Wednesday, October 7, 2026
Homeಜಿಲ್ಲಾ ಸುದ್ದಿಗಳುಮುದ್ದೇಬಿಹಾಳಕ್ಕೆ ಅಭಿವೃದ್ಧಿಯ ಹೊಸ ನಕ್ಷೆ!

ಮುದ್ದೇಬಿಹಾಳಕ್ಕೆ ಅಭಿವೃದ್ಧಿಯ ಹೊಸ ನಕ್ಷೆ!

ಮುದ್ದೇಬಿಹಾಳ:
ಪಟ್ಟಣದ ಬೆಳವಣಿಗೆಗೆ ಇನ್ನು ಹೊಸ ವೇಗ ದೊರಕಲಿದೆ. ಮುದ್ದೇಬಿಹಾಳ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಸಮಗ್ರ ಮತ್ತು ಯೋಜನಾಬದ್ಧ ಅಭಿವೃದ್ಧಿಗೆ ದಾರಿ ಮಾಡಿಕೊಡುವ ಮಹತ್ವದ ನಿರ್ಧಾರವನ್ನು ರಾಜ್ಯ ನಗರಾಭಿವೃದ್ಧಿ ಇಲಾಖೆ ಕೈಗೊಂಡಿದೆ. ಮುದ್ದೇಬಿಹಾಳ ಸ್ಥಳೀಯ ಯೋಜನಾ ಪ್ರದೇಶವನ್ನು ಗಣನೀಯವಾಗಿ ವಿಸ್ತರಿಸಿ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಒಟ್ಟು 7 ಗ್ರಾಮಗಳ ಸಂಪೂರ್ಣ ಕಂದಾಯ ಹಾಗೂ ಗ್ರಾಮಠಾಣಾ ಪ್ರದೇಶಗಳು ಯೋಜನಾ ವ್ಯಾಪ್ತಿಗೆ ಸೇರ್ಪಡೆಯಾಗಿವೆ.
ಈ ವಿಸ್ತರಣೆಯಿಂದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿ 10,405.77 ಹೆಕ್ಟೇರ್‌ಗೆ ಹೆಚ್ಚಳವಾಗಿದ್ದು, 2011ರ ಜನಗಣತಿ ಪ್ರಕಾರ ಸುಮಾರು 47,851 ಜನಸಂಖ್ಯೆ ಯೋಜನಾ ವ್ಯಾಪ್ತಿಯಲ್ಲಿರಲಿದೆ.

ಬಹುವರ್ಷಗಳಿಂದ ಮುದ್ದೇಬಿಹಾಳದ ಜನರ ಪ್ರಮುಖ ಬೇಡಿಕೆಯಾಗಿದ್ದ ಸ್ಥಳೀಯ ಯೋಜನಾ ಪ್ರದೇಶ ವಿಸ್ತರಣೆಗೆ ಇದೀಗ ಅಧಿಕೃತ ಮನ್ನಣೆ ದೊರೆತಿದೆ. ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಅವರ ಸತತ ಪ್ರಯತ್ನದಿಂದ ಯೋಜನೆ ಕಾರ್ಯರೂಪಕ್ಕೆ ಬಂದಿದೆ ಎಂದು ಸ್ಥಳೀಯರು ಹೇಳುತ್ತಿದ್ದು, ಯೋಜನಾ ವ್ಯಾಪ್ತಿ ವಿಸ್ತರಣೆಯಿಂದ ಪಟ್ಟಣದೊಂದಿಗೆ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೂ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ.

ಮೂರು ಗ್ರಾಮಗಳು ಹೊಸ ಸೇರ್ಪಡೆ:
ನೂತನ ಅಧಿಸೂಚನೆಯಡಿ ಮುದ್ದೇಬಿಹಾಳ ಪಟ್ಟಣ ಸೇರಿದಂತೆ ಒಟ್ಟು ಏಳು ಗ್ರಾಮಗಳು ಸಂಪೂರ್ಣವಾಗಿ ಯೋಜನಾ ವ್ಯಾಪ್ತಿಗೆ ಬಂದಿವೆ.
ಮುದ್ದೇಬಿಹಾಳ ಪಟ್ಟಣ – 963.00 ಹೆಕ್ಟೇರ್, ಬಿದರಕುಂದಿ – 1,928.71 ಹೆಕ್ಟೇರ್, ಕುಂಟೋಜಿ – 3,614.08 ಹೆಕ್ಟೇರ್, ಕವಡಿಮಟ್ಟಿ – 1,116.17 ಹೆಕ್ಟೇರ್, ಮುದ್ನಾಳ – 970.26 ಹೆಕ್ಟೇರ್, ಹಡಲಗೇರಿ – 927.87 ಹೆಕ್ಟೇರ್, ಶಿರೋಳ – 885.68 ಹೆಕ್ಟೇರ್,
ಇವುಗಳಲ್ಲಿ ಕವಡಿಮಟ್ಟಿ, ಮುನ್ನಾಳ ಮತ್ತು ಹಡಲಗೇರಿ ಗ್ರಾಮಗಳು ಹೊಸದಾಗಿ ಯೋಜನಾ ವ್ಯಾಪ್ತಿಗೆ ಸೇರ್ಪಡೆಯಾಗಿವೆ. ಈ ಹಿಂದೆ ಭಾಗಶಃ ವ್ಯಾಪ್ತಿಯಲ್ಲಿದ್ದ ಪ್ರದೇಶಗಳು ಇದೀಗ ಸಂಪೂರ್ಣ ಕಂದಾಯ ಹಾಗೂ ಗ್ರಾಮಠಾಣಾ ಪ್ರದೇಶಗಳೊಂದಿಗೆ ಯೋಜನೆಯೊಳಗೆ ಬಂದಿರುವುದು ವಿಶೇಷ.

ಭೂಮಿಗೆ ಹೆಚ್ಚಲಿದೆ ಯೋಜಿತ ಅಭಿವೃದ್ಧಿಯ ಅವಕಾಶ:
ಯೋಜನಾ ಪ್ರದೇಶ ವಿಸ್ತರಣೆಯಿಂದ ಗ್ರಾಮೀಣ ಪ್ರದೇಶಗಳಲ್ಲಿನ ಭೂಮಿಯ ಬಳಕೆಗೆ ನಿಯಮಬದ್ಧ ಚೌಕಟ್ಟು ಸಿಗಲಿದೆ. ಇದರಿಂದ ಭವಿಷ್ಯದಲ್ಲಿ ರಸ್ತೆ, ವಸತಿ, ಸಾರ್ವಜನಿಕ ಸೌಲಭ್ಯಗಳು ಹಾಗೂ ಇತರೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಯೋಜಿತ ಅವಕಾಶ ದೊರೆಯಲಿದೆ. ಇದೇ ವೇಳೆ ಭೂಮಿಯ ಅಭಿವೃದ್ಧಿ ಸಾಧ್ಯತೆ ಹೆಚ್ಚುವುದರಿಂದ ಭೂಮಿಯ ಮೌಲ್ಯದಲ್ಲಿಯೂ ಏರಿಕೆಯಾಗುವ ನಿರೀಕ್ಷೆ ಸ್ಥಳೀಯರಲ್ಲಿ ಮೂಡಿದೆ.

ಸದ್ಯಕ್ಕೆ ಕೃಷಿ ವಲಯವೇ ಆದ್ಯತೆ:
ವಿಸ್ತರಿಸಲಾದ ಸಂಪೂರ್ಣ ಯೋಜನಾ ಪ್ರದೇಶವನ್ನು ಪ್ರಾಥಮಿಕವಾಗಿ ಕೃಷಿ ವಲಯವೆಂದು ಪರಿಗಣಿಸಲಾಗಿದೆ. ಸರ್ಕಾರ ನಿಗದಿಪಡಿಸಿರುವ ವಲಯ ನಿಯಮಾವಳಿಗಳ ಪ್ರಕಾರವೇ ಮುಂದಿನ ಅಭಿವೃದ್ಧಿ ಚಟುವಟಿಕೆಗಳಿಗೆ ಅನುಮತಿ ನೀಡಬೇಕಾಗುತ್ತದೆ.

ಹೀಗಾಗಿ ವಸತಿ ಬಡಾವಣೆ, ವಾಣಿಜ್ಯ ಚಟುವಟಿಕೆ, ಕಟ್ಟಡ ನಿರ್ಮಾಣ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಸಂಬAಧಪಟ್ಟ ಯೋಜನಾ ನಿಯಮಗಳಿಗೆ ಒಳಪಟ್ಟಿರಲಿವೆ.

ಹಳೆಯ ಭೂ ಪರಿವರ್ತನೆಗೆ ವಿನಾಯಿತಿ:
ಅಧಿಸೂಚನೆ ಹೊರಬರುವ ಮುನ್ನ ಕಂದಾಯ ಇಲಾಖೆಯಿಂದ ನಿಯಮಾನುಸಾರ ಭೂ ಪರಿವರ್ತನೆ ಮಾಡಿಕೊಂಡಿರುವ ಭೂಮಿಗಳು ಹಾಗೂ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆದಿರುವ ವಿನ್ಯಾಸಗಳಿಗೆ ನಿಯಮಾನುಸಾರ ಕಟ್ಟಡ ನಿರ್ಮಾಣದ ಪ್ರಾರಂಭಿಕ ಪ್ರಮಾಣಪತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಅದೇ ರೀತಿ ಗ್ರಾಮಠಾಣಾ ಪ್ರದೇಶಕ್ಕೆ ಹೊಂದಿಕೊAಡಿರುವ 250 ಮೀಟರ್ ವ್ಯಾಪ್ತಿಯಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿರುವ ಪ್ರದೇಶಗಳಿಗೆ ಚಾಲ್ತಿಯಲ್ಲಿರುವ ವಲಯ ನಿಯಮಾವಳಿಗಳನ್ವಯ ಅನುಮೋದನೆ ನೀಡಲು ಅವಕಾಶವಿದೆ.

ಎರಡು ವರ್ಷದಲ್ಲಿ ಮಾಸ್ಟರ್ ಪ್ಲಾನ್:
ಸ್ಥಳೀಯ ಯೋಜನಾ ಪ್ರದೇಶ ವಿಸ್ತರಣೆಯಾದ ದಿನಾಂಕದಿAದ ಎರಡು ವರ್ಷಗಳೊಳಗಾಗಿ ಸಮಗ್ರ ಮಹಾಯೋಜನೆ ಸಿದ್ಧಪಡಿಸಿ ಸರ್ಕಾರದ ತಾತ್ಕಾಲಿಕ ಅನುಮೋದನೆಗೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.
ಮಹಾಯೋಜನೆ ರೂಪುಗೊಂಡ ಬಳಿಕ ಯಾವ ಪ್ರದೇಶದಲ್ಲಿ ವಸತಿ, ವಾಣಿಜ್ಯ, ಕೈಗಾರಿಕೆ, ಕೃಷಿ ಅಥವಾ ಸಾರ್ವಜನಿಕ ಉಪಯೋಗದ ಚಟುವಟಿಕೆಗಳಿಗೆ ಅವಕಾಶ ನೀಡಬೇಕು ಎಂಬುದಕ್ಕೆ ಸ್ಪಷ್ಟ ಮಾರ್ಗಸೂಚಿ ಸಿಗಲಿದೆ.

ಅಕ್ರಮ ಬಡಾವಣೆಗಳಿಗೆ ಕಡಿವಾಣ?
ಮುದ್ದೇಬಿಹಾಳ ಪಟ್ಟಣ ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಯೋಜನಾ ಪ್ರದೇಶ ವಿಸ್ತರಣೆಗೆ ಮಹತ್ವ ಬಂದಿದೆ. ಇದರಿಂದ ಅಕ್ರಮ ಬಡಾವಣೆಗಳ ನಿಯಂತ್ರಣ, ರಸ್ತೆ ಸಂಪರ್ಕದ ಪೂರ್ವಯೋಜನೆ, ವಸತಿ ಪ್ರದೇಶಗಳ ವ್ಯವಸ್ಥಿತ ವಿಸ್ತರಣೆ ಹಾಗೂ ಭವಿಷ್ಯದ ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಸೌಕರ್ಯಗಳ ಯೋಜನೆ ಕೈಗೊಳ್ಳಲು ಅನುಕೂಲವಾಗಲಿದೆ.
ಇದುವರೆಗೆ ಪಟ್ಟಣದ ಹೊರವಲಯದಲ್ಲಿ ಚದುರಿದ ರೀತಿಯಲ್ಲಿ ನಡೆಯುತ್ತಿದ್ದ ಭೂ ಅಭಿವೃದ್ಧಿ ಚಟುವಟಿಕೆಗಳಿಗೆ ಯೋಜಿತ ಚೌಕಟ್ಟು ಸಿಗುವ ನಿರೀಕ್ಷೆಯಿದೆ.

ಮುದ್ದೇಬಿಹಾಳದ ಭವಿಷ್ಯಕ್ಕೆ ಮಹತ್ವದ ತಿರುವು:
ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿ ವಿಸ್ತರಣೆಯಿಂದ ಮುದ್ದೇಬಿಹಾಳ ಪಟ್ಟಣದ ಬೆಳವಣಿಗೆ ಕೇವಲ ಪಟ್ಟಣದ ಗಡಿಗೆ ಸೀಮಿತವಾಗದೆ ಸುತ್ತಮುತ್ತಲಿನ ಗ್ರಾಮಗಳನ್ನೂ ಒಳಗೊಂಡ ಸಮಗ್ರ ನಗರ-ಗ್ರಾಮ ಅಭಿವೃದ್ಧಿಯ ಮಾದರಿಯತ್ತ ಸಾಗುವ ಅವಕಾಶ ಸಿಕ್ಕಂತಾಗಿದೆ.
ಬಹುವರ್ಷಗಳ ಬೇಡಿಕೆಗೆ ಸರ್ಕಾರದ ಅಧಿಕೃತ ಮನ್ನಣೆ ದೊರೆತಿರುವುದರಿಂದ, ಮುಂದಿನ ಹಂತದಲ್ಲಿ ಮಹಾಯೋಜನೆ ಹೇಗೆ ರೂಪುಗೊಳ್ಳಲಿದೆ ಎಂಬುದರತ್ತ ಇದೀಗ ಮುದ್ದೇಬಿಹಾಳದ ಜನರ ಗಮನ ನೆಟ್ಟಿದೆ.

ಕೊಟ-1
“ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೆ ಏರಿಸಿದ್ದು ಇನ್ನೂ ಹೆಚ್ಚಿನ ಅನುದಾನ ಬರುತ್ತದೆ ಇದರಿಂದ ನಗರ ಪ್ರದೇಶಕ್ಕೆ ಸೇರ್ಪಡೆಗೊಂಡ ನೂತನ ಗ್ರಾಮೀಣ ಪ್ರದೇಶಗಳೂ ಅಭಿವೃದ್ಧಿಯಾಗುತ್ತದೆ. ಶಾಸಕರಾದ ನಾಡಗೌಡರ ಸತತ ಪ್ರಯತ್ನದಿಂದ ನಗರಸಭೆಯಾಗಿ ಪರಿವರ್ತನೆಗೊಂಡಿದೆ. ವಿರೋಧಿಗಳು ಅವರ ವಿರುದ್ಧ ಸಾಕಷ್ಟು ಟೀಕಾಪ್ರಹಾರ ಮಾಡಿದರೂ ಅದಕ್ಕೆ ಕಿವಿಗೊಡದೆ ಅಭಿವೃದ್ಧಿಗೆ ಗಮನಹರಿಸಿದ ಶಾಸಕರಿಗೆ ನಮ್ಮ ನಗರದ ಎಲ್ಲರ ಪರವಾಗಿ ಶಾಸಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.”
-ಅಕ್ಷಾತ ಶರಣಬಸು ಚಲವಾದಿ, ತಾಲೂಕಾಧ್ಯಕ್ಷರು, ಬ್ಲಾಕ್ ಕಾಂಗ್ರೇಸ್ ಮಹಿಳಾ ಘಟಕ, ಮುದ್ದೇಬಿಹಾಳ.

ಕೊಟ-2
“ಮತಕ್ಷೇತ್ರವನ್ನು ಅಭಿವೃಧ್ಧಿಗೊಳಿಸುವಲ್ಲಿ ಶಾಸಕ ಅಪ್ಪಾಜಿ ನಾಡಗೌಡರು ಯಾವುದೇ ಮೀನಾಮೇಷ ಮಾಡುವುದಿಲ್ಲ ಎಂಬುವುದಕ್ಕೆ ನಮ್ಮ ಪುರಸಭೆಯನ್ನು ನಗರಸಭೆಯನ್ನಾಗಿಸಿದ್ದೆ ಉದಾಹರಣೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಲಿದೆ.”
-ಪ್ರಭುರಾಜ ಕಲಬುರ್ಗಿ, ತಾಲೂಕಾಧ್ಯಕ್ಷರು, ವೀರಶೈವ ಲಿಂಗಾಯತ ಸಮಾಜ, ಮುದ್ದೇಬಿಹಾಳ.

ಫೋಟೊ:6ಎಮ್‌ಡಿಬಿಎಲ್1: ಮುದ್ದೇಬಿಹಾಳ ಪಟ್ಟಣದ ಪುರಸಭೆ ಕಾರ್ಯಾಲಯ.

ಹೆಚ್ಚಿನ ಸುದ್ದಿ