ಬೀದರ್: ಭಕ್ತಿ ಪರಾಕಾಷ್ಠೆಯ ನಡುವೆ ವಿಧಿಯಾಟ ಬೇರೆಯೇ ಇತ್ತು. ಬಸವಕಲ್ಯಾಣದ ಥೇರು ಮೈದಾನದಲ್ಲಿ ಲಕ್ಷಾಂತರ ಭಕ್ತರು ‘ಬಸವೇಶ್ವರ’ನ ರಥ ಎಳೆಯಲು ಮುಗಿಬಿದ್ದಾಗ ಸಂಭವಿಸಿದ ನೂಕಾಟವೊಂದು ಭೀಕರ ರಕ್ತಪಾತಕ್ಕೆ ನಾಂದಿ ಹಾಡಿದೆ.
ಭಕ್ತಿಯ ಭರದಲ್ಲಿ ರಥದ ವೇಗಕ್ಕೆ ಸಿಲುಕಿದ ಧನರಾಜ್ ಎಂಬುವವರು ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ರಥವನ್ನು ಎಳೆಯುವ ಭರದಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ಈ ಅವಘಡ ಸಂಭವಿಸಿದ್ದು, ಗಾಯಾಳುಗಳ ಕಿರುಚಾಟ ನೆರೆದಿದ್ದವರ ಕರುಳು ಹಿಂಡುವಂತಿತ್ತು.
ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಕಲಬುರಗಿಗೆ ಕಳುಹಿಸಿಕೊಡಲಾಗಿದೆ. ಸಂಭ್ರಮದ ಜಾತ್ರೆಯಲ್ಲಿ ಈ ಘಟನೆ ಸೂತಕದ ಛಾಯೆ ಮೂಡಿಸಿದೆ.
