ಅಥಣಿ: ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ತವರು ಕ್ಷೇತ್ರ ಅಥಣಿಗೆ ಆಗಮಿಸಿದ ಸಚಿವ ಅವರಿಗೆ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತ ಕೋರಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಸಂತಸ ಹಂಚಿಕೊಂಡ ಮಾಜಿ ಪುರಸಭೆ ಅಧ್ಯಕ್ಷ ದಿಲೀಪ ಲೋಣಾರಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ವರಿಷ್ಠರು ನಮ್ಮ ಹೆಮ್ಮೆಯ ನಾಯಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಸಮಸ್ತ ಅಥಣಿ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಪಶುವೈದ್ಯಕೀಯ ಕಾಲೇಜು, ವಿದ್ಯುತ್ ಘಟಕಗಳು, ನೀರಾವರಿ ಯೋಜನೆಗಳು, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಅಭಿವೃದ್ಧಿ ಹಾಗೂ ಕೆರೆಗಳ ಅಭಿವೃದ್ಧಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕ್ಷೇತ್ರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಥಣಿ ತಾಲೂಕು ರಾಜ್ಯದಲ್ಲೇ ಮಾದರಿ ತಾಲೂಕಾಗಿ ರೂಪುಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಸ್ಥಾನ ದೊರೆತಿರುವುದರಿಂದ ಲಕ್ಷ್ಮಣ ಸವದಿ ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಅಥಣಿಯಲ್ಲಿ ಯಾವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೋ, ಅದೇ ರೀತಿಯಲ್ಲಿ ರಾಜ್ಯದಾದ್ಯಂತ ಜನಪರ ಹಾಗೂ ಅಭಿವೃದ್ಧಿಪರ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಈ ಹಿಂದೆ ಸಹಕಾರಿ ಸಚಿವರಾಗಿ ರೈತರ ಪರವಾಗಿ ಹಲವು ಕಾರ್ಯಗಳನ್ನು ಮಾಡಿರುವ ಲಕ್ಷ್ಮಣ ಸವದಿ ಅವರಿಗೆ ಸಹಕಾರಿ ಮತ್ತು ಸಕ್ಕರೆ ಖಾತೆ ನೀಡಿದರೆ, ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ದಿಲೀಪ ಲೋಣಾರಿ ಅಭಿಪ್ರಾಯಪಟ್ಟರು.
