Saturday, September 26, 2026
Homeಜಿಲ್ಲಾ ಸುದ್ದಿಗಳುನಮ್ಮೂರ ಜಾತ್ರೆಯ ಪ್ರೇರಕ ಶಕ್ತಿ

ನಮ್ಮೂರ ಜಾತ್ರೆಯ ಪ್ರೇರಕ ಶಕ್ತಿ

ಹಂದಿಗುಂದ: ಮಹಾಶಿವಯೋಗಿಗಳು ಲಿಂಗವೇ ತಾವು, ತಾವೇ ಅಂಗವಾದ ಮಹಾಲಿಂಗ ರೂಪಿಗಳು. ಅವರ ನೋಟ ಪರುಷ, ನುಡಿದುದೆಲ್ಲ ಪಾವನ : ಅವರ ನೆನಹು ನಿರಂತರ. ಶ್ರೀಮಠದ ಪಾವನ ಹಂದಿಗುಂದ ಶ್ರೀ ಸಿದ್ದೇಶ್ವರಮಠದ ಮೂಲಕತೃಗಳಾದ ಶ್ರೀ ಸಿದ್ದೇಶ್ವರ ಪರಂಪರೆಯನ್ನು ಮುಂದುವರೆಸಿದವರು ಮಹಾತಪಸ್ವಿಗಳಾದ ಶ್ರೀ ಗುಬ್ಬೆಪ್ಪನವರು ಬೆಳಗಿದವರು ಪೂಜ್ಯ ಶ್ರೀಕಲ್ಲಯ್ಯಪ್ಪಗಳು. ಅವರೆಲ್ಲರ ಅಂತಃಕರಣದ ಹರಕೆಯಿಂದಾಗಿ ನಂತರದಲ್ಲಿ ದೀಪದ ಮಂಕು ಕಡಿದು ಬತ್ತಿಯ ಮುಂಚಾಚಿ ಪ್ರಜ್ವಲ ಮಾನವಾಗಿ ನಮ್ಮೂರ ಜಾತ್ರೆಗೆ ಇಂದು ಬಂಗಾರದ ಹಬ್ಬದ ಸಂಭ್ರಮ. ನಮಗೆಲ್ಲ ಖುಷಿಯೋ ಖುಷಿ.

ಪಾತ್ರೆ ಲಟ್ಟಣಿಗೆ ಬಳೆ ಸರ ಕುಂಕುಮದ ಭರಣಿಗಳನ್ನು ಕೊಂಡ ಗೃಹಿಣಿಯ ಸಂಭ್ರಮ, ಜಾತ್ರೆ ಎಂದರೆ ಬರೀ ತೇರು ಎಳೆಯುವುದಲ್ಲ. ಆಟಿಕೆಗಳನ್ನು ಕೊಂಡ ಮಗುವಿನ ಖುಷಿ ಎತ್ತುಗಳಿಗೆ ಕೋಂಬೆನಸು ಹಣೆ ಹಗ ಕೊಂಡ ರೈತನ ಹುರುಪ ನೋಡಬೇಕು ಚಂದದ ಹೊಸ ಬಟ್ಟೆಗಳನ್ನು ತೊಟ್ಟ ಹುರುಪಿನ ತಿರುಗಾಟ ಸಂಭ್ರಮವೋ ಸಂಭ್ರಮ ತೇರಿಗೆ ಎಸೆಯುವ ಪ್ರತಿ ಬೆಂಡು ಬೆತ್ತಾಸು ಬಾಳೆಹಣ್ಣುಗಳಲ್ಲಿ ಒಂದೊಂದು ಜೀವದ ಕನಸಿರುತ್ತದೆ. ದೇವರಿಗೆ ಒಡೆಯುವ ಪ್ರತಿ ತೆಂಗಿನಕಾಯಿಯಲ್ಲಿ ಒಂದಿಹುದು ಸಾಹಾರದ ತಲ್ಲಣದ ಪ್ರಾರ್ಥನೆ ಇರುತ್ತದೆ. ನಮ್ಮೂರ ಜಾತ್ರೆ ಕೇವಲ ಮೋಜು ಮನರಂಜನೆಗಳಿಗೆ ಸೀಮಿತವಾಗಿರದೆ ಈ ನಾಡಿನ ಧಾರ್ಮಿಕ ಸಾಂಸ್ಕೃತಿಕ ಜಾನಪದ ಉತ್ಸವವಾಗಿ ರೂಪುಗೊಂಡಿರುವುದು ನಮ್ಮೆಲ್ಲರ ಹೆಮ್ಮೆ ಅಭಿಮಾನ. ಬೆಳಗಾವಿ ಜಿಲ್ಲಾ ಜಾನಪದ ಕಲಾಮೇಳ, ರಾಯಭಾಗ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕೃಷಿ ಸಮ್ಮೇಳನ ಧರ್ಮ ಜಾಗೃತಿ ಪಾದಯಾತ್ರೆ ಮುಂತಾದವುಗಳು ನಮ್ಮೂರ ಜಾತ್ರೆಯ ಅಚ್ಚಳಿಯದ ಹೆಜ್ಜೆಗಳೆಂದರೆ ಹೆಚ್ಚೇನು ಹೇಳಿದಂತಲ್ಲ.

ನಮ್ಮೂರ ಹಳ್ಳ ಬತ್ತುವುದಿಲ್ಲ. ನಮ್ಮೂರ ಹುಲ್ಲು ಒಣಗುವುದಿಲ್ಲ, ನಮ್ಮೂರ ತೋಟ ಬಾಡುವುದಿಲ್ಲ. ನಮ್ಮೂರ ರಾಸು ಸೊರಗುವುದಿಲ್ಲ, ನಮ್ಮೂರ ಜನರು ಮರಗುವುದಿಲ್ಲ. ನಮ್ಮೂರ ಮಕ್ಕಳು ಕೊರಗುವುದಿಲ್ಲ. ನಮ್ಮೂರ ಸಿರಿಯು ಕರಗುವುದಿಲ್ಲ. ನಮ್ಮೂರ ಶಾಲೆಯ ಸೋಲುವುದಿಲ್ಲ. ನಮ್ಮೂರ ಜಾತ್ರೆ ನಿಲ್ಲುವುದಿಲ್ಲ.

ನಮ್ಮೂರ ಜಾತ್ರೆಯ ಬಂಗಾರದ ಹಬ್ಬ ಸಂಭ್ರಮವೋ ಸಂಭ್ರಮ, ಬನ್ನಿ ನಮ್ಮೂರ ಒಡೆಯನ ಅಭಿಮಾನದ ಜಾತ್ರೆಗೆ ನಿಮಗಿದು ಪ್ರೀತಿಯ ಆಮಂತ್ರಣ ನಿಮಂತ್ರಣ.

ವರದಿಗಾರ: ಹನಮಂತ ಬಿರಾದಾರ್ ಪಾಟೀಲ

ಹೆಚ್ಚಿನ ಸುದ್ದಿ