ಶಿರಸಿ: ತಾಲೂಕಿನ ಗ್ರಾಮೀಣ ಭಾಗದ ರೈತರ ತೋಟಗಳಲ್ಲಿ ಪಂಪ್ಸೆಟ್ಗಳು ಹಾಗೂ ಅವುಗಳಿಗೆ ಅಳವಡಿಸಿದ್ದ ವಿದ್ಯುತ್ ವೈರ್ಗಳನ್ನು ಕಳವು ಮಾಡಿ ರೈತರಿಗೆ ತೊಂದರೆ ಉಂಟು ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಶಿರಸಿ ಗ್ರಾಮೀಣ ಪೊಲೀಸರು ಕೇವಲ 24 ಗಂಟೆಯೊಳಗೆ ಬಂಧಿಸಿ, ನಾಲ್ಕು ಪಂಪ್ಸೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾದಮಗಟ್ಟಿಯ ನಿವಾಸಿ ಕುಮಾರ ಅರ್ಜುನ ವರ್ದಿ (27) ಎಂದು ಗುರುತಿಸಲಾಗಿದೆ.
ಜುಲೈ 4ರಂದು ತಾಲೂಕಿನ ಭೈರುಂಬೆ ಗ್ರಾಮದ ಅರಸಾಪುರ ನಿವಾಸಿ ಸುಬ್ರಾಯ ರಾಮಚಂದ್ರ ಹೆಗಡೆ ಅವರ ತೋಟದ ಬಾವಿಗೆ ಅಳವಡಿಸಿದ್ದ ಪಂಪ್ಸೆಟ್ ಕಳವಾಗಿರುವ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು, ಪೊಲೀಸ್ ನಿರೀಕ್ಷಕ ರಮೇಶ ಶಂಕರ ಹೂಗಾರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ಆರಂಭಿಸಿದ್ದರು.
ತನಿಖೆಯ ವೇಳೆ ಕೇವಲ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ವಿಚಾರಣೆ ವೇಳೆ ಆತ ಶಿರಸಿ ತಾಲೂಕಿನ ಗ್ರಾಮೀಣ ವ್ಯಾಪ್ತಿಯಲ್ಲಿ ಇದೇ ಮಾದರಿಯಲ್ಲಿ ಇನ್ನೂ ಮೂರು ಪಂಪ್ಸೆಟ್ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಆರೋಪಿಯಿಂದ ವಿವಿಧ ಕಂಪನಿಗಳ ಒಟ್ಟು ನಾಲ್ಕು ಪಂಪ್ಸೆಟ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಅಂದಾಜು ಮೌಲ್ಯ ₹33,150 ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯಲ್ಲಿ ಬಂಧಿತನ ವಿರುದ್ಧ ಹಾವೇರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಆರು ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಈ ಕಾರ್ಯಾಚರಣೆಯನ್ನು ಡಿಎಸ್ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ರಮೇಶ ಶಂಕರ ಹೂಗಾರ ನೇತೃತ್ವದಲ್ಲಿ ಪಿಎಸ್ಐ ಸಂತೋಷಕುಮಾರ ಎಂ., ಪಿಎಸ್ಐ ಅಶೋಕ ರಾಠೋಡ್, ಸಿಬ್ಬಂದಿಗಳಾದ ಮಹಾಂತೇಶ ಬಾರ್ಕರ್, ದಾವಲ್ ಸಾಬ್ ಕುಂದಿ, ವೆಂಕಟ್ರಮಣ ನಾಯ್ಕ, ಅರುಣಕುಮಾರ ಬಿ., ಗಣಪತಿ ನಾಯ್ಕ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಉದಯ ಗುನಗಾ ಯಶಸ್ವಿಯಾಗಿ ನಡೆಸಿದರು.
