ಬೆಂಗಳೂರು: ದ್ವೇಷದ ರಾಜಕಾರಣವನ್ನು ಸಮರ್ಥಿಸಲು ಬಿಜೆಪಿ ನಾಯಕರು ಸುಳ್ಳಿನ ಹಾರವನ್ನೇ ಪೋಣಿಸುತ್ತಿದ್ದಾರೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿರುವ ಆಡಳಿತ ಪಕ್ಷದ ಮುಖಂಡರು, ಸಿ.ಟಿ. ರವಿ ರಾಜಕೀಯ ವ್ಯವಸ್ಥೆಗೆ ಅಂಟಿರುವ ಕಳಂಕ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರ ಅಸ್ತಿತ್ವವೇ ಸಮಾಜದ ವಿಭಜನೆಯ ಮೇಲೆ ನಿಂತಿದೆ ಎಂದು ಆರೋಪಿಸಿರುವ ಅವರು, “ಯಾವುದೇ ವಿಷಯವಿರಲಿ, ಅದಕ್ಕೆ ಪಾಕಿಸ್ತಾನ ಮತ್ತು ಹಿಂದೂ-ಮುಸ್ಲಿಂ ಕೋಮು ಬಣ್ಣ ಬಳಿಯುವುದು ಬಿಜೆಪಿಯ ಹುಟ್ಟುಗುಣ” ಎಂದು ಟೀಕಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಯಾವುದೇ ದೊಡ್ಡ ಮಟ್ಟದ ಕೋಮು ಕಲಹ ಸೃಷ್ಟಿಸಲು ಸಾಧ್ಯವಾಗದ ಕಾರಣ ಬಿಜೆಪಿಗರು ಅಸಹನೀಯರಾಗಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
NEET ಹೋರಾಟದ ವಿಚಾರದಲ್ಲೂ ದಿಕ್ಕು ತಪ್ಪಿಸುವ ಯತ್ನ
ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಥಳಕು ಹಾಕಿಕೊಂಡಿರುವ NEET (ನೀಟ್) ವಿವಾದದ ವಿಷಯದಲ್ಲೂ ಬಿಜೆಪಿ ನಾಯಕರು ಧರ್ಮಗಳನ್ನು ಎಳೆದು ತರುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಆಪಾದಿಸಲಾಗಿದೆ. ಸಿ.ಟಿ. ರವಿ ಅವರು ತಮ್ಮ ದ್ವೇಷದ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು, NEET ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲದ ಹಳೆಯ ವಿಡಿಯೋವೊಂದನ್ನು ಬಳಸಿ ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ವಿಫಲ ಯತ್ನ ಮಾಡಿದ್ದಾರೆ ಎಂದು ಟೀಕಿಸಲಾಗಿದೆ.
ಧ್ವನಿ ಸ್ಯಾಂಪಲ್ ನೀಡದ ಪಲಾಯನವಾದಿ ಧೋರಣೆ
ಸಿ.ಟಿ. ರವಿಯವರ ಹೆಸರು ಉಲ್ಲೇಖಿಸಿ ಟೀಕೆಗಳನ್ನು ಮಾಡಿರುವ ನಾಯಕರು, “ಸತ್ಯ ಹೇಳಲು ಹಿಂಜರಿಕೆ ಬೇಕಿಲ್ಲ, ಆದರೆ ಸುಳ್ಳು ಹೇಳಲು ಹಿಂಜರಿಕೆ, ನೈತಿಕ ಭಯ ಹಾಗೂ ಸಾಮಾಜಿಕ ಭಯ ಇರಬೇಕು. ಆದರೆ ಅಂತಹದ್ದು ಯಾವುದೂ ತಮಗೆ ಇಲ್ಲ ಎಂಬುದನ್ನು ತಾವು ಪದೇ ಪದೇ ನಿರೂಪಿಸುತ್ತಿದ್ದೀರಿ” ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ವಿಧಾನಸಭೆಯಲ್ಲಿ ತಾವು ಆಡಿದ ನುಡಿಗಳೇ ತಮ್ಮ ಗುಣಮಟ್ಟವನ್ನು ರಾಜ್ಯದ ಜನತೆಗೆ ಸಾಕ್ಷೀಕರಿಸಿವೆ ಎಂದಿರುವ ಅವರು, ಅಂದು ಆಡಿದ ಮಾತಿನ ಸತ್ಯಾಸತ್ಯತೆ ತಿಳಿಯಲು ಧ್ವನಿ ಸ್ಯಾಂಪಲ್ (Voice Sample) ನೀಡಲು ಇಂದಿಗೂ ಮೀನಮೇಷ ಎಣಿಸುತ್ತಿರುವುದು ಸಿ.ಟಿ. ರವಿ ಅವರ ಪಲಾಯನವಾದ ಮತ್ತು ಅನೈತಿಕತೆಯನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.
“ಉಪ್ಪು ತಿಂದವರು ನೀರು ಕುಡಿಯಲೇಬೇಕು”
ಕಾನೂನು ಮತ್ತು ಸಂವಿಧಾನಕ್ಕೆ ಸವಾಲು ಹಾಕುವ ಸಿ.ಟಿ. ರವಿ ಅವರ ಧಾರ್ಷ್ಟ್ಯದ ನಡೆ ಈ ರಾಜ್ಯದಲ್ಲಿ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿರುವ ಮುಖಂಡರು, “ಉಪ್ಪು ತಿಂದಿದ್ದೀರಿ, ನೀರು ಕುಡಿಯಲು ತಯಾರಾಗಿರಿ” ಎಂದು ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
