ಚನ್ನಮ್ಕಿಮನ ತ್ತೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮ ಭೂಮಿಯಾದ ಐತಿಹಾಸಿಕ ಸಂಗೊಳ್ಳಿ ಗ್ರಾಮದಲ್ಲಿ ನೂತನವಾಗಿ ಸಂಪೂರ್ಣ ಕಲ್ಲಿನಿಂದ ಕೆತ್ತಲ್ಪಟ್ಟ ಗ್ರಾಮದೇವಿ ದೇವಸ್ಥಾನವು ಭವ್ಯವಾಗಿ ಉದ್ಘಾಟನೆಗೊಂಡಿದೆ. ಈ ಪ್ರಯುಕ್ತ ಏಪ್ರಿಲ್ 20ರಿಂದ 24ರ ವರೆಗೆ ಐದು ದಿನಗಳ ಕಾಲ ದೇವಸ್ಥಾನದ ವಾಸ್ತು ಶಾಂತಿ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಲಿದೆ.
ದೇವಸ್ಥಾನದ ಉದ್ಘಾಟನೆಯ ಹಿನ್ನೆಲೆಯಲ್ಲಿ ಇಡೀ ಗ್ರಾಮವು ನವವಧುವಿನಂತೆ ಕಂಗೊಳಿಸುತ್ತಿದ್ದು ರಸ್ತೆಗಳ ಉದ್ದಕ್ಕೂ ತಳಿರು ತೋರಣಗಳನ್ನು ಕಟ್ಟಿ ಅಲಂಕರಿಸಲಾಗಿದೆ.ಮನೆಗಳ ಮುಂದೆ ರಂಗೋಲಿ ಹಾಕಿ ದೀಪಾಲಂಕಾರ ಮಾಡಲಾಗಿದ್ದು ಭಕ್ತರನ್ನು ಸ್ವಾಗತಿಸಲು ಇಡೀ ಊರೇ ಸನ್ನದ್ಧವಾಗಿದೆ.
ಏಪ್ರಿಲ್ 21 ರಿಂದ 23 ರ ವರೆಗೆ ಮೂರು ದಿನಗಳ ಕಾಲ ದೇವಸ್ಥಾನದ ಆವರಣದಲ್ಲಿ ವಿವಿಧ ದೇವತಾ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಗಳು ಶಾಸ್ತ್ರೋಕ್ತವಾಗಿ ನಡೆಯಲಿವೆ.
ಏಪ್ರಿಲ್ 22 ರಂದು ಉಡಿ ತುಂಬುವ ಕಾರ್ಯಕ್ರಮ ಹಾಗು ದೇವಸ್ಥಾನದ ಕಳಸಾರೋಹಣ ನಡೆಯಲಿದ್ದು ರಂಭಾಪುರಿ ಜಗದ್ಗುರುಗಳು ಆಗಮಿಸಿ ಆಶೀರ್ವಚನ ನೀಡಲಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳ ಜೊತೆಜೊತೆಗೆ ಜನರ ಮನರಂಜನೆಗಾಗಿ ಪ್ರತಿದಿನ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿದಿನ ಸಂಜೆ ವಿದ್ವಾಂಸರಿಂದ ಆಧ್ಯಾತ್ಮಿಕ ಪ್ರವಚನ ನಡೆಯಲಿದ್ದು, ಆಗಮಿಸುವ ಸಾವಿರಾರು ಭಕ್ತರಿಗೆ ನಿರಂತರ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ.
ಸ್ಥಳೀಯ ಹಾಗೂ ರಾಜ್ಯ ಮಟ್ಟದ ಕಲಾವಿದರಿಂದ ಪ್ರತಿ ರಾತ್ರಿ , ಸಾಂಸ್ಕೃತಿಕ ವೈಭವ ನಡೆಯಲಿದೆ. 23 ರಂದು ಹಾಸ್ಯಮಯ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು ಜಿ ಕನ್ನಡ ಹಳ್ಳಿಪವರ್ ಕಾರ್ಯಕ್ರಮದ ಎಲ್ಲಾ ಸ್ಪರ್ಧಿಗಳು ಭಾಗವಸಲಿದ್ದಾರೆ.
ಸಂಗೊಳ್ಳಿಯ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸುತ್ತಮುತ್ತಲಿನ ಹಳ್ಳಿಗಳ ಜನರು ಹಾಗೂ ರಾಯಣ್ಣನ ಅಭಿಮಾನಿಗಳು ಆಗಮಿಸಿ ಗ್ರಾಮದೇವಿಯ ಕೃಪೆಗೆ ಪಾತ್ರರಾಗಲು ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರು ಕೋರಿದ್ದಾರೆ.
