Sunday, March 22, 2026
Homeಕ್ರೀಡೆಕೊರಳಿಗೆ ಪದಕಗಳ ಹಾರ, ಅದೇ ಕೊರಳಿಗೆ ನೇಣಿನ ಕುಣಿಕೆ! ಕೆವಲ ಪ್ರತಿಭಟನೆ ಇಂತ ಶಿಕ್ಷೆ ನ್ಯಾಯವೆ.?

ಕೊರಳಿಗೆ ಪದಕಗಳ ಹಾರ, ಅದೇ ಕೊರಳಿಗೆ ನೇಣಿನ ಕುಣಿಕೆ! ಕೆವಲ ಪ್ರತಿಭಟನೆ ಇಂತ ಶಿಕ್ಷೆ ನ್ಯಾಯವೆ.?

ಯಾವ ದೇಶದ ಮಣ್ಣಿನ ನಂಟಿನಿಂದ ಕುಸ್ತಿ ಅಖಾಡದಲ್ಲಿ ಎದುರಾಳಿಗಳನ್ನು ಮಣ್ಣು ಮುಕ್ಕಿಸಿ ಇರಾನ್ ಧ್ವಜವನ್ನು ಎದೆಯುಬ್ಬಿಸಿ ಹಾರಾಡುವಂತೆ ಮಾಡಿದ್ದನೋ, ಅದೇ ಮಣ್ಣಿನ ಆಡಳಿತಗಾರರು ಇಂದು ಸಲೇಹ್ ಮೊಹಮ್ಮದಿ ಎಂಬ 19ರ ಹರೆಯದ ಚಿಗುರು ಮೀಸೆಯೂ ಸರಿಯಾಗಿ ಮೂಡದ ತರುಣನ ಉಸಿರನ್ನು ಹಿಸುಕಿ ಹಾಕಿದ್ದಾರೆ. ಅಖಾಡದಲ್ಲಿ ಎದುರಾಳಿಯ ಮೇಲೆ ಸವಾರಿ ಮಾಡಿ ಪದಕಗಳನ್ನು ಗೆದ್ದಾಗ ಯಾವ ಕುತ್ತಿಗೆಗೆ ಮುತ್ತಿನ ಹಾರಗಳು ಬಿದ್ದಿದ್ದವೋ, ಅದೇ ಕುತ್ತಿಗೆಗೆ ಇಂದು ಕ್ರೂರ ಆಡಳಿತದ ನೇಣಿನ ಕುಣಿಕೆ ಬಿದ್ದಿದೆ. ಕ್ರೀಡೆಯ ಅಖಾಡದಲ್ಲಿ ಗೆದ್ದವನು ಬದುಕಿನ ಅಖಾಡದಲ್ಲಿ ಸರ್ವಾಧಿಕಾರದ ಅಟ್ಟಹಾಸಕ್ಕೆ ಸೋತು ಹೋದನೇ? ಅವನಿಗೆಕೇವಲ 19 ವರ್ಷ.. ಇದು ಕನಸುಗಳನ್ನು ಕಟ್ಟಿಕೊಳ್ಳುವ ವಯಸ್ಸು. ಕುಸ್ತಿ ಪಂದ್ಯ ನೋಡುವವರಿಗೆ ಈ ಮುಖ ಚೆನ್ನಾಗಿ ಪರಿಚಯ ಇದೆ. ಸಲೇಹ್ ಮತ್ತು ಆತನ ಸಂಗಡಿಗರಾದ ಸಯೀದ್ ದಾವೂದಿ ಮತ್ತು ಮೆಹದಿ ಘಾಸೆಮಿ ಪಾಲಿಗೆ ಇದು ಬದುಕಿನ ಕೊನೆಯ ಪಯಣ. ಜನವರಿ 2026ರ ಪ್ರತಿಭಟನೆಯಲ್ಲಿ ಭಾಗಿಯಾದರು ಎಂಬ ಒಂದೇ ಕಾರಣಕ್ಕೆ, ಪೊಲೀಸ್ ಹತ್ಯೆಯ ಆರೋಪ ಹೊರಿಸಿ, ಚಿತ್ರಹಿಂಸೆ ನೀಡಿ, ನ್ಯಾಯಾಲಯದ ಕಟಕಟೆಯಲ್ಲೂ ಕನಿಷ್ಠ ಮಾನವೀಯತೆ ತೋರದೆ ಈ ಯುವಕರನ್ನು ಸಾರ್ವಜನಿಕವಾಗಿ ನೇಣಿಗೇರಿಸಲಾಗಿದೆ. ಇರಾನ್ ಸರ್ಕಾರ “ಭಯ” ಬಿತ್ತುವ ತನ್ನ ಹಳೆಯ ಹಾದಿಯನ್ನೇ ಹಿಡಿದಿದೆ. ಬಲಶಾಲಿ ಕುಸ್ತಿಪಟುವೊಬ್ಬನ ದೇಹ ನೇಣಿನಲ್ಲಿ ತೂಗಾಡುತ್ತಿರಬಹುದು, ಆದರೆ ಆತನ ಕುತ್ತಿಗೆಗೆ ಬಿದ್ದ ನೇಣಿನ ಕುಣಿಕೆ ಇಡೀ ವಿಶ್ವದ ಮಾನವೀಯತೆಯ ಕುತ್ತಿಗೆಗೆ ಬಿದ್ದ ಹಗ್ಗದಂತೆ ಭಾಸವಾಗುತ್ತಿದೆ.

ಹೆಚ್ಚಿನ ಸುದ್ದಿ