ಆಡಳಿತ ಪಕ್ಷದ ಕೈಗೊಂಬೆಯಾಗಿ ವರ್ತಿಸುವ ಪೊಲೀಸರು
ಬೆಂಗಳೂರು: ನರೇಗಲ್‍ನಲ್ಲಿ ವಾತಾವರಣ ಹಾಳು ಮಾಡುವ ಹಾಗೂ ಹಿಂದೂಗಳನ್ನು ಬೆದರಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಮಧ್ಯಾಹ್ನ ನರೇಗಲ್‍ನಲ್ಲಿ ಕಾರ ಹುಣ್ಣಿಮೆ ನಡೆಯುವ ಸಂದರ್ಭದಲ್ಲಿ ಹೋರಿ ಬೆದರಿಸುತ್ತಿದ್ದರು. ಹೋರಿ ಬೆದರಿಸಲು ಪಟಾಕಿ ಸಿಡಿಸಿದರೆಂಬ ಒಂದೇ ಒಂದು ಕಾರಣಕ್ಕೆ ಹಾಲುಮತ ಸಮಾಜಕ್ಕೆ ಸೇರಿದ ಲೋಹಿತ್ ಕುರುಬರ, ಶಿವರಾಜ್, ಜಯಪ್ಪ, ನಾಗಪ್ಪ, ಮಲ್ಲಪ್ಪ, ನಿಂಗರಾಜ್ ಕುರುಬರ ಮೊದಲಾದವರ ಮೇಲೆ ದೇಶದ್ರೋಹಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದರು. ಇದೇನು ಮೊದಲ ಬಾರಿ ಆಗಿರುವುದಲ್ಲ ಎಂದು ತಿಳಿಸಿದರು.
ಪೊಲೀಸರು ಆಡಳಿತ ಪಕ್ಷದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಪೊಲೀಸ್ ಠಾಣೆ ಕಾಂಗ್ರೆಸ್ ಕಚೇರಿಯಾಗಿದೆ ಎಂದು ದೂರಿದರು. ಹಿಂದೂಗಳು ಶಾಂತಿಯುತವಾಗಿ ದೀಪಾವಳಿ, ಗಣೇಶ ಹಬ್ಬ ಆಚರಿಸದ ಸ್ಥಿತಿ ಬಂದಿದೆ. ಹೋರಿ ಬೆದರಿಸಲು ಅವಕಾಶ ಇಲ್ಲವಾದರೆ ನಾವಿವತ್ತು ಪಾಕಿಸ್ತಾನದಲ್ಲಿ ಇದ್ದೇವಾ ಅಥವಾ ಭಾರತದಲ್ಲಿ ಇದ್ದೇವಾ ಎಂದು ನಮಗೇ ಅನುಮಾನ ಬರುವ ರೀತಿಯಲ್ಲಿ ಆಡಳಿತ ಪಕ್ಷದ ದಬ್ಬಾಳಿಕೆ ನಡೆಯುತ್ತಿದೆ ಎಂದು ಟೀಕಿಸಿದರು.
ಗೂಂಡಾಗರ್ದಿ ಮಾಡುವವರನ್ನು ಒದ್ದು ಒಳಗೆ ಹಾಕಿ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದರು. ಘಟನೆ ನಡೆದು 24 ಗಂಟೆ ಆದರೂ ಹಾಲುಮತ ಸಮಾಜದ ಬಡ ಕುಟುಂಬದ ಯುವಕರ ಕೈ ಕಡಿಯುವ ದುಸ್ಸಾಹಸಕ್ಕೆ ಯಾರು ಕೈ ಹಾಕಿದ್ದರೋ ಅವರನ್ನು ಬಂಧಿಸಿಲ್ಲ ಎಂದು ಆಕ್ಷೇಪಿಸಿದರು. ಬದಲಾಗಿ ಅವರಿಂದ ಕೇಸು ಮಾಡಿಸಿ ಹಿಂದೂಗಳನ್ನು ಬೆದರಿಸುವ ಕೆಲಸ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಾವೇರಿ ಜಿಲ್ಲೆಯಲ್ಲಿ ಇಡೀ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಹಿಂದೂ ಕಾರ್ಯಕರ್ತರ ಮೇಲೆ ಅನವಶ್ಯಕವಾಗಿ ಕೇಸು ಹಾಕುತ್ತಿದ್ದಾರೆ. ಬಜರಂಗದಳ ಕಾರ್ಯಕರ್ತರು, ಗೋರಕ್ಷಕರು ಮತ್ತು ಅವರ ಕುಟುಂಬದ ಸದಸ್ಯರನ್ನು ಬೆದರಿಸುವ ಕೆಲಸ ಆಗುತ್ತಿದೆ ಎಂದು ಟೀಕಿಸಿದರು. ಈ ರೀತಿ ಪೊಲೀಸರನ್ನು ಬಳಸಿ ಹಿಂದೂಗಳನ್ನು ಹತ್ತಿಕ್ಕುವ ಕೆಲಸಕ್ಕೆ ಸರಕಾರ ಹೊರಟಿದೆ. ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ಆದರೂ ಮೀನಮೇಷ ಮಾಡುತ್ತಿದ್ದಾರೆ; ಸ್ಥಳೀಯ ಶಾಸಕರೂ ಬಂದಿಲ್ಲ ಎಂದು ದೂರಿದರು.
ಆಡಳಿತ ಪಕ್ಷದ ಶಾಸಕರು ಗೂಂಡಾಗರ್ದಿಗೆ ಇಳಿದುದು ನಾಚಿಕೆಗೇಡಿನ ಸಂಗತಿ ಎಂದ ಅವರು, ತಡ ಮಾಡದೇ ಹಲ್ಲೆಕೋರರನ್ನು ತಕ್ಷಣ ಬಂಧಿಸದೇ ಇದ್ದಲ್ಲಿ ಜನರೇ ಬೀದಿಗಿಳಿದು ಕುಡುಗೋಲು, ಕಲ್ಲು ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾದರೆ, ಅದಕ್ಕೆ ಪೊಲೀಸ್ ವ್ಯವಸ್ಥೆಯೇ ಕಾರಣವಾಗುತ್ತದೆ. ಇಲ್ಲಿರುವ ಆಡಳಿತ ಪಕ್ಷದ ಶಾಸಕರೇ ಹೊಣೆಗಾರರು ಎಂದು ಎಚ್ಚರಿಸಿದರು.
ನರೇಗಲ್‍ನಲ್ಲಿ ಹಲವಾರು ಬಾರಿ ಹಿಂದೂಗಳ ಮೇಲೆ ಆಕ್ರಮಣ ನಡೆದಿದೆ. ಇನ್ನೂ ಎಚ್ಚತ್ತುಕೊಳ್ಳದೇ ಇದ್ದರೆ, ಜನರೇ ಬೀದಿಗಿಳಿಯುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಮುಖ್ಯಮಂತ್ರಿಗಳು, ಗೃಹ ಸಚಿವರು ಇದನ್ನು ಗಮನಿಸಬೇಕು. ಇಲ್ಲಿಗೆ ಬಂದು ಸಮಸ್ಯೆಗೆ ಪರಿಹಾರ ಕೊಡಬೇಕು. ಹಿಂದೂಗಳ ಮೇಲೆ ಅನವಶ್ಯಕವಾಗಿ ಕೌಂಟರ್ ಕೇಸ್ ಮಾಡಿದ್ದೇ ಆದರೆ, ಮುಂದಿನ ದಿನಗಳಲ್ಲಿ ಜನರೇ ಬೀದಿಗಿಳಿದು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಕೆಲಸ ಆಗಲಿದೆ ಎಂದು ತಿಳಿಸಿದರು.
ಪೊಲೀಸ್ ಠಾಣೆ ಕಾಂಗ್ರೆಸ್ ಕಚೇರಿ ಆಗಿರುವುದರ ಪರಿಣಾಮವಾಗಿ ಈ ಘಟನೆ ನಡೆದಿದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಇನ್ನೊಂದು ಪ್ರಶ್ನೆಗೆ ಉತ್ತರಿಸಿ, ಶಾಸಕರು ದೆಹಲಿಯಲ್ಲಿದ್ದಾರೋ ಬೆಂಗಳೂರಿನಲ್ಲಿ ಇದ್ದಾರೋ ಗೊತ್ತಿಲ್ಲ. ಮಂತ್ರಿ ಸ್ಥಾನಕ್ಕಾಗಿ ದೆಹಲಿಗೆ ಶಾಸಕರು ಹೋಗಿ ಕೂತದ್ದನ್ನು ನಾವು ನೋಡುತ್ತೇವೆ. ಶಾಸಕರು ಕೇವಲ ಮುಸಲ್ಮಾನರ ಮತದಿಂದ ಗೆದ್ದಿರುವುದಲ್ಲ; ಹಿಂದೂಗಳು ಮತ ಹಾಕಿದ್ದಾರೆ. ಹಿಂದೂಗಳ ರಕ್ಷಣೆ ಮಾಡುವುದು ಅವರ ಕರ್ತವ್ಯ. ಇಲ್ಲವಾದರೆ ಮುಂದಿನ ಚುನಾವಣೆಗೆ ಬೀದಿಗಿಳಿಯದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.
