Tuesday, August 11, 2026
Homeಟಾಪ್ ನ್ಯೂಸ್ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ ಮಾತ್ರವಲ್ಲನಿಷ್ಕರುಣೆಯ ಕ್ರೌರ್ಯ-ಸಚಿವ ಪ್ರಿಯಾಂಕ್‌ ಖರ್ಗೆ

ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ ಮಾತ್ರವಲ್ಲನಿಷ್ಕರುಣೆಯ ಕ್ರೌರ್ಯ-ಸಚಿವ ಪ್ರಿಯಾಂಕ್‌ ಖರ್ಗೆ

ಮೋದಿ ಸರ್ಕಾರವು ಕರ್ನಾಟಕಕ್ಕೆ ಮಾಡುತ್ತಿರುವುದು ಅನ್ಯಾಯ ಮಾತ್ರವಲ್ಲ, ನಿಷ್ಕರುಣೆಯ ಕ್ರೌರ್ಯ, ಮೋದಿ ಸರ್ಕಾರವು ಕರ್ನಾಟಕಕ್ಕೆ ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಿಗೆ ತೋರಿದಷ್ಟು ಕಾಳಜಿಯನ್ನೂ ತೋರುತ್ತಿಲ್ಲ, ಆ ದೇಶಗಳಿಗೆ ಅನುದಾನ ಕೊಡುವಷ್ಟು ಉದಾರತೆಯನ್ನು ಕರ್ನಾಟಕಕ್ಕೆ ತೋರುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ.

ಕರ್ನಾಟಕ ರಾಜ್ಯಕ್ಕೆ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಮೋದಿ ಸರ್ಕಾರವು ಕನ್ನಡಿಗರನ್ನು ಶತ್ರುಗಳಂತೆ ಕಾಣುತ್ತಿದೆ, ಪ್ರತಿ ಹಂತದಲ್ಲೂ, ಪ್ರತಿ ವಿಷಯದಲ್ಲೂ ಕರ್ನಾಟಕಕ್ಕೆ ಅನ್ಯಾಯದ ಸರಣಿ ಮುಂದುವರೆಸಿದೆ ಎಂದಿದ್ದಾರೆ.

ಹದಿನೈದನೇ ಹಣಕಾಸು ಆಯೋಗದ ಅವಧಿ ಮುಕ್ತಾಯವಾಗಿದೆ. ಈ ಹೊತ್ತಿನಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಅನ್ಯಾಯದ ದೊಡ್ಡ ಸಾಕ್ಷಿಗುಡ್ಡೆಯನ್ನೂ ಉಳಿಸಿದೆ. ಈ ವಂಚನೆ ಕೇವಲ 15ನೇ ಹಣಕಾಸು ಆಯೋಗದ ಅನುದಾನಕ್ಕೆ ಮಾತ್ರ ಸೀಮಿತವಲ್ಲ, ಬಜೆಟ್ ನಿಂದ ಹಿಡಿದು ನೆರೆ, ಬರ ಪರಿಹಾರಗಳು, ತೆರಿಗೆ ಹಂಚಿಕೆ, ಕೇಂದ್ರ ಪುರಸ್ಕೃತ ಯೋಜನೆಗಳು ಸೇರಿದಂತೆ ಎಲ್ಲದರಲ್ಲೂ ಕನ್ನಡಿಗರು ಮಲತಾಯಿ ಮಕ್ಕಳೇ…ಎಂದು ಪ್ರಿಯಾಂಕ್‌ ಖರ್ಗೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ, ಮನರೇಗಾ ಯೋಜನೆಯೂ ಮಾರ್ಚ್ 31ಕ್ಕೆ ಕೊನೆಯಾಗಿದೆ. ಸದರಿ ಯೋಜನೆಯಲ್ಲಿ ಕರ್ನಾಟಕಕ್ಕೆ ₹1,943 ಕೋಟಿ ಅನುದಾನ ಬಾಕಿ ಇದೆ. ಈ ಅನುದಾನದ ಬಗ್ಗೆ ಇದುವರೆಗೂ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟತೆ ನೀಡಿಲ್ಲ, ಏಪ್ರಿಲ್ 1ರಿಂದ ಜನರಿಗೆ ಉದ್ಯೋಗ ಒದಗಿಸಬೇಕಿದ್ದ ವಿಬಿ ಗ್ರಾಮ್ ಜಿ ಯೋಜನೆಯ ಸುಳಿವೂ ಇಲ್ಲ. ಈ ಯೋಜನೆಯ ಜಾರಿಗೆ ನಿಯಮಗಳ ರೂಪುರೇಷೆಯೂ ಸಿದ್ಧವಾಗಿಲ್ಲ. ಇದು ಗ್ರಾಮೀಣ ಜನರ ಕಾನೂನಾತ್ಮಕ ಉದ್ಯೋಗದ ಹಕ್ಕನ್ನು ಕಸಿದಂತಾಗಿಲ್ಲವೇ? ಎಂದು ಸಚಿವರು ಪ್ರಶ್ನಿಸಿದ್ದಾರೆ.

ಹಿಂದಿ ಪರೀಕ್ಷೆ ಮಾದರಿಯ ಬದಲಾವಣೆಯ ಕುರಿತು ಮೈಕಿನ ಮುಂದೆ ಅಬ್ಬರಿಸುವ ರಾಜ್ಯದ ಬಿಜೆಪಿ ನಾಯಕರು 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬರಬೇಕಿದ್ದ ₹15, 583 ಕೋಟಿ ಹಣವನ್ನು ವಂಚಿಸಿರುವುದರ ಬಗ್ಗೆ ತುಟಿ ಬಿಚ್ಚುವುದಿಲ್ಲ.ಕನ್ನಡಿಗರ ಮತ್ತು ಕನ್ನಡನಾಡಿನ ಪರ ನಿಲ್ಲುವ ಕಾಳಜಿ ಅವರಿಗಿಲ್ಲ, ಮೋಶಾ ಜೋಡಿಯ ಸರ್ವಾಧಿಕಾರವನ್ನು ಪ್ರಶ್ನಿಸುವ ಧೈರ್ಯವಂತೂ ಇಲ್ಲವೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾಜೀವಿ ಶ್ರೀ ನರೇಂದ್ರ ಮೋದಿಯವರು ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಬೆಂಗಳೂರಿನ ಪಾತ್ರದ ಬಗ್ಗೆ ಬಗೆಬಗೆಯಲ್ಲಿ ಮಾತನಾಡಿದ್ದರು, ಆದರೆ ಬೆಂಗಳೂರಿನ ಅಭಿವೃದ್ಧಿಗೆ ಕೊಡಬೇಕಿದ್ದ ₹6000 ಕೋಟಿ, ಆದರೆ ಅನುದಾನದಲ್ಲಿ ಕೊಟ್ಟಿದ್ದು ಶೂನ್ಯ ಎಂದಿದ್ದಾರಲ್ಲದೆ, ರಾಜ್ಯದ ಬಿಜೆಪಿ ನಾಯಕರು ಮೋದಿಯ ಈ ಆತ್ಮವಂಚನೆ ಮತ್ತು ಮೋಸದ ಆಟವನ್ನು ಪ್ರಶ್ನಿಸಿದ ದಿನವೇ ಅವರು ನಿಜವಾದ ಜನಪರ ರಾಜಕಾರಿಣಿಗಳಾಗುತ್ತಾರೆ ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿ