Sunday, September 13, 2026
HomeಬೆಂಗಳೂರುED ಶೋಧ: ತನಿಖೆ ಕಾನೂನುಬದ್ಧವಾಗಿರಲಿ, ರಾಜಕೀಯ ಪ್ರತೀಕಾರಕ್ಕೆ ಅವಕಾಶ ಇರಬಾರದು — ಶ್ರೀದೇವಿ ನಾಯಕ್

ED ಶೋಧ: ತನಿಖೆ ಕಾನೂನುಬದ್ಧವಾಗಿರಲಿ, ರಾಜಕೀಯ ಪ್ರತೀಕಾರಕ್ಕೆ ಅವಕಾಶ ಇರಬಾರದು — ಶ್ರೀದೇವಿ ನಾಯಕ್

ಬೆಂಗಳೂರು:

ಕಾಂಗ್ರೆಸ್ ನಾಯಕ ಹಾಗೂ ಸಚಿವ ಶ್ರೀ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿರುವ ಶೋಧ ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿರುವ ಶ್ರೀದೇವಿ ನಾಯಕ್, ತನಿಖಾ ಸಂಸ್ಥೆಗಳು ತಮ್ಮ ಕಾನೂನುಬದ್ಧ ಕರ್ತವ್ಯವನ್ನು ಪಾರದರ್ಶಕವಾಗಿ ಮತ್ತು ರಾಜಕೀಯ ಒತ್ತಡದಿಂದ ಮುಕ್ತವಾಗಿ ನಿರ್ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

“ತನಿಖೆ ನಡೆಯಬಾರದು ಎಂಬುದು ನಮ್ಮ ನಿಲುವಲ್ಲ. ಆದರೆ ತನಿಖಾ ಸಂಸ್ಥೆಗಳ ಅಧಿಕಾರವನ್ನು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಎದುರಿಸಲು ಅಥವಾ ರಾಜಕೀಯ ಪ್ರತೀಕಾರಕ್ಕೆ ಬಳಸಬಾರದು” ಎಂದು ಅವರು ಹೇಳಿದ್ದಾರೆ.

EDಯ ಅಧಿಕೃತ ಅಂಕಿ-ಅಂಶಗಳ ಪ್ರಕಾರ, 31 ಮಾರ್ಚ್ 2026ರವರೆಗೆ PMLA ಅಡಿಯಲ್ಲಿ 8,851 ECIRಗಳು ದಾಖಲಾಗಿದ್ದು, 2,396 prosecution complaints ಸಲ್ಲಿಕೆಯಾಗಿವೆ. ಆದರೆ ಪೂರ್ಣಗೊಂಡ trials ಸಂಖ್ಯೆ 60 ಮಾತ್ರವಾಗಿದೆ. ಈ ಅಂಕಿ-ಅಂಶಗಳು ತನಿಖೆ ಮತ್ತು ಅಂತಿಮ ನ್ಯಾಯಾಂಗ ಫಲಿತಾಂಶಗಳ ನಡುವಿನ ಅಂತರದ ಕುರಿತು ಗಂಭೀರ ಸಾರ್ವಜನಿಕ ಚರ್ಚೆಯ ಅಗತ್ಯವನ್ನು ತೋರಿಸುತ್ತವೆ ಎಂದು ಶ್ರೀದೇವಿ ನಾಯಕ್ ಹೇಳಿದ್ದಾರೆ.

“ನಮ್ಮ ಪ್ರಶ್ನೆ ED ಇರಬಾರದು ಎಂಬುದಲ್ಲ. EDಯಂತಹ ಸಂಸ್ಥೆಗಳ ಮೇಲಿನ ಜನರ ವಿಶ್ವಾಸ ಉಳಿಯಬೇಕಾದರೆ ಅವುಗಳ ಕಾರ್ಯಾಚರಣೆ ತಟಸ್ಥ, ಪಾರದರ್ಶಕ ಮತ್ತು ರಾಜಕೀಯ ಪ್ರಭಾವದಿಂದ ಮುಕ್ತವಾಗಿರಬೇಕು ಎಂಬುದಷ್ಟೇ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸತೀಶ್ ಜಾರಕಿಹೊಳಿ ಅವರು ದಲಿತರು, ಶೋಷಿತರು ಮತ್ತು ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯದ ವಿಚಾರಗಳನ್ನು ನಿರಂತರವಾಗಿ ಪ್ರತಿಪಾದಿಸುತ್ತಿರುವ ನಾಯಕರು. ಅವರ ವಿರುದ್ಧದ ಕ್ರಮವು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿರುವುದು ಸಹಜ ಎಂದು ಅವರು ಹೇಳಿದ್ದಾರೆ.

“ಬುದ್ಧನ ಮಾನವೀಯತೆ, ಬಸವಣ್ಣನ ಸಮಾನತೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಿಕ ನೈತಿಕತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳು ನಮ್ಮ ರಾಜಕೀಯದ ದಾರಿದೀಪಗಳಾಗಿವೆ. ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತುವ ಯಾವುದೇ ನಾಯಕನನ್ನು ರಾಜಕೀಯ ಒತ್ತಡದ ಮೂಲಕ ಮೌನಗೊಳಿಸುವ ಪ್ರಯತ್ನವಾಗಬಾರದು,” ಎಂದು ಶ್ರೀದೇವಿ ನಾಯಕ್ ಹೇಳಿದ್ದಾರೆ.

ಅವರು ಮುಂದುವರಿದು, “ಆರೋಪಗಳಿದ್ದರೆ ಕಾನೂನು ತನ್ನದೇ ಆದ ರೀತಿಯಲ್ಲಿ ತನಿಖೆ ನಡೆಸಲಿ. ತಪ್ಪು ಸಾಬೀತಾದರೆ ಕಾನೂನು ತನ್ನ ಕರ್ತವ್ಯ ನಿರ್ವಹಿಸಲಿ. ಆದರೆ ಆರೋಪ ಸಾಬೀತಾಗುವ ಮುನ್ನವೇ ರಾಜಕೀಯ ತೀರ್ಪು ನೀಡುವುದು ಅಥವಾ ತನಿಖಾ ಸಂಸ್ಥೆಗಳನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅಪಾಯಕಾರಿ” ಎಂದು ಹೇಳಿದ್ದಾರೆ.

“ಇಂದು ಅಧಿಕಾರದಲ್ಲಿರುವವರು ನಾಳೆ ವಿರೋಧ ಪಕ್ಷದಲ್ಲಿರಬಹುದು. ಇಂದು ಯಾರ ಮೇಲೆ ಅಧಿಕಾರ ಬಳಸಲಾಗುತ್ತಿದೆಯೋ, ನಾಳೆ ಅದೇ ಅಧಿಕಾರ ಬೇರೆ ಯಾರ ಕೈಯಲ್ಲಿರಬಹುದು. ಅಧಿಕಾರ ಶಾಶ್ವತವಲ್ಲ — ಕಾಲಚಕ್ರ ಉರುಳುತ್ತದೆ. ಆದ್ದರಿಂದ ಸಂಸ್ಥೆಗಳನ್ನು ವ್ಯಕ್ತಿ ಅಥವಾ ಪಕ್ಷದ ಹಿತಕ್ಕಾಗಿ ಅಲ್ಲ, ಸಂವಿಧಾನದ ಮೌಲ್ಯಗಳಿಗಾಗಿ ಬಳಸಬೇಕು,” ಎಂದು ಅವರು ಹೇಳಿದ್ದಾರೆ.

ಸತೀಶ್ ಜಾರಕಿಹೊಳಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಶ್ರೀದೇವಿ ನಾಯಕ್,

“ಅಣ್ಣಾ ಸತೀಶ್ ಜಾರಕಿಹೊಳಿ ಅವರು ಒಬ್ಬರಲ್ಲ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಂವಿಧಾನದ ಪರವಾಗಿ ನಿಲ್ಲುವ ಪ್ರತಿಯೊಬ್ಬರೂ ಅವರೊಂದಿಗಿದ್ದಾರೆ. ಯಾವುದೇ ಒತ್ತಡಕ್ಕೂ ಮಣಿಯದೆ ಸತ್ಯ ಮತ್ತು ಕಾನೂನಿನ ಮಾರ್ಗದಲ್ಲಿ ಹೋರಾಟ ಮುಂದುವರಿಸಬೇಕು,” ಎಂದು ಹೇಳಿದರು.

ಅಂತಿಮವಾಗಿ ಅವರು, “ತನಿಖಾ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು, ಕಾನೂನಿನ ಮುಂದೆ ಎಲ್ಲರೂ ಸಮಾನರಾಗಿರಬೇಕು ಮತ್ತು ರಾಜಕೀಯ ಪ್ರತೀಕಾರಕ್ಕೆ ಯಾವುದೇ ಸ್ಥಾನ ಇರಬಾರದು. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳೇ ಅಂತಿಮವಾಗಿ ಜಯಿಸಬೇಕು” ಎಂದು ಹೇಳಿದರು.

ಹೆಚ್ಚಿನ ಸುದ್ದಿ