
ಚನ್ನಮ್ಮನ ಕಿತ್ತೂರು: ಏಪ್ರಿಲ್ 14:. ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯನ್ನು ಇಂದು ತಾಲ್ಲೂಕಿನಾದ್ಯಂತ ಅತ್ಯಂತ ಸಡಗರ ಮತ್ತು ಗೌರವಪೂರ್ವಕವಾಗಿ ಆಚರಿಸಲಾಯಿತು.
ವಿವಿಧ ಸಂಘ-ಸಂಸ್ಥೆಗಳು ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಂದೇಶಗಳನ್ನು ಸ್ಮರಿಸಲಾಯಿತು.
ಮುಂಜಾನೆ ರಾಣಿ ಚನ್ನಮ್ಮ ವೃತ್ತದಲ್ಲಿರುವ ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಡಾ. ಬಿ, ಆರ್,ಅಂಬೇಡ್ಕರ ಹಾಗು ಡಾ. ಬಾಬು ಜಗಜೀವನರಾಮ್ ಅವರ ಚಿತ್ರಗಳಿಗೆ ಪೂಜೆ ಸಲ್ಲಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು.ಅದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಲ್ಮಠದ ಚಂದರಗಿ ಸಭಾಭವನದಲ್ಲಿ ಕೊನೆಗೊಂಡು ನಂತರ ಅಲ್ಲಿಯೇ ಸಮಾರಂಭ ನೆರವೇರಿತು.
ಅತಿಥಿಗಳಾಗಿ ಆಗಮಿಸಿದ್ದ ವಿಚಾರವಾದಿ ಹಾಗು ಸಾಹಿತಿ ಮಹೇಶ ಚೆನ್ನಂಗಿ ಮಾತನಾಡಿ, “ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಒಂದು ವರ್ಗಕ್ಕೆ ಸೀಮಿತವಾದ ನಾಯಕರಲ್ಲ; ಅವರು ಇಡೀ ಭಾರತದ ಆಶಾಕಿರಣ. ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ನೀಡುವ ಮೂಲಕ ಪ್ರತಿಯೊಬ್ಬ ಪ್ರಜೆಗೂ ಘನತೆಯಿಂದ ಬದುಕುವ ಹಕ್ಕನ್ನು ಕೊಟ್ಟಿದ್ದಾರೆ,” ಎಂದು ತಿಳಿಸಿದರು.
“ಶಿಕ್ಷಣ, ಸಂಘಟನೆ ಮತ್ತು ಹೋರಾಟ” ಎಂಬ ಅಂಬೇಡ್ಕರ್ ಅವರ ಮೂಲ ಮಂತ್ರವನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು. ಅಸ್ಪೃಶ್ಯತೆ ಮತ್ತು ಅಸಮಾನತೆಯ ವಿರುದ್ಧ ಅವರು ನಡೆಸಿದ ನಿರಂತರ ಹೋರಾಟದ ಫಲವಾಗಿ ಇಂದು ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನ ಹಕ್ಕುಗಳನ್ನು ಅನುಭವಿಸುತ್ತಿದ್ದೇವೆ. ಕೇವಲ ಜಯಂತಿ ಆಚರಿಸುವುದಷ್ಟೇ ಮುಖ್ಯವಲ್ಲ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ,” ಎಂದು ಮಾರ್ಮಿಕವಾಗಿ ನುಡಿದರು.
ತಹಶೀಲ್ದಾರ ಕಲ್ಲನಗೌಡ ಪಾಟೀಲ,ಸಿಪಿಐ ಶಿವಾನಂದ ಗುಡಗನಟ್ಟಿ, ಆರಕ್ಷಕ ಉಪ ನಿರೀಕ್ಷಕ ಪ್ರವೀಣ ಗಂಗೋಳ,ಕಸಾಪ ಅಧ್ಯಕ್ಷ ಶ್ರೀಕಾಂತ ದಳವಾಯಿ,ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಸಂಜೀವ ಮಿರಜಕರ, ಸಮಾಜದ ಮುಖಂಡರಾದ ರಾಜು ಜಾಂಗಟಿ ,ಹಾಗು ಇನ್ನೂ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗು ಪಿ ಯು ಸಿ ಯಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಾಲ್ಲೂಕಿನ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
