Wednesday, June 10, 2026
Homeಧಾರ್ಮಿಕನದಿ ಇಂಗಳಗಾಂವ - ತೀರ್ಥ ಗ್ರಾಮದ ಗಡಿ ಭಾಗದಲ್ಲಿ ಸೀಮಿ ಲಕ್ಷ್ಮಿ ದೇವಿ ದೇವಸ್ಥಾನಕ್ಕೆ ಶಾಸಕ...

ನದಿ ಇಂಗಳಗಾಂವ – ತೀರ್ಥ ಗ್ರಾಮದ ಗಡಿ ಭಾಗದಲ್ಲಿ ಸೀಮಿ ಲಕ್ಷ್ಮಿ ದೇವಿ ದೇವಸ್ಥಾನಕ್ಕೆ ಶಾಸಕ ಲಕ್ಷ್ಮಣ ಸವದಿ ಅಡಿಗಲ್ಲು


ಅಥಣಿ: ತಾಲೂಕಿನ ನದಿ ಇಂಗಳಗಾಂವ ಹಾಗೂ ತೀರ್ಥ ಗ್ರಾಮದ ಗಡಿ ಭಾಗದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶ್ರೀ ಸೀಮಿ ಲಕ್ಷ್ಮಿ ದೇವಿ ದೇವಸ್ಥಾನದ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಅವರು ವಿಧ್ಯುಕ್ತವಾಗಿ ಅಡಿಗಲ್ಲು ನೆರವೇರಿಸಿದರು.
ಅಡಿಗಲ್ಲು ಸಮಾರಂಭದ ನಂತರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಇಂಗಳಗಾಂವ ಮತ್ತು ತೀರ್ಥ ಗ್ರಾಮಸ್ಥರ ಹಲವು ವರ್ಷಗಳ ಕನಸಾಗಿದ್ದ ಈ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಇಂದು ಚಾಲನೆ ದೊರೆತಿದೆ. ಈ ದೇವಾಲಯವು ಕೇವಲ ಧಾರ್ಮಿಕ ಕೇಂದ್ರವಾಗದೆ, ಎರಡೂ ಗ್ರಾಮಗಳ ನಡುವಿನ ಭಾವೈಕ್ಯತೆ ಮತ್ತು ಸೌಹಾರ್ದತೆಯ ಸಂಕೇತವಾಗಲಿದೆ. ದೇವಸ್ಥಾನದ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯವಿರುವ ಅನುದಾನವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ದೇವಸ್ಥಾನದ ನಿರ್ಮಾಣಕ್ಕಾಗಿ ಉದಾರವಾಗಿ ಭೂದಾನ ಮಾಡಿದ ಪ್ರವೀಣ ನಾಡಗೌಡ ಹಾಗೂ ಮಾಂತೇಶ ನಾಡಗೌಡ ಅವರನ್ನು ಶಾಸಕರು ಶಾಲು ಹೊದಿಸಿ ಸತ್ಕರಿಸಿದರು.

ಅಡಿಗಲ್ಲು ಸಮಾರಂಭದ ಅಂಗವಾಗಿ ಬೆಳಿಗ್ಗೆಯಿಂದಲೇ ಸೀಮಿ ಲಕ್ಷ್ಮಿ ದೇವಿಗೆ ವಿಶೇಷ ಪೂಜೆ, ಪುನಸ್ಕಾರ ಹಾಗೂ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಸಂಜಯ್ ನಾಡಗೌಡ, ಶಿವರುದ್ರ ಗುಳ್ಳಪ್ಪನವರ, ವಿಜಯ್ ಕಾಂಬಳೆ, ಮಲ್ಲಪ್ಪ ಟಕ್ಕಣವರ ಸೇರಿದಂತೆ ಎರಡೂ ಗ್ರಾಮಗಳ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ