Sunday, September 27, 2026
Homeಶಿಕ್ಷಣವಿದ್ಯಾರ್ಥಿಗಳ ಸಾವಿಗೆ ಕಾರಣವಾದ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಲಿ: ವರ್ಷ ಗಾಯಕ್ವಾಡ್‌

ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಲಿ: ವರ್ಷ ಗಾಯಕ್ವಾಡ್‌

ಬೆಂಗಳೂರು ಜೂ.25: ನೀಟ್‌ ಪೇಪರ್‌ ಸೋರಿಕೆಯಿಂದ ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕಡ್ಡಾಯವಾಗಿ ರಾಜೀನಾಮೆ ನೀಡಬೇಕು ಎಂದು ಮುಂಬೈ ಪಿಸಿಸಿ ಅಧ್ಯಕ್ಷರೂ ಆದ ಸಂಸದೆ ವರ್ಷ ಗಾಯಕ್ವಾಡ್ ಅವರು ಒತ್ತಾಯಿಸಿದರು.

ನಗರದ ಕ್ವೀನ್ಸ್ ರಸ್ತೆಯ ಐಎಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಛಾತ್ರೋನ್‌ ಕೀ ಗೂಂಜ್‌ʼ ಅಭಿಯಾನವು ಇಂದಿನಿಂದ ಆಗಸ್ಟ್‌ 9ರವರೆಗೆ 40 ದಿನಗಳ ಕಾಲ ದೇಶಾದ್ಯಂತ ನಡೆಯಲಿದೆ. ದೇಶದಲ್ಲಿನ ಶಿಕ್ಷಣದ ಪರಿಸ್ಥಿತಿಯ ಕುರಿತು ರಾಹುಲ್‌ ಗಾಂಧಿಯವರು ಸಂಸತ್ತಿನಿಂದ ಪ್ರಾರಂಭಗೊಂಡು ಪ್ರತೀ ರಸ್ತೆಯಲ್ಲಿಯೂ ಪ್ರಶ್ನಿಸುತ್ತಿದ್ದಾರೆ. ಅಬಿಯಾನದ ಮೂಲಕ ಇಂದು ಶಿಕ್ಷಣದ ಬಗೆಗಿನ ಗಂಭೀರತೆಯನ್ನು ದೇಶಾದ್ಯಂತ ಹರಡಲಾಗುವುದು ಎಂದು ತಿಳಿಸಿದರು.

ಕೇಂದ್ರ ಶಿಕ್ಷಣ ಸಚಿವರು ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಬೇಕು. ಎನ್‌ಟಿಎ ವ್ಯವಸ್ಥೆಯ ವಿರುದ್ಧ ಸಮಗ್ರ ತನಿಖೆ ಮತ್ತು ಸುಧಾರಣೆ ಆಗಬೇಕು. ಪರೀಕ್ಷೆಗಳು, ಫಲಿತಾಂಶಗಳು ಮತ್ತು ಉದ್ಯೋಗಾವಕಾಶಗಳಿಗಾಗಿ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಸಿದ್ಧಪಡಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬುದು ನಮ್ಮ ಅಭಿಯಾನದ ಪ್ರಮುಖ ಬೇಡಿಕೆಗಳು ಎಂದು ತಿಳಿಸಿದರು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿಯ ರಾಜ್ಯಾಧ್ಯಕ್ಷರಾದ ಎಚ್‌.ಎಸ್‌.ಮಂಜುನಾಥ್‌ ಅವರು ಮಾತನಾಡಿ, “ಅಭಿಯಾನವು ಪಕ್ಷಾತೀತವಾಗಿ ದೇಶಾದ್ಯಂತ 28 ನಗರಗಳಲ್ಲಿ ನಡೆಯಲಿದ್ದು, 28 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಅದರಂತೆ, ಬೆಂಗಳೂರಿನಲ್ಲಿ ಅಭಿಯಾನದ ಜವಾಬ್ದಾರಿ ನನ್ನ ಮತ್ತು ಯುವ ಕಾಂಗ್ರೆಸ್‌ಗೆ ಲಭಿಸಿದೆ. ಅಭಿಯಾನದ ಭಾಗವಾಗಿ ರಾಹುಲ್‌ ಗಾಂಧಿಯವರು ಬೆಂಗಳೂರಿಗೆ ಆಗಮಿಸಲಿದ್ದು, ಸಧ್ಯದಲ್ಲೇ ದಿನಾಂಕವೂ ನಿಗಧಿಯಾಗಲಿದೆ. ಅಂದಿನ ಕಾರ್ಯಕ್ರಮದಲ್ಲಿ ಕಡಿಮೆ ಎಂದರೂ ಸುಮಾರು 25 ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ನಡೆಯುವ ಸಿಇಟಿ ಪರೀಕ್ಷೆಯಲ್ಲಿ ಜನಿವಾರದ ವಿಷಯವಾಗಿ ಬೊಬ್ಬೆ ಹೊಡೆಯುವ ಬಿಜೆಪಿ ನಾಯಕರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ 2021ರಿಂದ 2026ರ ಈ ವೇಳೆಗೆ ನೂರಾರು ವಿದ್ಯಾರ್ಥಿಗಳ ಮಾರಣಹೋಮ ಸಂಭವಿಸುತ್ತಿದ್ದರೂ ಏಕೆ ಮಾತನಾಡುತ್ತಿಲ್ಲ. ಇಲ್ಲಿ ಬಿಜೆಪಿಯವರ ಕಾಳಜಿ ವಿದ್ಯಾರ್ಥಿಗಳ ಮೇಲೋ ಅಥವಾ ಸಿಂಪತಿ, ಓಟ್ ಗಿಮ್ಮಿಕ್, ಜಾತಿ ಮತ್ತು ಧರ್ಮಾಧಾರಿತ ರಾಜಕಾರಣದ ಮೇಲೋ ಎಂಬುದು ಬಯಲಾಗುತ್ತದೆ ಎಂದು ಕಿಡಿಕಾರಿದರು.

2024ರ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಇಂದಿಗೂ ಅಪರಾಧಿಗಳನ್ನು ಪತ್ತೆಹಚ್ಚಲಾಗಿಲ್ಲ. ಹೀಗಿದ್ದಾಗ, 2026ರ ಪ್ರಕರಣವನ್ನೂ ಸಿಬಿಐ ಗೆ ವಹಿಸಲಾಗಿದೆ. ಅಷ್ಟೇಅಲ್ಲದೆ, ಯಾರೊಬ್ಬರೂ ಕೂಡ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗಾಗಿ ಸಂತಾಪ ಸೂಚಿಸಲೂ ಮುಂದಾಗುತ್ತಿಲ್ಲ ಎಂದು ಕಿಡಿಕಾರಿದರು.

ಈ ವೇಳೆ ಎಂಎಲ್‌ಸಿ ರಮೇಶ್‌ ಬಾಬು, ಮಾಜಿ ಎಂಎಲ್‌ಸಿ ಆರ್‌.ವಿ.ವೆಂಕಟೇಶ್‌, ಯುವ ಕಾಂಗ್ರೆಸ್‌ ರಾಷ್ಟ್ರೀಯ ಕಾರ್ಯದರ್ಶಿ ತಾರೀಖ್‌ ಭಾಗವಾನ್‌ ಸೇರಿದಂತೆ ಇತರರು ಇದ್ದರು.


ಅಭಿಯಾನದ ಪ್ರತಿ ವಾರಾಂತ್ಯದಲ್ಲಿ ಪಂಜಿನ ಮೆರವಣಿಗೆ, ಸಂವಾದ ಕಾರ್ಯಕ್ರಮ, ನೀಟ್ ವಿರೋಧಿ ಸಂಗೀತ ಕಛೇರಿ, ಮೋಟಿವೇಷನಲ್ ಸ್ಪೀಚ್(ಪ್ರೇರಕ ಭಾಷಣ) ಹಾಗೂ ವಾಕಥಾನ್ ಸೇರಿದಂತೆ ನಾನಾ ಕಾರ್ಯಕ್ರಮಗಳು ಜರುಗಲಿವೆ. ಈ ಕುರಿತು ಶನಿವಾರ ಶಾಸಕರ ಭವನದಲ್ಲಿ ಎಲ್ಲಾ ವಿದ್ಯಾರ್ಥಿಗಳ ಸಂಘಟನೆಗಳ ಜೊತೆ ಸಭೆ ಕರೆದಿದ್ದು, ಎಲ್ಲಾ ವಿಶ್ವವಿದ್ಯಾಲಯ, ಕಾಲೇಜುಗಳ ಪ್ರತೀ ತರಗತಿಗೆ ಭೇಟಿ ನೀಡಿ ಕ್ಲಾಸ್‌ಗೆ ಹೋಗಿ ದ್ಯಾರ್ಥಿಗಳ ನೋಂದಣಿ ಮಾಡಿಸಲಾಗುವುದು. ಈ ಮೂಲಕ ರಾಹುಲ್‌ ಗಾಂಧಿಯವರು ವಿದ್ಯಾರ್ಥಿಗಳ ಪರ ಇದ್ದಾರೆ ಎಂಬ ಸಂದೇಶ ರವಾನಿಸಲಾಗುವುದು.
–ಎಚ್‌.ಎಸ್‌.ಮಂಜುನಾಥ್‌, ಕೆಪಿವೈಸಿಸಿ ಅಧ್ಯಕ್ಷ

ಸಂಪರ್ಕ:
ದೀಪಕ್ ಗೌಡ: 9606006555
ಪುನೀತ್ ಎ ಆರ್: 7349393474

ವರದಿ: ಸೋಮಶೇಖರ ಲಮಾಣಿ

ಹೆಚ್ಚಿನ ಸುದ್ದಿ