ವಿಜಯಪುರ: ಜಿಲ್ಲೆಯಲ್ಲಿ ಮೀನುಗಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಚಡಚಣ ತಾಲೂಕಿನ ಚಣೆಗಾವ ಗ್ರಾಮ ಸಮೀಪದ ಭೀಮಾ ನದಿಯ ಹಿಂಗಣಿ ಬ್ಯಾರೆಜ್‌ನಲ್ಲಿ ಏಪ್ರಿಲ್ 2ರಂದು ಮೀನುಮರಿ ಬಿತ್ತನೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಮಧ್ಯಾಹ್ನ 2:30ರ ಸುಮಾರಿಗೆ ನಾರಾಯಣಪುರದ ಮೀನುಮರಿ ಪಾಲನಾ ಕೇಂದ್ರದಲ್ಲಿ ಬೆಳೆಸಿದ ಸಿ.ಸಿ. ಜಾತಿಯ ಮೀನುಮರಿಗಳನ್ನು ತರಲಾಗಿದ್ದು, ಬೆಳಗಾವಿ ವಲಯದ ಮೀನುಗಾರಿಕೆ ಜಂಟಿ ನಿರ್ದೇಶಕರಾದ ಶ್ರೀ ಎಲ್. ಕುಮಾರ ಅವರ ಸಮ್ಮುಖದಲ್ಲಿ ನದಿಗೆ ಬಿತ್ತನೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಜಯಪುರದ ಮೀನುಗಾರಿಕೆ ಉಪ ನಿರ್ದೇಶಕರಾದ ಶ್ರೀ ಎಂ.ಹೆಚ್. ಬಾಂಗಿ, ನಾರಾಯಣಪುರದ ಉಪ ನಿರ್ದೇಶಕರಾದ ಶ್ರೀ ಎಸ್.ಎಲ್. ಸುರಗಿಹಳ್ಳಿ, ಸಹಾಯಕ ನಿರ್ದೇಶಕರಾದ ಶ್ರೀ ಎಸ್.ಎಸ್. ಗಂಗನಳ್ಳಿ, ಹಿರಿಯ ಮೇಲ್ವಿಚಾರಕರಾದ ಶ್ರೀ ಎಂ.ಬಿ. ಪೂಜೇರಿ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ಇದೇ ವೇಳೆ ಚಣೆಗಾವ ಮೀನುಗಾರಿಕೆ ಸಹಕಾರಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದು, ಈ ಬಿತ್ತನೆ ಕಾರ್ಯದಿಂದ ಭೀಮಾ ನದಿಯಲ್ಲಿ ಮೀನು ಸಂಪತ್ತು ಹೆಚ್ಚಾಗಿ, ಮೀನುಗಾರರ ಆದಾಯ ಹೆಚ್ಚಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮೀನುಗಾರಿಕೆ ಇಲಾಖೆಯ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
