Friday, August 7, 2026
Homeಟಾಪ್ ನ್ಯೂಸ್ಆಸರೆಯಾಗಬೇಕಿದ್ದ ಪಿಂಚಣಿ ಬಾಕಿ: ವೃದ್ಧರು, ಅಂಗವಿಕಲರು ಮತ್ತು ವಿಧವೆಯರ ಕಣ್ಣೀರು!...

ಆಸರೆಯಾಗಬೇಕಿದ್ದ ಪಿಂಚಣಿ ಬಾಕಿ: ವೃದ್ಧರು, ಅಂಗವಿಕಲರು ಮತ್ತು ವಿಧವೆಯರ ಕಣ್ಣೀರು!…

(ವಿಶೇಷ ವರದಿ)

ಚ ಕಿತ್ತೂರು : ಸಮಾಜದ ಅತ್ಯಂತ ಹಿಂದುಳಿದ, ಅಸಹಾಯಕ ಮತ್ತು ಆರ್ಥಿಕವಾಗಿ ನೊಂದ ವರ್ಗದವರಿಗೆ ನೆರವಾಗಲೆಂದು ಸರ್ಕಾರ ಜಾರಿಗೆ ತಂದಿರುವ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಹಾಗೂ ವಿಧವಾ ವೇತನಗಳು ಕಳೆದ ಮೂರು ತಿಂಗಳಿಂದ ಫಲಾನುಭವಿಗಳ ಕೈಸೇರದೆ ತೀವ್ರ ಆತಂಕ ಸೃಷ್ಟಿಸಿದೆ.

ಸರ್ಕಾರದ ಈ ವಿಳಂಬ ಧೋರಣೆಯಿಂದಾಗಿ ರಾಜ್ಯದ ಲಕ್ಷಾಂತರ ಬಡ ಜೀವಗಳು ದಿನನಿತ್ಯದ ತುತ್ತಿನ ಚೀಲ ತುಂಬಿಸಿಕೊಳ್ಳಲು ಮತ್ತು ಕನಿಷ್ಠ ವೈದ್ಯಕೀಯ ವೆಚ್ಚಗಳನ್ನು ಭರಿಸಲಾಗದೆ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಹೆಚ್ಚಿನ ಫಲಾನುಭವಿಗಳಿಗೆ ಈ ಮಾಸಿಕ ಪಿಂಚಣಿ ಹಣವೇ ಜೀವನದ ಏಕೈಕ ಆಧಾರವಾಗಿದೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರು ಮತ್ತು ವಿಶೇಷ ಚೇತನರು ಪ್ರತಿ ತಿಂಗಳು ಬಿಪಿ, ಶುಗರ್ ಮುಂತಾದ ಕಾಯಿಲೆಗಳಿಗೆ ನಿಯಮಿತವಾಗಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಕಳೆದ ಮೂರು ತಿಂಗಳಿಂದ ಪಿಂಚಣಿ ಬಾರದೇ ಇರುವುದರಿಂದ, ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. “ಸಾಲ ಮಾಡಿ ಎಷ್ಟು ದಿನ ಅಂತ ಮಾತ್ರೆ ತರೋದು? ಸರ್ಕಾರ ನಮ್ಮಂತ ಬಡವರ ಹೊಟ್ಟೆಯ ಮೇಲೆ ಹೊಡೆಯಬಾರದು” ಎಂದು ವೃದ್ಧರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕೇವಲ ಬದುಕಿನ ಬಂಡಿ ಸಾಗಿಸುವುದಷ್ಟೇ ಅಲ್ಲದೆ, ಮನೆ ಬಾಡಿಗೆ, ದಿನಸಿ ಸಾಮಗ್ರಿ, ಸಣ್ಣಪುಟ್ಟ ಮನೆ ಖರ್ಚುಗಳಿಗೂ ಹಣವಿಲ್ಲದೆ ಫಲಾನುಭವಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಹಳ್ಳಿಗಳಲ್ಲಿ ಹಾಗೂ ನಗರದ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ವಿಧವೆಯರು ಮತ್ತು ಅಂಗವಿಕಲರು ನೆರೆಹೊರೆಯವರ ಬಳಿ ಕೈಚಾಚುವ ಪರಿಸ್ಥಿತಿ ಬಂದೊದಗಿದೆ. ಹಬ್ಬ-ಹರಿದಿನಗಳು ಹೋದರೂ ಕನಿಷ್ಠ ಅಗತ್ಯಗಳನ್ನು ಪೂರೈಸಿಕೊಳ್ಳಲಾಗದ ಅಸಹಾಯಕತೆ ಇವರ ಮುಖದಲ್ಲಿ ಎದ್ದು ಕಾಣುತ್ತಿದೆ.

ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ನಡುವೆ, ಸಮಾಜದ ಅತ್ಯಂತ ದುರ್ಬಲ ವರ್ಗದವರ ಮೂಲಭೂತ ಹಕ್ಕಿನಂತಿರುವ ಈ ಸಾಮಾಜಿಕ ಭದ್ರತಾ ಯೋಜನೆಗಳು ಮೂಲೆಗುಂಪಾಗುತ್ತಿವೆಯೇ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಮೂಡಿದೆ. ತಾಂತ್ರಿಕ ಕಾರಣಗಳೋ ಅಥವಾ ಅನುದಾನದ ಕೊರತೆಯೋ, ಒಟ್ಟಾರೆಯಾಗಿ ಬಡವರ ಹೊಟ್ಟೆ ಹಸಿವು ಮತ್ತು ಆರೋಗ್ಯದ ವಿಷಯದಲ್ಲಿ ಸರ್ಕಾರ ಉದಾಸೀನತೆ ತೋರಬಾರದು ಎಂಬುದು ಸಾರ್ವಜನಿಕರ ತೀವ್ರ ಒತ್ತಾಯವಾಗಿದೆ.

​ಇನ್ನಾದರೂ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು, ತಾಂತ್ರಿಕ ದೋಷಗಳನ್ನು ನಿವಾರಿಸಿ, ಬಾಕಿ ಇರುವ ಮೂರು ತಿಂಗಳ ವೃದ್ಧಾಪ್ಯ, ಅಂಗವಿಕಲ ಮತ್ತು ವಿಧವಾ ವೇತನವನ್ನು ತಕ್ಷಣವೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿ ಅಸಹಾಯಕರ ಮುಖದಲ್ಲಿ ಮತ್ತೆ ನಗು ಮೂಡಿಸುವಂತಾಗಬೇಕು ಎಂಬುದು ನೊಂದವರ ಒತ್ತಾಯವಾಗಿದೆ.

ಹೆಚ್ಚಿನ ಸುದ್ದಿ