Monday, February 16, 2026
Homeಜಿಲ್ಲಾ ಸುದ್ದಿಗಳುಒಳ ಮೀಸಲಾತಿ ವಿಚಾರದಲ್ಲಿ ‌ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲ್ಲ: ಸಚಿವ ಶಿವರಾಜ್ ಎಸ್.ತಂಗಡಗಿ

ಒಳ ಮೀಸಲಾತಿ ವಿಚಾರದಲ್ಲಿ ‌ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲ್ಲ: ಸಚಿವ ಶಿವರಾಜ್ ಎಸ್.ತಂಗಡಗಿ

ಬೆಂಗಳೂರು: ಫೆ.15

ಒಳ‌‌ ಮೀಸಲಾತಿ ವಿಚಾರದಲ್ಲಿ ನಮ್ಮ ಸರ್ಕಾರ‌ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ‌ ಸಚಿವ ಶಿವರಾಜ್ .ಎಸ್.ತಂಗಡಗಿ ಅವರು ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ‌ ವತಿಯಿಂದ ನಯನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಾವಣಗೆರೆಯ ಸೂರಗೊಂಡನಕೊಪ್ಪದಲ್ಲಿನ ಸೇವಾಲಾಲ್ ಜಯಂತಿ ವೇಳೆ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಣ್ಣ ಸಮುದಾಯಗಳ ಬಗ್ಗೆ ಅಪಾರವಾದ ಕಾಳಜಿ ಇದೆ. ಈಗಾಗಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸಮಿಯೊಂದನ್ನು‌ ಮಾಡಿದ್ದು,‌ ಸಮಿತಿ‌ ಕಾರ್ಯನ್ಮೋಕವಾಗಿದೆ ಎಂದು ತಿಳಿಸಿದರು.‌

ನಾವು- ನೀವು ಒಂದೇ‌ ತಕ್ಕಡಿಯಲ್ಲಿದ್ದೇವೆ. ಯಾವುದೇ ಕಾರಣಕ್ಕೂ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಇದಕ್ಕೆ ಯಾರು ಹೆದರುವ ಅಗತ್ಯವಿಲ್ಲ ಎಂದರು.‌

ಪ್ರತಿಯೊಂದು ತಾಂಡಾ ಕಂದಾಯ ಗ್ರಾಮ:
ರಾಜ್ಯದಲ್ಲಿನ ಪ್ರತಿಯೊಂದು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದ್ದು, ಈಗಾಗಲೇ ಆ ಕೆಲಸ ಪ್ರಾರಂಭಗೊಂಡಿದೆ. ಹತ್ತಾರು ವರ್ಷಗಳಿಂದ ವಾಸವಿರುವವರಿಗೆ ಹಕ್ಕು ಪತ್ರವನ್ನು ಕೂಡ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ರಾಯಚೂರಿನ ಆಶಾ ತಾಂಡದಲ್ಲಿನ ಪ್ರತಿಯೊಂದು ಮನೆಯಲ್ಲೂ ಡಿ ಗ್ರೂಪ್ ನಿಂದ ಹಿಡಿದು ಐಎಎಸ್ ಅಧಿಕಾರಿ ಮಟ್ಟದ ಅಧಿಕಾರಿ ಇರುವುದು ಈ ಸಮುದಾಯದ ಹೆಮ್ಮೆ. ಅದೇ ರೀತಿ ಪ್ರತಿಯೊಂದು ತಾಂಡಾವಾಗಬೇಕು ಎಂದರು.

ಹಿಂದುಳಿದ‌ ಸಮುದಾಯಗಳು ಶಿಕ್ಷಣ,‌ ಹೋರಾಟ ಮತ್ತು ಸಂಘಟನೆಯಾಗಬೇಕು ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ್ದಾರೆ. ಯಾವುದೇ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯ. ಪ್ರತಿಯೊಂದು ಮನೆಯಲ್ಲಿ ಶಿಕ್ಷಣವಂತರಿರಬೇಕು ಎಂದು ಕಿವಿಮಾತು ಹೇಳಿದರು.

ಇನ್ನು ಸಾಧು- ಸಂತರ‌ ಸಾಲಿನಲ್ಲಿ‌ ಸೇವಾಲಾಲ್ ಅವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಅಂದಿನ‌ ಕಾಲದಲ್ಲೇ ಸಮುದಾಯದ ಏಳ್ಗೆಗಾಗಿ ದುಡಿದ ಸೇವಾಲಾಲ್ ರು, ಜನತೆಗೆ ವ್ಯಸನ ಮುಕ್ತರಾಗಿ ಎಂದು ಬೋಧಿಸುತ್ತಾ, ಸತ್ಯ, ಅಹಿಂಸಡ, ತ್ಯಾಗ ಮನೋಭಾವದ ನೀತಿ ಮಾತುಗಳನ್ನು ಹೇಳಿದ್ದರು ಎಂದು ಸಚಿವರು ಮೆಲುಕು ಹಾಕಿದರು.

ಕೇಂದ್ರಕ್ಕೆ‌ ಶಿಫಾರಸ್ಸು:
ಬಂಜಾರ‌ ಭಾಷೆಯನ್ನು ದೇಶದ 8ನೇ ಅನುಚ್ಚೇದಕ್ಕೆ ಸೇರಿಸಬೇಕೆಂಬ ಸಮುದಾಯದ ಮುಖಂಡ‌ರ ಬೇಡಿಕೆಗೆ ಸ್ಪಂದಿಸಿದ ಸಚಿವರು, ಈ‌ ಹಿಂದೆ ಎರಡು ಬಾರಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತಾದರೂ ಕೇಂದ್ರ ಸರ್ಕಾರ ಶಿಫಾರಸ್ಸನ್ನು ತಿರಸ್ಕಾರ ಮಾಡಿದೆ. ಮತ್ತೊಮ್ಮೆ ಬಂಜಾರ ಭಾಷೆಯನ್ನು ಸಂವಿಧಾನದ 8ನೇ ಅನುಚ್ಛೇದಕ್ಕೆ‌ ಸೇರಿಸಲು ಸರ್ಕಾರದಿಂದ ಶಿಫಾರಸ್ಸು ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.‌

ಕಾರ್ಯಕ್ರಮದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಮೋತಿಲಾಲ್ ಚವ್ಹಾಣ್, ಜಾನಪದ ವಿದ್ವಾಂಸ ಡಾ.ಯು.ಎಂ.ರವಿ, ವೃತ್ತಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ್ ಕರ್ಕೋಳ, ಸಮುದಾಯದ ಮುಖಂಡ ಅನಂತ್ ನಾಯಕ್, ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ