ಸಿಎಂ ಸಿದ್ದರಾಮಯ್ಯ ದಾಖಲೆ ಬರೆದಿದ್ದಾರೆ. ಸಿಎಂ ಆಡಳಿತದ ಬಗ್ಗೆ ಚರ್ಚೆಯ ಅವಶ್ಯಕತೆ ಇಲ್ಲ. ಆದ್ದರಿಂದ ಇನ್ನಾದ್ರೂ ಸಿಎಂ ಪಟ್ಟ ತ್ಯಾಗ ಮಾಡಲಿ’ ಎಂದು ಸಿದ್ದರಾಮಯ್ಯ ಅವರಿಗೆ ಡಿಕೆಶಿ ಆಪ್ತ ಎಚ್.ಸಿ ಬಾಲಕೃಷ್ಣ (HC Balakrishna) ಅವರ ಪರೋಕ್ಷವಾಗಿ ಮನವಿ ಮಾಡಿದ್ದಾರೆ.
ದಿವಂಗತ ಮಾಜಿ ಸಿಎಂ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಅವರು ಸರಿಗಟ್ಟಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಲಕೃಷ್ಣ, ‘ಸಿದ್ದರಾಮಯ್ಯ ಆಡಳಿತದ ಬಗ್ಗೆ ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ. ಸಿಎಂ ಸಿದ್ದರಾಮಯ್ಯ ದಾಖಲೆ ಬರೆದಿದ್ದಾಯ್ತು. ಹೊಸ ನಾಯಕತ್ವಕ್ಕೆ ಅವಕಾಶ ಕೊಡುವ ವಿಶ್ವಾಸ ಇದೆ’ ಎಂದು ಎಚ್.ಸಿ ಬಾಲಕೃಷ್ಣ ಹೇಳಿದ್ದಾರೆ.
‘ಪಕ್ಷಕ್ಕಾಗಿ ನಾಯಕತ್ವ ಬೆಳೆಸುವ ವಿಶ್ವಾಸ ಇದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಸುಮ್ಮನೆ ಕುಳಿತಿಲ್ಲ. ಆದರೆ, ಸಿದ್ದರಾಮಯ್ಯ ಆಡಳಿತ ಮೆಚ್ಚಿ ಜನ ವೋಟ್ ಹಾಕಿದ್ದಾರೆ. ಹೈಕಮಾಂಡ್ ಸಾಧಕ ಬಾಧಕಗಳ ಚರ್ಚೆ ಮಾಡುತ್ತಿದೆ’ ಎಂದು ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ಹೇಳಿದ್ದಾರೆ.
2027ರ ಬಜೆಟ್ನ್ನೂ ಸಿದ್ದರಾಮಯ್ಯ ಮಂಡಿಸುತ್ತಾರೆ
‘2027ರ ಬಜೆಟ್ನ್ನೂ ಸಿದ್ದರಾಮಯ್ಯ ಮಂಡಿಸುತ್ತಾರೆ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆತ್ಮವಿಶ್ವಾಸದ ಮಾತಾಡಿದ್ದಾರೆ. ‘ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಇರ್ತಾರೆ ಅಂತ ಭಾವಿಸಿದ್ದೇವೆ. ಈಗಾಗಲೇ ಎರಡೂವರೆ ವರ್ಷ ಮುಗಿಸಿದ್ದಾರೆ. ಸಿಎಂ ಆಗಿ ಪೂರ್ಣಾವಧಿ ಮುಗಿಸುವ ವಿಶ್ವಾಸವಿದೆ’ ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು.
‘ದೇವರಾಜ ಅರಸು ಸುದೀರ್ಘ ಸೇವೆಯ ನಂತರ ಸಿಎಂ ಸಿದ್ದರಾಮಯ್ಯ ಸೇವೆ ಮುಂದುವರಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ, ನಮಗೆ ಇದೊಂದು ಹೆಮ್ಮೆಯ ವಿಷಯವಾಗಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಸಾಕಷ್ಟು ಶ್ರಮಪಟ್ಟಿದ್ದಾರೆ, ಹೋರಾಟ ಮಾಡಿದ್ದಾರೆ. ಸಿದ್ದರಾಮಯ್ಯನವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಮೌನಕ್ಕೆ ಶರಣಾದ ಡಿಕೆಶಿ ಬೆಂಬಲಿಗರು!
ಸರಿಯಾದ ಸಮಯಕ್ಕೆ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಸಜ್ಜಾಗ್ತಿದ್ರೆ, ಪಂಚ ರಾಜ್ಯಗಳ ಚುನಾವಣೆಗಳು ಹೈಕಮಾಂಡ್ ಎದೆ ಮೇಲೆ ಬಂದು ನಿಂತಿದೆ. ಇದರ ಜೊತೆ ಹೊಸ ವರ್ಷಕ್ಕೆ ಗುಡ್ ನ್ಯೂಸ್ ಏನಾದ್ರೂ ಸಿಕ್ತೋ ಏನೋ? ಸಿದ್ದರಾಮಯ್ಯ ನಿರಾಳರಂತೆ ಕಾಣಿಸ್ತಿದ್ದಾರೆ. ಸಂಕ್ರಾಂತಿ ಬಳಿಕ ಪುನಾರಚನೆಗೆ ಗ್ರೀನ್ಸಿಗ್ನಲ್ ಪಡೆಯುವ ಸಾಧ್ಯತೆ ಇದೆ.
ಕ್ಯಾಬಿನೆಟ್ಗೆ ಸೇರ್ಪಡೆ ಮಾಡಿಕೊಳ್ಳಲು ಪ್ಲಾನ್!
ಕುರುಕ್ಷೇತ್ರದಲ್ಲಿ ಕಳೆದ ನಾಲ್ಕು ತಿಂಗಳಿಂದ ನೆನೆಗುದಿಗೆ ಬಿದ್ದ ಸಂಪುಟ ಪುನಾರಚನೆಗೆ ಮತ್ತೆ ಜೀವ ಬಂದಿದೆ.. ಸಂಪುಟ ಪುನಾರಚನೆಗೆ ಸಿಎಂ ಮುಹೂರ್ತ ಫಿಕ್ಸ್ ಮಾಡ್ಕೊಳ್ಳಲು ಸಜ್ಜಾಗಿದ್ದಾರೆ.. ಯಾರನ್ನ ಕೈಬಿಡಬೇಕೆಂದು ತೀರ್ಮಾನ ಮಾಡಿರುವ ಸಿಎಂ, ಈ ಬಗ್ಗೆ ರಾಹುಲ್ ಗಾಂಧಿ ಬಳಿ ಗ್ರೀನ್ಸಿಗ್ನಲ್ ಪಡೆಯಲು ತಯಾರಿ ನಡೆಸಿದ್ದಾರೆ.
ರಾಹುಲ್ ಗಾಂಧಿ ವಿದೇಶದಿಂದ ಬಂದ ನಂತ್ರ ನಾಯಕತ್ವ ಹಸ್ತಾಂತರ ಮಾಡ್ತಾರೆ ಎನ್ನುತ್ತಿದ್ದ ಆಪ್ತರು, ಈಗ ಮೌನಕ್ಕೆ ಜಾರಿದ್ದಾರೆ. ಸದ್ಯ ಹೈಕಮಾಂಡ್ ಚಿತ್ತವೆಲ್ಲಾ ಪಂಚ ರಾಜ್ಯಗಳ ಚುನಾವಣೆಯತ್ತ ನೆಟ್ಟಿದೆ. ಹೀಗಾಗಿ ರಾಜ್ಯದ ನಾಯಕತ್ವ ಗೊಂದಲಗಳ ಬಗ್ಗೆ ತಲೆಕೆಡಿಸಿಕೊಳ್ತಿಲ್ಲ. ಇನ್ನೊಂದ್ಕಡೆ ದಾಖಲೆಯ 17ನೇ ಬಜೆಟ್ಗೆ ಸಿಎಂ ಸಿದ್ಧತೆ ಶುರು ಮಾಡಿದ್ದಾರೆ.
