Wednesday, August 12, 2026
Homeಉದ್ಯೋಗ50 ಸಾವಿರ ಉದ್ಯೋಗ ಸೃಷ್ಟಿಸುವ ಯೋಜನೆಗೆ ಕಾಂಗ್ರೆಸ್ ಅಡ್ಡಗಾಲು : ಯುವಜನ ಸೇವಾ ಸಂಸ್ಥೆ ಖಂಡನೆ.

50 ಸಾವಿರ ಉದ್ಯೋಗ ಸೃಷ್ಟಿಸುವ ಯೋಜನೆಗೆ ಕಾಂಗ್ರೆಸ್ ಅಡ್ಡಗಾಲು : ಯುವಜನ ಸೇವಾ ಸಂಸ್ಥೆ ಖಂಡನೆ.

ಯಾದಗಿರಿ : ದೇಶದ ಭದ್ರತೆ ಹಾಗೂ ಯುವಜನರ ಭವಿಷ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿರುವ ‘ಗ್ರೇಟ್ ನಿಕೋಬಾರ್’ ಯೋಜನೆಯನ್ನು ಕಾಂಗ್ರೆಸ್ ವಿರೋಧಿಸುತ್ತಿರುವುದು ಅಭಿವೃದ್ಧಿ ವಿರೋಧಿ ಧೋರಣೆಯಾಗಿದೆ ಎಂದು ಅಖಂಡ ರಾಷ್ಟ್ರ ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ಸಿದ್ದಲಿಂಗರೆಡ್ಡಿ ಮುನಗಲ್ ಹೇಳಿದ್ದಾರೆ.

ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸುಮಾರು 50 ಸಾವಿರಕ್ಕೂ ಹೆಚ್ಚು ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿಸುವ ಇಂತಹ ಬೃಹತ್ ಯೋಜನೆಯನ್ನು ರಾಜಕೀಯ ಕಾರಣಗಳಿಗಾಗಿ ವಿರೋಧಿಸುತ್ತಿರುವುದು ಯುವಜನರ ಉದ್ಯೋಗದ ಆಕಾಂಕ್ಷೆಗಳಿಗೆ ಹಿನ್ನಡೆಯುಂಟು ಮಾಡಲಿದೆ.

ಗ್ರೇಟ್ ನಿಕೋಬಾರ್ ಯೋಜನೆಯಲ್ಲಿ ಪರಿಸರ ಕಾಳಜಿಯ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ, ಬೆಂಗಳೂರಿನ ಮೆಟ್ರೋ ಸೇರಿದಂತೆ ವಿವಿಧ ಮೂಲಸೌಕರ್ಯ ಯೋಜನೆಗಳಿಗಾಗಿ ಸಾವಿರಾರು ಮರಗಳನ್ನು ಕಡಿಯುವಾಗ ಈ ಪರಿಸರ ಪ್ರೇಮ ಎಲ್ಲಿ ಹೋಗಿತ್ತು? ಎಂದು ಪ್ರಶ್ನಿಸಿದ್ದಾರೆ.

ಒಂದೆಡೆ ಅಭಿವೃದ್ಧಿಯ ಹೆಸರಿನಲ್ಲಿ ನಗರದ ಹಸಿರನ್ನು ನಾಶಪಡಿಸಿ, ಇಂದು ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಪ್ರಗತಿಗೆ ಪೂರಕವಾದ ಯೋಜನೆಯನ್ನು ಪರಿಸರದ ನೆಪವೊಡ್ಡಿ ವಿರೋಧಿಸುವುದು ದ್ವಂದ್ವ ನೀತಿಯಾಗಿದೆ. ರಾಷ್ಟ್ರದ ಭದ್ರತೆ ಮತ್ತು ಯುವಜನರ ಹಿತದೃಷ್ಟಿಯಿಂದ ರೂಪಿಸಲಾದ ಈ ಯೋಜನೆಯು ಇಂದಿನ ಅಗತ್ಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ