Friday, May 29, 2026
Homeಜಿಲ್ಲಾ ಸುದ್ದಿಗಳುಕಲಬುರ್ಗಿವಿಧಾನ ಪರಿಷತ್‌ಗೆ ಭೀಮಣ್ಣ ಸಾಲಿ ನಾಮನಿರ್ದೇಶನಕ್ಕೆ ಆಗ್ರಹ: ಚಿತ್ತಾಪುರದಲ್ಲಿ ಕೋಲಿ ಸಮಾಜದ ಮುಖಂಡರ ಸುದ್ದಿಗೋಷ್ಠಿ

ವಿಧಾನ ಪರಿಷತ್‌ಗೆ ಭೀಮಣ್ಣ ಸಾಲಿ ನಾಮನಿರ್ದೇಶನಕ್ಕೆ ಆಗ್ರಹ: ಚಿತ್ತಾಪುರದಲ್ಲಿ ಕೋಲಿ ಸಮಾಜದ ಮುಖಂಡರ ಸುದ್ದಿಗೋಷ್ಠಿ

ಚಿತ್ತಾಪುರ:ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ, ತಿಪ್ಪಣ್ಣಪ್ಪ ಕಮಕನೂರ ಅವರ ಖಾಲಿಯಾಗಿರುವ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಭೀಮಣ್ಣ ಸಾಲಿ ಅವರಿಗೆ ಅವಕಾಶ ನೀಡಿ ನಾಮನಿರ್ದೇಶನ ಮಾಡಬೇಕೆಂದು ತಾಲೂಕು ಕೋಲಿ ಸಮಾಜದ ಮುಖಂಡರು ಬಲವಾಗಿ ಒತ್ತಾಯಿಸಿದ್ದಾರೆ.
ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಈ ಬೇಡಿಕೆಯನ್ನು ಮಂಡಿಸಲಾಯಿತು.

ಸುದೀರ್ಘ ರಾಜಕೀಯ ಸೇವೆ ಮತ್ತು ಹಿನ್ನೆಲೆ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಮುಖಂಡ ಬಸವರಾಜ ಚಿನ್ನಮಳ್ಳಿ, “ಭೀಮಣ್ಣ ಸಾಲಿ ಅವರು 1976 ರಿಂದಲೂ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ ದುಡಿದಿದ್ದಾರೆ. ಪಕ್ಷದ ಸದಸ್ಯರಾಗಿ, ತಾಲೂಕು ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2009 ರಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ,” ಎಂದು ಸ್ಮರಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಲಿ ಅವರ ಸೇವೆಯನ್ನು ಪರಿಗಣಿಸಿ ವಿಧಾನ ಪರಿಷತ್ತಿಗೆ ಅವಕಾಶ ನೀಡಬೇಕೆಂದು ಅವರು ಮನವಿ ಮಾಡಿದರು.
ಹಿರಿಯ ಮುಖಂಡ
ಹಣಮಂತ ಸಂಕನೂರ ಮಾತನಾಡಿ, 1978 ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಸಾಲಿ ಅವರು, ನಂತರ ಮಂಡಲ ಪಂಚಾಯಿತಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಜನಸೇವೆ ಮಾಡಿದ್ದಾರೆ. ಯಲ್ಲಮ್ಮ ದೇವಿ ದೇವಸ್ಥಾನ ಸಮಿತಿ, ಭೂ ನ್ಯಾಯ ಮಂಡಳಿ, ನಗರ ಆಶ್ರಯ ಸಮಿತಿ ಹಾಗೂ ಕೇಂದ್ರ ಸರ್ಕಾರದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ಮತ್ತು 21 ತಿಂಗಳ ಕಾಲ ಕೆಕೆಆರ್‌ಟಿಸಿ ನಿಗಮದ ಅಧ್ಯಕ್ಷರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ ಎಂದು ವಿವರಿಸಿದರು.

ಸಾಮಾಜಿಕ ನ್ಯಾಯದ ಒತ್ತಾಯ:
ತಾಲೂಕು ಗೌರವಾಧ್ಯಕ್ಷ ರಾಮಲಿಂಗ ಬಾನರ್ ಮಾತನಾಡಿ, “ಚಿತ್ತಾಪುರ ತಾಲೂಕಿಗೆ ವಿಧಾನ ಪರಿಷತ್ತಿನಲ್ಲಿ ಇಲ್ಲಿಯವರೆಗೆ ಅವಕಾಶ ಸಿಕ್ಕಿಲ್ಲ. ಈ ಬಾರಿ ಹಿಂದುಳಿದ ಕೋಲಿ ಸಮಾಜದ ಮುಖಂಡರಾದ ಭೀಮಣ್ಣ ಸಾಲಿ ಅವರಿಗೆ ಅವಕಾಶ ನೀಡುವ ಮೂಲಕ ತಾಲೂಕಿನ ಕೋಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕು,” ಎಂದು ಆಗ್ರಹಿಸಿದರು.
ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ದೇವಿಂದ್ರ ಅರಣಕಲ್ ಮಾತನಾಡಿ, ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ಸಾಲಿ ಅವರ ಪಾತ್ರ ದೊಡ್ಡದು. ತಮ್ಮ ಸರಳ, ಸಜ್ಜನಿಕೆ ವ್ಯಕ್ತಿತ್ವದಿಂದ ‘ಅಜಾತ ಶತ್ರು’ ಎನಿಸಿಕೊಂಡಿರುವ ಸಾಲಿ ಅವರಿಗೆ ಅವಕಾಶ ನೀಡಲೇಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದವರು:
ಸುದ್ದಿಗೋಷ್ಠಿಯಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ ನಗರಾದ್ಯಕ್ಷ ಪ್ರಭು ಹಳಕಟಿ, ಕಾಂಗ್ರೆಸ್ ಯುವ ಅಧ್ಯಕ್ಷ ದೇವಿಂದ್ರ ಯಬಾಳ, ಮುಖಂಡರಾದ ಶರಣಪ್ಪ ನಾಶಿ, ರಾಜೇಂದ್ರಪ್ಪ ಅರಣಕಲ್, ಭೀಮರಾಯ ಹೊತಿನಮಡಿ, ಇಂದುಶೇಖರ ಬೆಂಕಿ, ಮುನಿಯಪ್ಪ ಕೊಳ್ಳಿ, ನಾಗೇಂದ್ರ ಜೈಗಂಗಾ, ಶ್ರೀಶೈಲ ಇಂಗಳಗಿ, ಲಕ್ಷ್ಮೀಕಾಂತ ಸಾಲಿ, ಸಿದ್ದಣ್ಣ ನಾಲವಾರ, ವಿಶ್ವನಾಥ ಕುಂಬಾರ, ಶರಣು ಡೋಣಗಾಂವ, ಕರಣಕುಮಾರ ಅಲ್ಲೂರ, ಬಸವರಾಜ ಜಕಾತಿ, ಸಂತೋಷ ಮಳಬಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ