಿದ್ದಾರೆ.

ಗುಂಡಮ್ಮ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದ ಅವರು, ಹಿರಿಯರಾದ ಹೆಚ್. ಮಲ್ಲಿಕಾರ್ಜುನ ಹೊಸಕೇರಾ ಅವರ ನೇತೃತ್ವದ ಯುವಕರ ತಂಡ ಹಾಗೂ ಶಿಕ್ಷಕರೊಂದಿಗೆ ಚರ್ಚೆ ನಡೆಸಿದರು. ಅಲ್ಲದೆ, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಧನರಾಜ್, ರಾಜ್ಯದಲ್ಲಿ ಕಳೆದ ಒಂದು ದಶಕದಲ್ಲಿ ದಾಖಲಾತಿ ಕುಸಿದ ಹಿನ್ನೆಲೆಯಲ್ಲಿ ಸುಮಾರು 3,617 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ ಎಂದರು.

ಇದೀಗ ಮತ್ತಷ್ಟು 676 ಶಾಲೆಗಳು ವಿಲೀನದ ಹಂತದಲ್ಲಿರುವುದು ವಿಷಾದನೀಯ ಎಂದು ತಿಳಿಸಿದರು.

ಇಂತಹ ಪರಿಸ್ಥಿತಿಯನ್ನು ತಡೆಯಲು ಸ್ಥಳೀಯ ಜನತೆ, ಯುವಕರು ಹಾಗೂ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯವಾಗಿದೆ. ಕೇವಲ ಚರ್ಚೆಗಳಿಂದಲ್ಲ, ಕಾರ್ಯಪ್ರವೃತ್ತಿಯಿಂದಲೇ ಸರ್ಕಾರಿ ಶಾಲೆಗಳನ್ನು ಉಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಹೆಚ್ಚಿನ ಸುದ್ದಿ