ಬೆಂಗಳೂರು, ಜುಲೈ 31 : ‘ಫ್ರೀಡಮ್ ಫ್ರಂ ವೇಸ್ಟ್ ಅಭಿಯಾನಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕೈಜೋಡಿಸಿದೆ.
ಜಲಮಂಡಳಿ ವತಿಯಿಂದ ಕೈಗೊಳ್ಳಲಾಗುತ್ತಿರುವ ವಿವಿಧ ಕಾಮಗಾರಿಗಳ ಬಳಿಕ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಳಿಯುವ ನಿರ್ಮಾಣ ತ್ಯಾಜ್ಯ ಮತ್ತು ಅವಶೇಷಗಳನ್ನು ತ್ವರಿತವಾಗಿ ತೆರವುಗೊಳಿಸುವ ವಿಶೇಷ ಕಾರ್ಯಾಚರಣೆ ಕೈಗೊಳ್ಳುವಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಜಲಮಂಡಳಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಡಾ. ಮಂಜುಳ ಅವರು, ಜಲಮಂಡಳಿ ಕೈಗೊಳ್ಳುವ ಪ್ರತಿಯೊಂದು ಕಾಮಗಾರಿಯೂ ಸಾರ್ವಜನಿಕರಿಗೆ ಉತ್ತಮ ಮೂಲಸೌಕರ್ಯ ಒದಗಿಸುವುದಾಗಿದೆ. ಇದರ ಜೊತೆಯಲ್ಲೇ, ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸಾರ್ವಜನಿಕ ಬಳಕೆಗೆ ಯೋಗ್ಯ ಸ್ಥಿತಿಯಲ್ಲಿ ಹಸ್ತಾಂತರಿಸುವ ಜವಾಬ್ದಾರಿಯೂ ಅಷ್ಟೇ ಮಹತ್ವದ್ದಾಗಿದೆ ಎಂದು ಹೇಳಿದರು.
ಕುಡಿಯುವ ನೀರಿನ ಪೈಪ್‌ಲೈನ್, ಒಳಚರಂಡಿ ಜಾಲ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ಉಂಟಾಗುವ ಮಣ್ಣು, ಜಲ್ಲಿ, ಕಾಂಕ್ರೀಟ್, ಕಲ್ಲು ಸೇರಿದಂತೆ ನಿರ್ಮಾಣ ತ್ಯಾಜ್ಯ ಮತ್ತು ಅವಶೇಷಗಳು ರಸ್ತೆ, ಪಾದಚಾರಿ ಮಾರ್ಗ, ಚರಂಡಿ ಅಥವಾ ರಾಜಕಾಲುವೆಗಳ ಬಳಿ ಯಾವುದೇ ಕಾರಣಕ್ಕೂ ಉಳಿಯಬಾರದು. ಕಾಮಗಾರಿ ಪೂರ್ಣಗೊಂಡ ತಕ್ಷಣ ಅವುಗಳನ್ನು ತೆರವುಗೊಳಿಸಿ ಸ್ಥಳವನ್ನು ಮೂಲ ಸ್ಥಿತಿಗೆ ತರಲು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು. ಕ್ಷೇತ್ರಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ ಕಾಮಗಾರಿ ಸ್ಥಳಗಳನ್ನು ನಿಯಮಿತವಾಗಿ ಪರಿಶೀಲಿಸಿ, ನಿರ್ಮಾಣ ತ್ಯಾಜ್ಯ ತೆರವುಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅಧ್ಯಕ್ಷರು ಸೂಚನೆ ನೀಡಿದರು.
ಕಾಮಗಾರಿ ಪೂರ್ಣಗೊಂಡ ನಂತರವೂ ನಿರ್ಮಾಣ ತ್ಯಾಜ್ಯ ಉಳಿದು ಸಾರ್ವಜನಿಕರಿಗೆ ತೊಂದರೆಯಾಗುವಂತಹ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರು ಕಾಮಗಾರಿ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳನ್ನು ಪುನಃಸ್ಥಾಪಿಸಿದ ಬಳಿಕವೇ ಕಾಮಗಾರಿ ಪೂರ್ಣಗೊಂಡಿರುವುದಾಗಿ ಪರಿಗಣಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಬಿಬಿಎಂಪಿ ಸೇರಿದಂತೆ ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತು ನಿಯಮಿತವಾಗಿ ಪ್ರಗತಿ ವರದಿ ಸಲ್ಲಿಸುವಂತೆ ಎಲ್ಲಾ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಜಲಮಂಡಳಿ ಅಧ್ಯಕ್ಷೆ ಡಾ ಮಂಜುಳ ನಿರ್ದೇಶನ ನೀಡಿದರು.
‘ಫ್ರೀಡಮ್ ಫ್ರಂ ವೇಸ್ಟ್ ‘ ಅಭಿಯಾನದಡಿ ಜಲಮಂಡಳಿಯ ಕ್ರಮಗಳು
- ಜಲಮಂಡಳಿ ಕಾಮಗಾರಿಗಳ ಬಳಿಕ ಉಳಿಯುವ ನಿರ್ಮಾಣ ತ್ಯಾಜ್ಯ ಮತ್ತು ಅವಶೇಷಗಳ ತ್ವರಿತ ತೆರವು
- ಕಾಮಗಾರಿ ಪೂರ್ಣಗೊಂಡ ತಕ್ಷಣ ಸ್ಥಳವನ್ನು ಸ್ವಚ್ಛಗೊಳಿಸುವುದು ಕಡ್ಡಾಯ
- ಮಳೆನೀರು ಹರಿವಿಗೆ ಅಡ್ಡಿಯಾಗುವ ನಿರ್ಮಾಣ ಅವಶೇಷಗಳ ತೆರವಿಗೆ ವಿಶೇಷ ನಿಗಾ
- ಕ್ಷೇತ್ರಮಟ್ಟದ ಅಧಿಕಾರಿಗಳಿಂದ ನಿರಂತರ ಪರಿಶೀಲನೆ ಹಾಗೂ ಮೇಲ್ವಿಚಾರಣೆ
- ಗುತ್ತಿಗೆದಾರರ ಜವಾಬ್ದಾರಿ ನಿಗದಿ ಮತ್ತು ಕಾಮಗಾರಿ ನಂತರದ ಸ್ವಚ್ಛತೆಗೆ ಆದ್ಯತೆ
- ಜಿಬಿಎ ಮತ್ತು ಐದು ಮಹಾನಗರಪಾಲಿಕೆಗಳಿಗೆ ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯದ ಮೂಲಕ ಅಭಿಯಾನದ ಪರಿಣಾಮಕಾರಿ ಅನುಷ್ಠಾನ
