Tuesday, June 23, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡ​ಮುಂಡಗೋಡಿನಲ್ಲಿ ಲೋಕಾಯುಕ್ತರ ಭರ್ಜರಿ ಬೇಟೆ: ಒಂದೇ ದಿನ ಹೆಸ್ಕಾಂ ಎಇಇ, ಕಂದಾಯ ನಿರೀಕ್ಷಕ ಸೇರಿ ಇಬ್ಬರು...

​ಮುಂಡಗೋಡಿನಲ್ಲಿ ಲೋಕಾಯುಕ್ತರ ಭರ್ಜರಿ ಬೇಟೆ: ಒಂದೇ ದಿನ ಹೆಸ್ಕಾಂ ಎಇಇ, ಕಂದಾಯ ನಿರೀಕ್ಷಕ ಸೇರಿ ಇಬ್ಬರು ಅಧಿಕಾರಿಗಳು ಅರೆಸ್ಟ್!

​ಮುಂಡಗೋಡ: ತಾಲೂಕಿನಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಒಂದೇ ದಿನ ಇಬ್ಬರು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಹೆಸ್ಕಾಂ ಉಪವಿಭಾಗದ ಎಇಇ ಧರ್ಮರಾಜ ಬೆಡಸಗಾಂವ್ ಹಾಗೂ ಕಂದಾಯ ನಿರೀಕ್ಷಕ ಬಸವರಾಜ ಬಿಸನಾಳ ಪ್ರತ್ಯೇಕ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ಅಧಿಕಾರಿಗಳಾಗಿದ್ದಾರೆ.

​65 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಹೆಸ್ಕಾಂ ಎಇಇ!
​ಮುಂಡಗೋಡಿನ ಹೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಧರ್ಮರಾಜ ಬೆಡಸಗಾಂವ್ ಅವರು ಕಚೇರಿಯಲ್ಲೇ 65,000 ಮುಂಗಡಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಮುಂಡಗೋಡಿನ ಬಿಸಿಎಂ ವಸತಿ ನಿಲಯದ (ಹಾಸ್ಟೆಲ್) ವಿದ್ಯುತ್ ಕಾಮಗಾರಿ ಹಾಗೂ ಇನ್ನಿತರ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮತ್ತು ಹೊಸ ಕಾಮಗಾರಿಗಳನ್ನು ನೀಡುವ ಸಲುವಾಗಿ ಎಇಇ ಧರ್ಮರಾಜ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಕುರಿತು ವಿದ್ಯುತ್ ಗುತ್ತಿಗೆದಾರ ಶಿವಯೋಗಿ ಕೂಡಲಮಠ ಅವರು ನೀಡಿದ ಖಚಿತ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ಸಂಘಟಿಸಿದ್ದರು.

​ಕಾರವಾರ ಹಾಗೂ ಧಾರವಾಡ ಲೋಕಾಯುಕ್ತ ಘಟಕಗಳ ಅಧಿಕಾರಿಗಳ ಎರಡು ಜಂಟಿ ತಂಡಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿ, ಭ್ರಷ್ಟ ಅಧಿಕಾರಿಯನ್ನು ಕಚೇರಿಯಲ್ಲೇ ಖೆಡ್ಡಾಕ್ಕೆ ಕೆಡವಿ ಹಣದೊಂದಿಗೆ ವಶಕ್ಕೆ ಪಡೆದಿದ್ದಾರೆ.


​ಇದೇ ದಿನ ನಡೆದ ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕ (ರೆವೆನ್ಯೂ ಇನ್ಸ್‌ಪೆಕ್ಟರ್) ಬಸವರಾಜ ಬಿಸನಾಳ ಅವರು ಕೂಡ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದು ಬಂಧನಕ್ಕೊಳಗಾಗಿದ್ದಾರೆ. ಒಂದೇ ದಿನ ತಾಲೂಕಿನ ಇಬ್ಬರು ಪ್ರಮುಖ ಇಲಾಖೆಗಳ ಅಧಿಕಾರಿಗಳು ಲಂಚದ ಹಣದೊಂದಿಗೆ ಸಿಕ್ಕಿಬಿದ್ದಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸದ್ಯ ಲೋಕಾಯುಕ್ತ ಅಧಿಕಾರಿಗಳು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.

ವರದಿಗಾರರು: ಬಸಯ್ಯ ತೋಟಯ್ಯನವರ

ಹೆಚ್ಚಿನ ಸುದ್ದಿ