ಅಥಣಿ:ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ (ಸುಪ್ರೀಂ ಕೋರ್ಟ್) ದೀರ್ಘಕಾಲದಿಂದ ಬಾಕಿ ಉಳಿದಿರುವ ಸಾವಿರಾರು ಸಿವಿಲ್ ಪ್ರಕರಣಗಳನ್ನು ಶೀಘ್ರವಾಗಿ ಮತ್ತು ಸೌಹಾರ್ದಯುತವಾಗಿ ಬಗೆಹರಿಸಲು ‘ಸ್ಪೆಷಲ್ ಲೋಕ ಅದಾಲತ್’ “ಸಮಾಧಾನ್ ಸಮಾರೋಪ” ಎನ್ನುವ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳ ಲಾಗಿದೆ. ಆಗಸ್ಟ್ 21, 22 ಮತ್ತು 23 ರಂದು ಈ ಅದಾಲತ್ ನಡೆಯಲಿದ್ದು, ತಾಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಥಣಿಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾಯಮೂರ್ತಿ ನಾಮದೇವ ಸಾಲಮಂಟಪಿ ಕೋರಿದ್ದಾರೆ.
ರಾಜ್ಯ ಉಚ್ಚ ನ್ಯಾಯಾಲಯ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ನೀಡಿದ ಮಾಹಿತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡು ಅವರು ಮಾಹಿತಿ ನೀಡಿದರು. ಈ ವೇಳೆ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ಓಂಕಾರ್ ಮೂರ್ತಿ ಎಚ್ ಅವರು ಮಾತನಾಡಿ ಈ ವಿಶೇಷ ಅದಾಲತ್ನ ಪ್ರಮುಖ ವೈಶಿಷ್ಟ್ಯವೆಂದರೆ, ಪಕ್ಷಕಾರರು ತಮ್ಮ ಪ್ರಕರಣಗಳ ಇತ್ಯರ್ಥಕ್ಕಾಗಿ ದೆಹಲಿಗೆ ಹೋಗುವ ಅವಶ್ಯಕತೆಯಿಲ್ಲ.ತಾಲೂಕು, ಜಿಲ್ಲೆ ಹಾಗೂ ರಾಜ್ಯದಲ್ಲಿ ಎಲ್ಲೆಲ್ಲಿ ಎರಡು ಪಕ್ಷಗಳು ಮುಖಾಮುಖಿಯಾಗಿ ಚರ್ಚಿಸಿ ರಾಜಿ ಮಾಡಿ ಕೊಳ್ಳಲು ಸಾಧ್ಯವಿದೆಯೋ, ಅಲ್ಲಿಯೇ ಅವರಿಗೆ ಅವಕಾಶ ಮಾಡಿಕೊಡಲಾಗುವುದು. ‘ನ್ಯಾಯ ನಿಮ್ಮ ಮನೆ ಬಾಗಿಲಿಗೆ’ ಎನ್ನುವ ಆಶಯದೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಈಗಾಗಲೇ ರಾಜಿಗೆ ಯೋಗ್ಯವಿರುವ ರಾಜ್ಯದಲ್ಲಿರುವ ಸುಮಾರು 4,328 ಪ್ರಕರಣಗಳ ಮಾಹಿತಿ ನೀಡಿದ್ದು ಇದರ ಹೊರತಾಗಿ ಸಾರ್ವಜನಿಕರ ಗಮನದಲ್ಲಿರುವ ಅಥವಾ ಪಟ್ಟಿಯಲ್ಲಿ ಇಲ್ಲದ ಬಾಕಿ ಸಿವಿಲ್ ಪ್ರಕರಣಗಳನ್ನೂ ಇಲ್ಲಿ ಪ್ರಸ್ತಾಪಿಸಿ ಬಗೆಹರಿಸಿಕೊಳ್ಳಬಹುದು.
ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಬಾಕಿ ಇರುವ ಯಾರೇ ಆಗಲಿ, ವಕೀಲರ ಸಹಾಯವಿಲ್ಲದೆಯೂ ನೇರವಾಗಿ ಈ ಅದಾಲತ್ನಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು.
ಪ್ರತಿ ನ್ಯಾಯಾಲಯದ ನ್ಯಾಯಮೂರ್ತಿಗಳೇ ಈ ಪ್ರಕರಣಗಳಲ್ಲಿ ಮಿಡಿಯೇಟರ್ಗಳನ್ನು (ಮಧ್ಯಸ್ಥಿಕೆದಾರರನ್ನು ) ನೇಮಿಸಲಿದ್ದು, ಲೋಕ ಅದಾಲತ್ ನಲ್ಲಿ ಬಗೆ ಹರಿದ ಪ್ರಕರಣಗಳ ವರದಿಯನ್ನು ನೇರವಾಗಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗುವುದು.
ಸಾಮಾನ್ಯವಾಗಿ ಶಾಶ್ವತ ಲೋಕ ಅದಾಲತ್ಗಳು ನಿರ್ದಿಷ್ಟ ಪ್ರಕರಣಗಳನ್ನು ಮಾತ್ರ ಕೈಗೆತ್ತಿಕೊಳ್ಳುತ್ತವೆ. ಆದರೆ ಈ ವಿಶೇಷ ಡ್ರೈವ್ ಅಡಿಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ವಿವಿಧ ಪ್ರಕಾರದ ಎಲ್ಲ ಸಿವಿಲ್ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಮುಕ್ತ ಅವಕಾಶ ನೀಡಲಾಗಿದೆ.
ಆಗಸ್ಟ್ 21, 22 ಮತ್ತು 23, 2026.ದೂರದ ನ್ಯಾಯಾಲಯದ ಪ್ರಕ್ರಿಯೆಗಳಿಂದ ದಣಿದಿರುವ ಜನಸಾಮಾನ್ಯರಿಗೆ ತಮ್ಮ ಕಾನೂನು ಹೋರಾಟವನ್ನು ಸುಖಾಂತ್ಯಗೊಳಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಆಸಕ್ತಿಯುಳ್ಳ ಪಕ್ಷಕಾರರು ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಕೊರಲಾಗಿದೆ.
ವರದಿ: ಯಾಸಿನ ಝಾರೆ, ಅಥಣಿ
