Wednesday, August 26, 2026
Homeರಾಜ್ಯವಿ ಜಿ ಸಿದ್ದಾರ್ಥ ಸ್ಮಾರಕ ಕ್ವಿಜ್; ಉಡುಪಿಯ ತಕ್ಷಕ್ ಶೆಟ್ಟಿ ಪ್ರಥಮ

ವಿ ಜಿ ಸಿದ್ದಾರ್ಥ ಸ್ಮಾರಕ ಕ್ವಿಜ್; ಉಡುಪಿಯ ತಕ್ಷಕ್ ಶೆಟ್ಟಿ ಪ್ರಥಮ

5ನೇ ಆವೃತ್ತಿಗೆ ತೆರೆ; ವಿಧ್ಯಾರ್ಥಿಗಳು ಉತ್ತಮ ಸಾಧನೆಗೆ ಮುಂದಾಗಿ: ಐಶ್ವರ್ಯಾ ಡಿಕೆಎಸ್ ಹೆಗ್ಡೆ

ಚಿಕ್ಕಮಗಳೂರು, ಆಗಸ್ಟ್ 26:

ಐದನೇ ಆವೃತ್ತಿಯ ವಿ ಜಿ ಸಿದ್ದಾರ್ಥ ಸ್ಮಾರಕ ರಸಪ್ರಶ್ನೆ ಸ್ಪರ್ಧೆ ಅಂತಿಮ ಸುತ್ತಿನಲ್ಲಿ ಉಡುಪಿ ಲಿಟಲ್ ರಾಕ್ ಇಂಡಿಯನ್ ಶಾಲೆಯ ತಕ್ಷಕ್ ಶೆಟ್ಟಿ ಅವರು ಪ್ರಥಮ ಸ್ಥಾನ ಪಡೆದು 1 ಲಕ್ಷ ರೂ. ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿವೇತನಕ್ಕೆ ಭಾಜನರಾದರು. ಮೂವರು ರನ್ನರ್‌ ಅಪ್‌ಗಳಿಗೆ ತಲಾ ಐಪ್ಯಾಡ್ ನೀಡಲಾಯಿತು.

ಚಿಕ್ಕಮಗಳೂರಿನ ಅಂಬರ್ ವ್ಯಾಲಿ ರೆಸಿಡೆನ್ಶಿಯಲ್ ಸ್ಕೂಲ್‌ನಲ್ಲಿ ಕಳೆದ ಭಾನುವಾರ (ಆ.23) ರಸಪ್ರಶ್ನೆ ಅಂತಿಮ ಸುತ್ತಿನ ಸ್ಪರ್ಧೆ ಜರುಗಿತು.

ದೇಶದ ವಿವಿಧ ಭಾಗಗಳು ಹಾಗೂ ವಿದೇಶಗಳಿಂದ ಆಗಮಿಸಿದ್ದ ಹತ್ತು ಪ್ರತಿಭಾವಂತ ಯುವ ಸ್ಪರ್ಧಿಗಳು ಅಂತಿಮ ಸುತ್ತಿನಲ್ಲಿ ಭಾಗವಹಿಸಿದ್ದರು. ಕುವೈತ್‌ನ ಇಬ್ಬರು ಸ್ಪರ್ಧಿಗಳೂ ಫಿನಾಲೆಗೆ ಅರ್ಹತೆ ಪಡೆದಿದ್ದರು. ಎವಿಆರ್ ಎಸ್ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ ಜ್ಞಾನ, ವೇಗದ ಚಿಂತನೆ ಹಾಗೂ ವಿಮರ್ಶಾತ್ಮಕ ಆಲೋಚನಾ ಸಾಮರ್ಥ್ಯದ ಅತ್ಯುತ್ತಮ ಪ್ರದರ್ಶನ ಕಂಡುಬಂದಿತು.

ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಅದ್ಭುತ ನೆನಪಿನ ಶಕ್ತಿ ಹಾಗೂ ತ್ವರಿತವಾಗಿ ಉತ್ತರಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಕ್ವಿಜ್ ಮಾಸ್ಟರ್‌ಗಳು ಪ್ರಶ್ನೆ ಪೂರ್ಣಗೊಳಿಸುವ ಮುನ್ನವೇ ಕೆಲವರು ಉತ್ತರಿಸುವ ಮೂಲಕ ಗಮನ ಸೆಳೆದರು. ರಶ್ಮಿ ಫುರ್ಟಾಡೊ ಹಾಗೂ ಏಷ್ಯಾದ ಪ್ರಮುಖ ಕ್ವಿಜ್‌ ಮಾಸ್ಟರ್ ಎಂದು ಖ್ಯಾತರಾದ ಗಿರಿ ಪಿಕ್‌ಬ್ರೈನ್ ಕಾರ್ಯಕ್ರಮ ನಿರ್ವಹಿಸಿದರು.

ಉತ್ತಮ ಸಾಧನೆಗೆ ಮುಂದಾಗಿ

ಎವಿಆರ್ ಎಸ್ ಕಾರ್ಯನಿರ್ವಾಹಕ ಟ್ರಸ್ಟಿ ಐಶ್ವರ್ಯಾ ಡಿಕೆಎಸ್ ಹೆಗ್ಡೆ ಅವರು ಮಾತನಾಡಿ, “ಸ್ಪರ್ಧೆಯ ಅರ್ಥ ಕೇವಲ ಗೆಲುವಲ್ಲ. ವಿದ್ಯಾರ್ಥಿಗಳು ತಪ್ಪುಗಳಿಂದ ಕಲಿಯಬೇಕು, ಸೋಲನ್ನು ಒಪ್ಪಿಕೊಳ್ಳಬೇಕು ಹಾಗೂ ಪರಸ್ಪರ ಸಹಕಾರದೊಂದಿಗೆ ಉತ್ತಮ ಸಾಧನೆಗೆ ಮುಂದಾಗಬೇಕು” ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಐಎಸ್ ಸಿಇ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಡಾ. ಜೋಸೆಫ್ ಇಮ್ಯಾನುಯೆಲ್ ಮಾತನಾಡಿ, “ಶಿಕ್ಷಣವು ಕೇವಲ ಅಂಕ ಮತ್ತು ರ‍್ಯಾಂಕ್‌ಗಳಿಗೆ ಸೀಮಿತವಾಗದೆ, ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಪರಿಹಾರ ಹಾಗೂ ಜ್ಞಾನವನ್ನು ಪ್ರಾಯೋಗಿಕವಾಗಿ ಅನ್ವಯಿಸುವ ಸಾಮರ್ಥ್ಯ ಬೆಳೆಸುವಂತಿರಬೇಕು” ಎಂದು ಹೇಳಿದರು.

ದಿವಂಗತ ವಿ.ಜಿ. ಸಿದ್ದಾರ್ಥ ಅವರ ಸ್ಮರಣಾರ್ಥ ಪ್ರತಿ ವರ್ಷ ಆಗಸ್ಟ್ 23ರಂದು ನಡೆಯುವ ಈ ರಸಪ್ರಶ್ನೆ ಸ್ಪರ್ಧೆ, ಯುವಜನರಲ್ಲಿ ಕುತೂಹಲ, ಜ್ಞಾನಾರ್ಜನೆ, ಆರೋಗ್ಯಕರ ಸ್ಪರ್ಧಾ ಮನೋಭಾವ ಮತ್ತು ಕಲಿಕೆಯ ಆಸಕ್ತಿಯನ್ನು ಬೆಳೆಸುವ ವೇದಿಕೆಯಾಗಿದೆ.

ಹೆಚ್ಚಿನ ಸುದ್ದಿ