ಶಿಗ್ಗಾವಿ: ಬಂಜಾರ ಸಮುದಾಯದ ಆರಾಧ್ಯ ದೈವ, ಕುಲಗುರು ಸಂತ ಶ್ರೀ ಸೇವಾಲಾಲ ಮಹಾರಾಜರ 287ನೇ ಜಯಂತಿ ಪ್ರಯುಕ್ತ ಶಿಗ್ಗಾವಿ ತಾಲೂಕಿನ ಮಮದಾಪುರ ತಾಂಡದಲ್ಲಿ ಶನಿವಾರ ಬೆಳಿಗ್ಗೆ ಗ್ರಾಮಸ್ಥರು ಸಂತ ಸೇವಾಲಾಲರ ಭೋಗ ಕಾರ್ಯಕ್ರಮವನ್ನು ವಿಧಿ ವಿಧಾನಗಳೊಂದಿಗೆ ಆಚರಿಸಿ, ಪೂಜೆ–ಅರ್ಚನೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ಬಳಿಕ ಲಂಬಾಣಿಗರ ವಾದ್ಯ ವಜಾ ಮೇಳದೊಂದಿಗೆ, ಘೋಷಣೆಗಳೊಂದಿಗೆ ಸಂತ ಸೇವಾಲಾಲರ ಜನ್ಮಸ್ಥಳವಾದ ಭಾಯಘಡ (ನ್ಯಾಮತಿ ತಾಲೂಕು, ದಾವಣಗೆರೆ ಜಿಲ್ಲೆ) ಕಡೆಗೆ ಭಕ್ತಿಪೂರ್ವಕವಾಗಿ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಲಂಬಾಣಿ/ಬಂಜಾರ ಜನಾಂಗದ ಸಾಂಪ್ರದಾಯಿಕ ವೇಷಭೂಷಣೆ, ಡೊಳ್ಳು–ತಾಸೆಗಳ ನಾದ ಮತ್ತು ಸಮುದಾಯದ ಏಕತೆ ವಿಶೇಷವಾಗಿ ಗಮನ ಸೆಳೆಯಿತು. ಸಂತ ಸೇವಾಲಾಲ ಮಹಾರಾಜರು ಬೋಧಿಸಿದ ಸತ್ಯ, ನೀತಿ, ಶಾಂತಿ ಮತ್ತು ಸಮಾಜ ಸೇವೆಯ ಸಂದೇಶಗಳನ್ನು ಭಕ್ತರು ಸ್ಮರಿಸಿದರು.
ಮಮದಾಪುರ ತಾಂಡದ ಪ್ರಮುಖರಾದ ಚಂದ್ರು ನಾಯಕ್, ಭೀಮಣ್ಣ, ಚಂದ್ರಪ್ಪ, ರುದ್ರಪ್ಪ, ಈರಪ್ಪ, ಜಯಂತ್, ಯಮನಪ್ಪ, ಎಗಪ್ಪ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಒಟ್ಟಾರೆ, ಭೋಗ ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಹಾಗೂ ಸಮುದಾಯದ ಏಕತೆಯ ಪ್ರತೀಕವಾಗಿ ನೆರವೇರಿತು.

ವರದಿ.ಸೋಮಶೇಖರ ಲಮಾಣಿ
