Friday, May 15, 2026
Homeಶಿಕ್ಷಣಹೋಲಿಕ್ರಾಸ್ ಸಮಾಜ ಸೇವಾ ಸಂಸ್ಥೆಯಿಂದ ಮಕ್ಕಳ “ಬೇಸಿಗೆ ಶಿಬಿರ” ಯಶಸ್ವಿ ಆಯೋಜನೆ

ಹೋಲಿಕ್ರಾಸ್ ಸಮಾಜ ಸೇವಾ ಸಂಸ್ಥೆಯಿಂದ ಮಕ್ಕಳ “ಬೇಸಿಗೆ ಶಿಬಿರ” ಯಶಸ್ವಿ ಆಯೋಜನೆ

ಮುಂಡಗೋಡ ತಾಲ್ಲೂಕಿನ ಮೈನಲ್ಲಿ, ಗುಂಜಾವತಿ, ಕೇಂದ್ರಲಗೇರಿ ಹಾಗೂ ನಂದಿಕಟ್ಟಾ ಗ್ರಾಮಗಳ ಮಕ್ಕಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಪೂರಕವಾಗುವಂತೆ ಹೋಲಿಕ್ರಾಸ್ ಸಮಾಜ ಸೇವಾ ಸಂಸ್ಥೆ ವತಿಯಿಂದ ದಿನಾಂಕ 13-04-2026 ರಿಂದ 17-04-2026ರವರೆಗೆ ಐದು ದಿನಗಳ ಮಕ್ಕಳ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಈ ಶಿಬಿರವನ್ನು ಪ್ರತಿದಿನ ಬೆಳಿಗ್ಗೆ 10.00 ರಿಂದ 1.00 ಗಂಟೆಯವರೆಗೆ ನಡೆಸಲಾಗಿದ್ದು, ಮೈನಲ್ಲಿ ಹೋಲಿಕ್ರಾಸ್ ಸಭಾಭವನ, ಗುಂಜಾವತಿ ನವಪುಷ್ಪ ವಸತಿ ನಿಲಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೇಂದ್ರಲಗೇರಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂದಿಕಟ್ಟಾ ಕೇಂದ್ರಗಳಲ್ಲಿ ತರಗತಿಗಳು ಮತ್ತು ಚಟುವಟಿಕೆಗಳು ನಡೆಯಿತು.

ಈ ಶಿಬಿರಕ್ಕೆ ಸ್ಕೂಡ್‌ವೆಸ್ ಸಂಸ್ಥೆ ಶಿರಸಿ, ದೇಶಾಯಿ ಫೌಂಡೇಶನ್, ಗ್ರಾಮಾಭಿವೃದ್ಧಿ ಸಮಿತಿ, ಹಾಗೂ ಎಸ್‌ಡಿಎಂಸಿ ಸಹಕಾರ ನೀಡಿದರು.

ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೋಲಿಕ್ರಾಸ್ ಸಮಾಜ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಸಿಸ್ಟರ್ ಸಿಸಿಲಿಯಾ, ಸಂಸ್ಥೆಯ ನಿರ್ದೇಶಕರಾದ ಸಿಸ್ಟರ್ ಶರಲ್, ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಸ್ಟರ್ ಶರಲ್ ಅವರು, “ಶಿಬಿರದ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಹಾಗೂ ಗುಂಪಿನಲ್ಲಿ ಕೆಲಸ ಮಾಡುವ ಕೌಶಲ್ಯ ಹೆಚ್ಚುತ್ತದೆ” ಎಂದು ತಿಳಿಸಿದರು.

ಶಿಬಿರದಲ್ಲಿ ಮಕ್ಕಳಿಗೆ ಜ್ಞಾನಾಭಿವೃದ್ಧಿ, ವ್ಯಾಯಾಮ, ಕ್ರಾಫ್ಟ್, ಚಿತ್ರಕಲೆ, ಹಾಡು, ಪೇಂಟಿಂಗ್, ವೃತ್ತಿ ಶಿಕ್ಷಣ, ನೀತಿ ಕಥೆಗಳು, ಪೇಪರ್ ಕಟಿಂಗ್, ಕನ್ನಡ ಮತ್ತು ಇಂಗ್ಲಿಷ್ ಗ್ರಾಮರ್ ಮುಂತಾದ ವಿವಿಧ ಚಟುವಟಿಕೆ ಆಧಾರಿತ ಕಲಿಕೆಯನ್ನು ನೀಡಲಾಯಿತು.

ಪ್ರತಿ ಕೇಂದ್ರದಲ್ಲಿ ಸರಾಸರಿ 100 ರಿಂದ 130 ಮಕ್ಕಳವರೆಗೆ ಭಾಗವಹಿಸಿದ್ದು, ಮಕ್ಕಳ ಉತ್ಸಾಹದಿಂದ ಶಿಬಿರವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಶಿಬಿರದ ಅವಧಿಯಲ್ಲಿ ಮಕ್ಕಳಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದ್ದು, ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮಕ್ಕಳಿಗೆ ಪ್ರೋತ್ಸಾಹ ಧನ ಹಾಗೂ ಸಣ್ಣ ಉಡುಗೊರೆಗಳನ್ನು ವಿತರಿಸಲಾಯಿತು.

ದಿನಾಂಕ 17-04-2026 ರಂದು ಕೇಂದ್ರಲಗೇರಿ ಶಾಲೆಯಲ್ಲಿ ನಡೆದ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದು, ಹೋಲಿಕ್ರಾಸ್ ಸಂಸ್ಥೆಯು ಮಕ್ಕಳಿಗೆ ನೀಡುತ್ತಿರುವ ಉತ್ತಮ ಶಿಕ್ಷಣ ಹಾಗೂ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದರು.

ಈ ರೀತಿಯಾಗಿ ಮಕ್ಕಳ ಬೇಸಿಗೆ ಶಿಬಿರವು ಮಕ್ಕಳ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗಿ ಯಶಸ್ವಿಯಾಗಿ ಸಂಪನ್ನವಾಯಿ ತು


ಹೆಚ್ಚಿನ ಸುದ್ದಿ