ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ ಅಂದರೆ ಬುದ್ಧಿವಂತರ ಚುನಾವಣೆ ಎಂದು ಕರೆಯಲಾಗುತ್ತಿತ್ತು.
ವಿದಾನ ಪರಿಷತ್ತು ಸಹ ಚಿಂತಕರ ಛಾವಡಿಯೂ ಆಗಿತ್ತು.
ಒಂದು ಕಡೆ ಚಿಂತಕರ ಛಾವಡಿಯಾಗಿದ್ದ ವಿದಾನ ಪರಿಷತ್ತು ರಾಜಕೀಯ ದಾಳವಾಗಿ ಬದಲಾಗಿ, ತಮ್ಮ ಬೆಂಬಲಿಗರು ಹಾಗೂ ಅಧಿಕಾರ ವಂಚಿತರಿಗೆ ಆಶ್ರಯ ಕಲ್ಪಿಸುವ ಸದನವಾಗಿದೆ.
ಸಾರ್ವತ್ರಿಕ ಚುನಾವಣೆಗಳು ಹಾಗೂ ವಿದಾನ ಸಭಾ ಚುನಾವಣೆಗಳ ಸಾಲಿಗೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳು ಸೇರುತ್ತಿರುವುದು ಕಳವಳ ಮೂಡಿಸಿದೆ.
ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಸಮಸ್ಯೆಗಳಿಗೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಪರಿಹಾರವನ್ನು ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಕ್ಷೇತ್ರಗಳು ಸಹ ಕೇವಲ ಸಾಂಪ್ರದಾಯಿಕ ಮತಬ್ಯಾಂಕ್ ರಾಜಕೀಯ ಮತ್ತು ಚುನಾವಣಾ ಗಿಮಿಕ್ಗಳಿಗೆ ಸೀಮಿತವಾಗುತ್ತಿರುವುದು ಕಳವಳಕಾರಿ ಸಂಗತಿ.
ಚುನಾವಣಾ ಪ್ರಚಾರದ ಶೋಗಳು ಹಾಗೂ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಈ ಕ್ಷೇತ್ರಗಳ ಅಸಲಿ ಸವಾಲುಗಳು ಮುಚ್ಚಿಹೋಗುತ್ತಿವೆ!
ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸ್ಪಷ್ಟ ನೀತಿಗಳನ್ನು ಜಾರಿಗೆ ತರುವಲ್ಲಿ ಆಡಳಿತ ನೆಡೆಸಿದ ಎಲ್ಲಾ ಪಕ್ಷಗಳು ವಿಫಲವಾಗಿದ್ದರು ಸಹ ಈ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಜನಪ್ರತಿನಿಧಿಗಳು ಇದರ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತುತ್ತಿಲ್ಲ!
ಕಳೆದ ಬಾರಿ ಟಿ.ಇ.ಟಿ ಪರೀಕ್ಷೆಗೆ ಹಾಜರಾದವರ ಸಂಖ್ಯೆಯೇ ಮೂರರಿಂದ ನಾಲ್ಕು ಲಕ್ಷ ವಿತ್ತು!
ಆದರೆ ರಾಜ್ಯದಲ್ಲಿಏಳು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಮತದಾರರ ಸಂಖ್ಯೆ ಸುಮಾರು ಒಂದು ಲಕ್ಷದ ಐವತ್ತು ಸಾವಿರ ಇರಬಹುದು! ( ಇದು ಅಂದಾಜು ಲೆಕ್ಕಾಚಾರ)
ಅಂದರೆ ಒಂದು ಕ್ಷೇತ್ರದಲ್ಲಿ ಸುಮಾರು ಇಪ್ಪತ್ತು ಸಾವಿರ ಶಿಕ್ಷಕರು ಮತದಾನದ ಹಕ್ಕನ್ನು ಹೊಂದಿರುತ್ತಾರೆ!
ಯಾರು ಹನ್ನೆರಡರಿಂದ ಹದಿನೈದು ಸಾವಿರ ಮತಗಳನ್ನು ಪಡೆಯುತ್ತಾನೋ ಆತನು ಜಯಗಳಿಸುತ್ತಾನೆ!
ಈತನು ಜಯಗಳಿಸಲು ಭದ್ರವಾದ ಮತಬ್ಯಾಂಕ್ ಇರುವಾಗ ಬೇರೆ ಯಾರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ?
ಇನ್ನೂ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರಿಗೆ, ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗೆ ತಮ್ಮ ಪರವಾಗಿ ಪ್ರತಿನಿಧಿಗಳೇ ಇಲ್ಲದಂತಾಗಿದೆ!
ರಾಜ್ಯದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಯಾಗದೇ ವಯೋಮಿತಿ ಮೀರುತ್ತಾ ಶಿಕ್ಷಕರ ತರಬೇತಿ ಪಡೆದರು ಸಹ ನೇಮಕಾತಿ ಆಗದ ಒಂದೇ ಕಾರಣಕ್ಕಾಗಿ ತಮ್ಮ ಶಿಕ್ಷಕರಾಗುವ ಕನಸೇ ಭಗ್ನವಾಗಿದೆ!
ತರಬೇತಿ ಪಡೆದರು ಸಹ ಇತ್ತ ಪದವೀಧರರಾಗಿಯೇ ಉಳಿಯಬೇಕೇ ಅಥವಾ ನೇಮಕಾತಿ ಆಗದ ಕಾರಣ ಶಿಕ್ಷಕರಲ್ಲ ಎಂದು ಹೇಳಿಕೊಳ್ಳಬೇಕೇ? ಎಂಬ ತ್ರಿಶಂಕು ಸ್ಥಿತಿ ನೇಮಕಾತಿ ಆಗದ ಶಿಕ್ಷಕರದ್ದು!
ವಯೋಮಿತಿ ಮೀರಿದ, ವಯೋಮಿತಿ ಮೀರುತ್ತಿರುವ, ನೇಮಕಾತಿ ನಿರೀಕ್ಷೆಯಲ್ಲಿರುವ, ಟಿ.ಇ.ಟಿ ಪಾಸಾಗಿ ವಯೋಮಿತಿ ಮೀರಿದ ಶಿಕ್ಷಕರ ಸಂಖ್ಯೆ ಅಂದಾಜು ಎಷ್ಟಿರಬಹುದು?
ಇವುಗಳೇಕೆ ಚುನಾವಣಾ ಚರ್ಚೆಯ ವಿಷಯವಾಗುತ್ತಿಲ್ಲ ಎಂಬುದನ್ನು ಮತದಾನದ ಹಕ್ಕಿನಿಂದ ವಂಚಿತರಾದ ಇವರು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಲೇಬೇಕಾಗಿದೆ!
ಇನ್ನು ಪ್ರಾಥಮಿಕ ಶಿಕ್ಷಕರಿಗೆ ಶಿಕ್ಷಕರ ಕ್ಷೇತ್ರದ ಚುನಾವಣೆಗಿಂತ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿಯೇ ಸಕ್ರಿಯರಾಗುತ್ತಾ ತಾವು ಶಿಕ್ಷಕರೋ ಪದವೀಧರರೋ ಎಂಬ ಗೊಂದಲದಲ್ಲಿದ್ದಂತೆ ತೋರುತ್ತದೆ.
ಹಾಗೆಯೇ ಯೋಚಿಸಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪ್ರಣಾಳಿಕೆ ಏನು?
N.P.S ನಿಂದ O.P.S ಮಾಡಲು ಶ್ರಮಿಸುವುದು
ಶಿಕ್ಷಕರ ವರ್ಗಾವಣೆ
ಇವುಗಳು ಮುಖ್ಯವಾದ ಬೇಡಿಕೆ ಹಾಗೂ ಹೋರಾಟ ಮತ್ತು ಚರ್ಚೆಯ ವಿಷಯವಾಗಿವೆ!
ಪ್ರಾಥಮಿಕ ಶಾಲೆ ಶಿಕ್ಷಕರಿಗೂ ವಿದಾನ ಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಕೊಡಿಸುವುದು,
ಅತಿಥಿ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸಲು ಶಾಶ್ವತವಾದ ಯೋಜನೆ ರೂಪಿಸುವುದು
ಮುಚ್ಚುತ್ತಿರುವ ಸರಕಾರಿ ಶಾಲೆಗಳ ಹೆಚ್ಚುವರಿ ಶಿಕ್ಷಕರ ಸಮಸ್ಯಗೆ ಪರಿಹಾರ
ಇವುಗಳ ಬಗ್ಗೆ ಏಕೆ ಧ್ವನಿ ಎತ್ತುವುದಿಲ್ಲ?
ಶಿಕ್ಷಕರ ತರಬೇತಿ ಪಡೆದವರು ಸಹ ಶಿಕ್ಷಕರಾಗಬೇಕಿತ್ತು ಆದರೆ ವಯೋಮಿತಿ ಮತ್ತು ಶೀಘ್ರ ನೇಮಕಾತಿ ಆಗದ ಕಾರಣ ಶಿಕ್ಷಕರಾಗಲು ಸಾಧ್ಯವಿಲ್ಲದವರ ಪರವಾಗಿ ಧ್ವನಿ ಎತ್ತಬೇಕು?
ಯಾವುದೇ ಕಾರಣಕ್ಕೂ ಇವರ ಪರವಾಗಿ ಧ್ವನಿ ಎತ್ತುವುದಿಲ್ಲ!
ಇನ್ನು ಪದವೀಧರರ ಸಮಸ್ಯೆಗಳು, ವಿಶ್ವವಿದ್ಯಾಲಯದಲ್ಲಿನ ಮೂಲಭೂತ ಸೌಲಭ್ಯಗಳು,
ಕೆ.ಪಿ.ಎಸ್.ಸಿ ಹಗರಣ, ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳು,
ಕಾಲಕಾಲಕ್ಕೆ ವಯೋಮಿತಿ ಸಡಿಲಿಕೆ, ಶೀಘ್ರ ನೇಮಕಾತಿಗಳ ಬಗ್ಗೆ ಗಂಭೀರ ಚಿಂತನೆಗಳು ಹಾಗೂ ಚರ್ಚೆಗಳನ್ನು ನಡೆಸುವುದಿಲ್ಲ ಏಕೆ?
ಕಾರಣವಿಷ್ಟೇ ಮತದಾರರ ಸಂಖ್ಯೆ ಹೆಚ್ಚಾದಷ್ಟು ಅಭ್ಯರ್ಥಿಗಳ ಪೊಳ್ಳು ಭರವಸೆಗಳು, ಹಾಗೂ ಸಾಂಪ್ರದಾಯಿಕ ಮತಬ್ಯಾಂಕ್ ಛಿದ್ರವಾಗಿ ಹೋಗುತ್ತದೆ. ಮತ್ತು ಈ ಹಗರಣಗಳು, ವಿಳಂಬ ನೇಮಕಾತಿ ಪ್ರಕ್ರಿಯೆಯಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸುತ್ತಿರುವ ಯಾರು ಸಹ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರಲ್ಲ!
ಅನುಚ್ಛೇದ 171(3)ರ ನಿಯಮಗಳು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪದವೀಧರ ಮತ್ತು ಶಿಕ್ಷಕರ ಮತದಾನದ ಹಕ್ಕನ್ನು ನೀಡುವಲ್ಲಿ ನಿರ್ಬಂಧ ಹೇರಿದೆ!
ಆದ್ದರಿಂದ ಪ್ರಸ್ತುತ ಬದಲಾದ ಶೈಕ್ಷಣಿಕ ಮತ್ತು ಸಾಮಾಜಿಕ ಸನ್ನಿವೇಶಕ್ಕೆ ತಕ್ಕಂತೆ ವಿಧಾನ ಪರಿಷತ್ ಪ್ರಾತಿನಿಧ್ಯದ ನಿಯಮಗಳು ಮರುಪರಿಶೀಲನೆ ಯಾಗಬೇಕಿದೆ.
ಭಾಸ್ಕರ ಎಂ ಮುದೇನೂರು
ನ್ಯಾಯವಾದಿಗಳು
ರಾಜ್ಯಾಧ್ಯಕ್ಷರು
ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿ- ಕರ್ನಾಟಕ
