Sunday, May 17, 2026
Homeಕ್ರೈಂ ಸುದ್ದಿಗಳುಕೊಲ್ಲಾಪುರ ಮೂಲದ ಇಬ್ಬರು ಖತರ್ನಾಕ್ ಕಳ್ಳಿಯರು ಪೊಲೀಸ್ ಜಾಲಕ್ಕೆ; 4 ಪ್ರಮುಖ ಪ್ರಕರಣಗಳು ಪತ್ತೆ

ಕೊಲ್ಲಾಪುರ ಮೂಲದ ಇಬ್ಬರು ಖತರ್ನಾಕ್ ಕಳ್ಳಿಯರು ಪೊಲೀಸ್ ಜಾಲಕ್ಕೆ; 4 ಪ್ರಮುಖ ಪ್ರಕರಣಗಳು ಪತ್ತೆ

ಅಥಣಿ: ತಾಲೂಕಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಜನದಟ್ಟಣೆಯನ್ನು ಬಂಡವಾಳ ಮಾಡಿಕೊಂಡು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಅಂತರರಾಜ್ಯ ಮಹಿಳಾ ಕಳ್ಳಿಯರ ಜಾಲವನ್ನು ಭೇದಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 6 ಲಕ್ಷದ 80 ಸಾವಿರ ರೂಪಾಯಿ ಮೌಲ್ಯದ 42.5 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ರಾಜಾರಾಮಪುರಿ (ಟಾಕಳಿ ನಾಕಾ, ಮಾಳಿ ಕಾಲೋನಿ) ನಿವಾಸಿಗಳಾದ ಶ್ರೀಮತಿ ಹೇಮಾ ಧರ್ಮೇಂದ್ರ ಕಸಬೇಕರ ಹಾಗೂ ಶ್ರೀಮತಿ ನೀಲಂ ವಿಜಯ ಕಾಂಬಳೆ ಬಂಧಿತ ಆರೋಪಿಗಳಾಗಿದ್ದಾರೆ.

ಇವರನ್ನು ಮಾರ್ಚ್ 24ರಂದು ನಂದಗಾವ ನಿವಾಸಿ ಶ್ರೀಮತಿ ಪುತಳವ್ವಾ ಷನ್ಮುಕ ಕಾಂಬಳೆ ಅವರು ಅಥಣಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ, ಜನದಟ್ಟಣೆಯನ್ನು ಬಳಸಿಕೊಂಡ ಕಳ್ಳಿಯರು ಅವರ ಕೊರಳಿನಲ್ಲಿದ್ದ ಬಂಗಾರದ ಬೋರಮಾಳವನ್ನು ಕಳವು ಮಾಡಿದ್ದರು. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 223/2026 ರನ್ವಯ ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಈ ಸರಣಿ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ (SP) ಶ್ರೀ ಕೆ. ರಾಮರಾಜನ್ ಐಪಿಎಸ್, ಹೆಚ್ಚುವರಿ ಎಸ್‌ಪಿ ಶ್ರೀ ಆರ್. ಬಿ. ಬಸರಗಿ ಹಾಗೂ ಅಥಣಿ ಡಿಎಸ್‌ಪಿ ಶ್ರೀ ಪ್ರಶಾಂತ್ ಮುನ್ನೋಳಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಅಥಣಿ ವೃತ್ತದ ಸಿಪಿಐ ಶ್ರೀ ಸಂತೋಷ್ ಹಳ್ಳೂರ್ ನೇತೃತ್ವದಲ್ಲಿ, ಪಿಎಸ್‌ಐಗಳಾದ ಶ್ರೀ ಜಿ. ಎಸ್. ಉಪ್ಪಾರ ಮತ್ತು ಶ್ರೀ ಮಲ್ಲಿಕಾರ್ಜುನ ತಳವಾರ ಅವರ ಮುಂದಾಳತ್ವದ ಅಪರಾಧ ತನಿಖಾ ತಂಡವು ಮೇ 16 ರಂದು ಆರೋಪಿಗಳನ್ನು ಹೆಡೆಮುರಿ ಕಟ್ಟಿದೇ.
ಬಂಧಿತರಿಂದ ಪ್ರಸ್ತುತ ಪ್ರಕರಣದ ಆಭರಣ ಮಾತ್ರವಲ್ಲದೆ, ಅಥಣಿ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದ್ದ ಅಪರಾಧ ಸಂಖ್ಯೆ 394/2025, 358/2026 ಹಾಗೂ 370/2026 ನೇ ಪ್ರಕರಣಗಳಿಗೆ ಸಂಬಂಧಿಸಿದ 35.5 ಗ್ರಾಂ ಚಿನ್ನಾಭರಣಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಒಟ್ಟು 4 ಕಳ್ಳತನ ಪ್ರಕರಣಗಳು ಇತ್ಯರ್ಥಗೊಂಡಂತಾಗಿದೆ.

ಚಾಣಾಕ್ಷತನದಿಂದ ಕಳ್ಳರನ್ನು ಪತ್ತೆಹಚ್ಚಿದ ತನಿಖಾ ತಂಡದಲ್ಲಿದ್ದ ಪೊಲೀಸ್ ಸಿಬ್ಬಂದಿಗಳಾದ ಎ. ಎ. ಈರಕರ, ಶ್ರೀಮತಿ ಜೆ. ಆರ್. ಅಸೋದೆ, ಮಹಾಂತೇಶ ಪಾಟೀಲ, ಎ. ಬಿ. ಹೊಸಲ್ಕರ, ಎಮ್. ಎಮ್. ಖೋತ, ವಿ. ವಿ. ಗಾಯಕವಾಡ, ಎಸ್. ಎಸ್. ಸನದಿ, ಜೆ. ಹೆಚ್. ಡಾಂಗೆ, ಭೀ. ಎಮ್. ತಳವಾರ, ಕುಮಾರಿ ಜೆ. ಎಸ್. ಬೆಕ್ಕೇರಿ ಹಾಗೂ ಬೆಳಗಾವಿ ತಾಂತ್ರಿಕ ವಿಭಾಗದ ವಿನೋಧ ಠಕ್ಕಣ್ಣವರ ಅವರ ಕಾರ್ಯವೈಖರಿಯನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು (SP) ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಹೆಚ್ಚಿನ ಸುದ್ದಿ