ಕಾರವಾರ: ಪತ್ನಿಯ ಅನೈತಿಕ ಸಂಬಂಧ ಮತ್ತು ಆಕೆ ನೀಡಿದ ಮಾನಸಿಕ ಕಿರುಕುಳಕ್ಕೆ ಬೇಸತ್ತು ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ಸಾವಿಗೂ ಮುನ್ನ ಪತಿ ಬರೆದಿಟ್ಟಿರುವ ಡೆತ್ ನೋಟ್ ಈಗ ಸಂಚಲನ ಮೂಡಿಸಿದ್ದು, ದಾಂಪತ್ಯ ದ್ರೋಹದ ಕರಾಳ ಮುಖವನ್ನು ಬಯಲು ಮಾಡಿದೆ.
ಘಟನೆಯ ಹಿನ್ನೆಲೆ:
ಮೃತರನ್ನು ರಾಘವೇಂದ್ರ ವಾಡಕರ್ ಎಂದು ಗುರುತಿಸಲಾಗಿದೆ. ರಾಘವೇಂದ್ರ ಕಳೆದ ಮೂರು ವರ್ಷಗಳಿಂದ ಮಲೇಷಿಯಾದಲ್ಲಿ ಉದ್ಯೋಗದಲ್ಲಿದ್ದರು. ಕುಟುಂಬದ ಸುಂದರ ಭವಿಷ್ಯಕ್ಕಾಗಿ ವಿದೇಶದಲ್ಲಿ ಕಷ್ಟಪಟ್ಟು ದುಡಿದು, ಕೇವಲ ಒಂದು ವಾರದ ಹಿಂದೆಯಷ್ಟೇ ದಾಂಡೇಲಿಗೆ ಮರಳಿದ್ದರು. ಆದರೆ ತವರಿಗೆ ಬಂದ ಪತಿಗೆ ಕಾದಿದ್ದು ಮಾತ್ರ ಘೋರ ಆಘಾತ.
ಪತ್ನಿಯ ಅಟ್ಟಹಾಸ – ‘ಸಾಯೋದಾದ್ರೆ ಸಾಯಿ’ ಎಂದ ಪತ್ನಿ:
ರಾಘವೇಂದ್ರ ಊರಿಗೆ ಬರುತ್ತಿದ್ದಂತೆ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದ ಪತ್ನಿ, ಸಂಸಾರ ಮಾಡಲು ನಿರಾಕರಿಸಿದ್ದಾಳೆ. ಮಕ್ಕಳ ಭವಿಷ್ಯಕ್ಕಾಗಿ ಒಟ್ಟಿಗೆ ಇರೋಣ ಎಂದು ರಾಘವೇಂದ್ರ ಎಷ್ಟೇ ಬೇಡಿಕೊಂಡರೂ ಆಕೆ ಒಪ್ಪಲಿಲ್ಲ. ಬದಲಾಗಿ:
ತನ್ನ ಅನೈತಿಕ ಸಂಬಂಧದ ಬಗ್ಗೆ ಪತಿಯ ಬಳಿಯೇ ಬಹಿರಂಗವಾಗಿ ಹೇಳಿಕೊಂಡಿದ್ದಾಳೆ.
ಇತರ ಯುವಕರ ಜೊತೆಗಿರುವ ಫೋಟೋಗಳನ್ನು ಪತಿಗೆ ಕಳುಹಿಸಿ ವಿಕೃತ ಸಂತೋಷ ಪಟ್ಟಿದ್ದಾಳೆ.
ವಾಟ್ಸಾಪ್ ಸ್ಟೇಟಸ್‌ಗಳ ಮೂಲಕ ಪತಿಯ ಮಾನಸಿಕ ನೆಮ್ಮದಿ ಕೆಡಿಸಿದ್ದಾಳೆ.
ಬೇಸತ್ತ ರಾಘವೇಂದ್ರ ತನ್ನ ಕೈ ಕೊಯ್ದುಕೊಂಡು ಫೋಟೋ ಕಳುಹಿಸಿದಾಗಲೂ, ಪತ್ನಿ ಕನಿಕರ ತೋರದೆ “ನೀನು ಸಾಯೋದಾದ್ರೆ ಸಾಯಿ, ನನಗೇನೂ ತೊಂದರೆ ಇಲ್ಲ” ಎಂದು ಕ್ರೂರವಾಗಿ ಉತ್ತರಿಸಿದ್ದಾಳೆ ಎನ್ನಲಾಗಿದೆ.
ಡೆತ್ ನೋಟ್‌ನಲ್ಲಿ ಕಣ್ಣೀರಿನ ಕಥೆ:
ಪತ್ನಿಯ ನಿರಂತರ ಕಿರುಕುಳ ಹಾಗೂ ‘ಸತ್ತು ಹೋಗು’ ಎಂಬ ಮಾತಿನಿಂದ ಮನನೊಂದ ರಾಘವೇಂದ್ರ ಕೊನೆಗೂ ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಬರೆದ ಪತ್ರದಲ್ಲಿ ತನ್ನ ಸಾವಿಗೆ ಹೆಂಡತಿಯೇ ಕಾರಣ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಸದ್ಯ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಿದೇಶದಲ್ಲಿ ದುಡಿದು ಸಂಸಾರ ಸಲಹಲು ಬಂದ ವ್ಯಕ್ತಿಯ ಬದುಕು ಹೀಗೆ ದುರಂತ ಅಂತ್ಯ ಕಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
