Saturday, August 8, 2026
Homeರಾಜ್ಯಮಕ್ಕಳ ಹಕ್ಕುಗಳ ರಕ್ಷಣೆಗೆ ಗ್ರಾಮದಿಂದ ರಾಷ್ಟ್ರಮಟ್ಟದವರೆಗೆ ಸಮನ್ವಯ ವ್ಯವಸ್ಥೆ ಬಲಪಡಿಸಬೇಕು

ಮಕ್ಕಳ ಹಕ್ಕುಗಳ ರಕ್ಷಣೆಗೆ ಗ್ರಾಮದಿಂದ ರಾಷ್ಟ್ರಮಟ್ಟದವರೆಗೆ ಸಮನ್ವಯ ವ್ಯವಸ್ಥೆ ಬಲಪಡಿಸಬೇಕು

ಮಿಷನ್ ವಾತ್ಸಲ್ಯದ ಆಶಯದಂತೆ ಮಗು ಕೇಂದ್ರಿತ ಆಡಳಿತಕ್ಕೆ ಆದ್ಯತೆ ನೀಡಲು ಕರೆ

ಮುಂಡಗೋಡ, ಆಗಸ್ಟ್ 8: ಮಕ್ಕಳ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಲು ಗ್ರಾಮ, ವಾರ್ಡ್, ಪಂಚಾಯತ್, ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ರಕ್ಷಣಾ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಸಮನ್ವಯಗೊಳಿಸಿ ಬಲಪಡಿಸುವ ಅಗತ್ಯವಿದೆ ಎಂದು ಕಾರ್ಯಾಗಾರದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಲೋಯೋಲ ವಿಕಾಸ ಕೇಂದ್ರ, ಮುಂಡಗೋಡದಲ್ಲಿ ನಡೆದ ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣಾ ವ್ಯವಸ್ಥೆಗಳು ಹಾಗೂ ಮಿಷನ್ ವಾತ್ಸಲ್ಯ ಕುರಿತು ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಸಂಪನ್ಮೂಲ ವ್ಯಕ್ತಿಗಳು, ಮಕ್ಕಳ ಬದುಕುವ, ಅಭಿವೃದ್ಧಿ ಹೊಂದುವ, ರಕ್ಷಣೆ ಪಡೆಯುವ ಮತ್ತು ಭಾಗವಹಿಸುವಿಕೆಯ ಹಕ್ಕುಗಳನ್ನು ಖಾತ್ರಿಪಡಿಸುವುದು ಸಮಾಜ ಹಾಗೂ ಸರ್ಕಾರದ ಜಂಟಿ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು.

ಪಂಚಾಯತ್ ವ್ಯವಸ್ಥೆಯ ಸಮನ್ವಯದೊಂದಿಗೆ ವಿಸಿಪಿಸಿ, ಸಿಪಿಸಿ, ಡಬ್ಲೂಸಿಪಿಸಿ, ಟಿಸಿಪಿಸಿ ಹಾಗೂ ಡಿಸಿಪಿಸಿ ಸೇರಿದಂತೆ ವಿವಿಧ ಮಕ್ಕಳ ರಕ್ಷಣಾ ಸಮಿತಿಗಳ ರಚನೆ, ಅನುಷ್ಠಾನ ಮತ್ತು ನಿರಂತರ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಮಕ್ಕಳ ಹಕ್ಕುಗಳ ಉಲ್ಲಂಘನೆಯ ಸಂದರ್ಭದಲ್ಲಿ ಕೇವಲ ದೂರು ಸ್ವೀಕರಿಸುವುದಕ್ಕೆ ಸೀಮಿತವಾಗದೆ, ತ್ವರಿತವಾಗಿ ಸ್ಪಂದಿಸಿ ಮಗುವಿಗೆ ಅಗತ್ಯವಿರುವ ರಕ್ಷಣೆ, ಪುನರ್ವಸತಿ, ಸಮಾಲೋಚನೆ ಹಾಗೂ ಇತರ ಸೇವೆಗಳನ್ನು ತಲುಪಿಸುವ ವ್ಯವಸ್ಥೆ ರೂಪಿಸಬೇಕು ಎಂದು ತಿಳಿಸಲಾಯಿತು.

1098 ಮಕ್ಕಳ ಸಹಾಯವಾಣಿ ಕುರಿತು ಅರಿವು

ಮಕ್ಕಳಿಗೆ ತುರ್ತು ಪರಿಸ್ಥಿತಿ ಎದುರಾದಾಗ ಮಕ್ಕಳ ಸಹಾಯವಾಣಿ 1098/112 ಅನ್ನು ಪರಿಣಾಮಕಾರಿಯಾಗಿ ಬಳಸುವ ಕುರಿತು ಶಿಬಿರಾರ್ಥಿಗಳಿಗೆ ಪ್ರಾಯೋಗಿಕ ಮಾಹಿತಿ ನೀಡಲಾಯಿತು. ಬಾಲ್ಯವಿವಾಹ, ಬಾಲಕಾರ್ಮಿಕತೆ, ಮಕ್ಕಳ ಮೇಲಿನ ದೌರ್ಜನ್ಯ, ನಿರ್ಲಕ್ಷ್ಯ, ಶೋಷಣೆ, ಕಾಣೆಯಾದ ಮಕ್ಕಳು ಹಾಗೂ ಇತರ ಸಂಕಷ್ಟದ ಸಂದರ್ಭಗಳಲ್ಲಿ ಮಕ್ಕಳಿಗೆ ತಕ್ಷಣದ ನೆರವು ದೊರಕುವಂತೆ ಸಮಾಜ, ಕುಟುಂಬ, ಶಾಲೆ, ಪಂಚಾಯತ್ ಮತ್ತು ಸಂಬಂಧಿತ ಇಲಾಖೆಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಲಾಯಿತು.

ಮಿಷನ್ ವಾತ್ಸಲ್ಯ: ಮಗು ಕೇಂದ್ರಿತ ಆಡಳಿತಕ್ಕೆ ಒತ್ತು

ಮಿಷನ್ ವಾತ್ಸಲ್ಯ ಯೋಜನೆಯ ಗುರಿ, ಉದ್ದೇಶ ಹಾಗೂ ಅದರಡಿ ಕೈಗೊಳ್ಳಬೇಕಾದ ವಿವಿಧ ಚಟುವಟಿಕೆಗಳ ಕುರಿತು ವಿವರವಾದ ಮಾಹಿತಿ ನೀಡಲಾಯಿತು. ಆಡಳಿತಾತ್ಮಕ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಸರ್ಕಾರಿ ಯೋಜನೆಗಳನ್ನು ರೂಪಿಸುವಾಗ ಮಕ್ಕಳ ಹಿತಾಸಕ್ತಿ ಮತ್ತು ಮಕ್ಕಳ ಹಕ್ಕುಗಳನ್ನು ಕೇಂದ್ರದಲ್ಲಿರಿಸಬೇಕು ಎಂದು ಒತ್ತಿ ಹೇಳಲಾಯಿತು.

ಮಕ್ಕಳು ಸಂತೋಷಕರ ಹಾಗೂ ಸುರಕ್ಷಿತ ಕೌಟುಂಬಿಕ ಪರಿಸರದಲ್ಲಿ ಬೆಳೆಯಲು ಕುಟುಂಬಗಳಿಗೆ ಬಲಿಷ್ಠ ಸಾಮಾಜಿಕ ಸುರಕ್ಷತಾ ವ್ಯವಸ್ಥೆಯ ಬೆಂಬಲ ಅಗತ್ಯವಿದೆ. ಕಷ್ಟದ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ಕುಟುಂಬ ಮತ್ತು ಸಮುದಾಯದೊಳಗಿನ ಸಾಂಸ್ಥಿಕೇತರ ಆರೈಕೆ, ಅಗತ್ಯವಿದ್ದಲ್ಲಿ ಸಾಂಸ್ಥಿಕ ಆರೈಕೆ, ಆಪ್ತ ಸಮಾಲೋಚನೆ, ಪುನರ್ವಸತಿ ಮತ್ತು ಬೆಂಬಲ ಸೇವೆಗಳನ್ನು ಒದಗಿಸುವ ವ್ಯವಸ್ಥೆ ಬಲಪಡಿಸಬೇಕು ಎಂದು ತಿಳಿಸಲಾಯಿತು.

ವಿವಿಧ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯಿಂದ ಬರುವ ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಸಂದರ್ಭಾಧಾರಿತ ಪರಿಹಾರಗಳನ್ನು ರೂಪಿಸುವುದು, ನವೀನ ಪರಿಹಾರಗಳನ್ನು ಉತ್ತೇಜಿಸುವುದು ಮತ್ತು ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ನಡುವಿನ ಸಹಭಾಗಿತ್ವವನ್ನು ಬಲಪಡಿಸುವುದು ಮಿಷನ್ ವಾತ್ಸಲ್ಯದ ಪ್ರಮುಖ ಆಶಯಗಳಲ್ಲಿ ಒಂದಾಗಿದೆ ಎಂದು ವಿವರಿಸಲಾಯಿತು.

ಮಕ್ಕಳ ನ್ಯಾಯ ವ್ಯವಸ್ಥೆ ಬಲಪಡಿಸುವ ಅಗತ್ಯ

ಮಕ್ಕಳ ನ್ಯಾಯ ವ್ಯವಸ್ಥೆಯ ಕಡ್ಡಾಯ ವ್ಯವಸ್ಥಿತ ಅಭಿವೃದ್ಧಿ ಹಾಗೂ ಬಲಪಡಿಸುವಿಕೆಗೆ ಆದ್ಯತೆ ನೀಡಬೇಕು. ಮಕ್ಕಳ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ (UNCRC) ಹಾಗೂ ಮಕ್ಕಳ ದತ್ತು ಪ್ರಕ್ರಿಯೆಗೆ ಸಂಬಂಧಿಸಿದ ಹೇಗ್ ಒಡಂಬಡಿಕೆ ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಬದ್ಧತೆಗಳ ಆಶಯಗಳನ್ನು ದೇಶದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯವಿದೆ ಎಂದು ಕಾರ್ಯಾಗಾರದಲ್ಲಿ ತಿಳಿಸಲಾಯಿತು.

ಮಿಷನ್ ವಾತ್ಸಲ್ಯವು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಪೂರಕವಾಗಿ ಮಕ್ಕಳ ಅಭಿವೃದ್ಧಿ ಮತ್ತು ಮಕ್ಕಳ ರಕ್ಷಣೆಯ ಆದ್ಯತೆಗಳನ್ನು ಸಾಧಿಸಲು ಮಾರ್ಗದರ್ಶಕ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಮಕ್ಕಳ ಹಕ್ಕುಗಳ ರಕ್ಷಣೆಗೆ ಇರುವ ಸಾಂಸ್ಥಿಕ ವ್ಯವಸ್ಥೆಗಳನ್ನು ಗ್ರಾಮದಿಂದ ರಾಷ್ಟ್ರಮಟ್ಟದವರೆಗೆ ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಿ, ಸಮನ್ವಯ ಮತ್ತು ಉತ್ತರದಾಯಿತ್ವವನ್ನು ಖಾತ್ರಿಪಡಿಸಬೇಕು ಎಂದು ಸಂಪನ್ಮೂಲ ವ್ಯಕ್ತಿಗಳು ಹೇಳಿದರು.

ಚಟುವಟಿಕೆಗಳ ಮೂಲಕ ತರಬೇತಿ

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಮಧ್ಯೆ ಮಧ್ಯೆ ವಿವಿಧ ಚಟುವಟಿಕೆಗಳನ್ನು ನಡೆಸಿ, ಪ್ರಶ್ನೆಗಳನ್ನು ಕೇಳುವ ಮೂಲಕ ಶಿಬಿರಾರ್ಥಿಗಳ ಗಮನವನ್ನು ನಿರಂತರವಾಗಿ ಸೆಳೆಯುತ್ತಿದ್ದರು. ಇದರಿಂದ ತರಬೇತಿಯು ಕೇವಲ ಉಪನ್ಯಾಸಕ್ಕೆ ಸೀಮಿತವಾಗದೆ, ಸಹಭಾಗಿತ್ವದ ಹಾಗೂ ಪ್ರಾಯೋಗಿಕ ಕಲಿಕೆಯ ವಾತಾವರಣ ನಿರ್ಮಾಣವಾಯಿತು. ಶಿಬಿರಾರ್ಥಿಗಳು ಉತ್ಸಾಹದಿಂದ ಚರ್ಚೆಗಳಲ್ಲಿ ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸಿದರು.

76 ಶಿಬಿರಾರ್ಥಿಗಳ ಭಾಗವಹಿಸುವಿಕೆ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಶಿರಸಿ, ಹಳಿಯಾಳ, ಸಿದ್ದಾಪುರ ಹಾಗೂ ಯಲ್ಲಾಪುರ ಸೇರಿದಂತೆ ಐದು ತಾಲೂಕುಗಳಿಂದ ಒಟ್ಟು 76 ಶಿಬಿರಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ, ಸ್ಕೋಡ್‌ವೆಸ್, KRWCDS ಕಾರವಾರ, ರಾಘವೇಂದ್ರ ಬುದ್ಧಿಮಾಂದ್ಯ ಶಾಲೆ ಯಲ್ಲಾಪುರ, ಜ್ಞಾನಪ್ರಜ್ಞಾ ಅಂಧ ಮಕ್ಕಳ ಶಾಲೆ, ಶಿಕ್ಷಣ ಫೌಂಡೇಶನ್, ಹೋಲಿಕ್ರಾಸ್ ಮೈನಳ್ಳಿ, ವಿವೇಕ ಪ್ರಗತಿ ಹಳಿಯಾಳ, ಎಸ್‌ಡಿಎಂಸಿ ಸದಸ್ಯರು, ಲೋಯೋಲ ಹಾಗೂ ಲೋಯೋಲ ವಿಕಾಸ ಕೇಂದ್ರ ವಸತಿನಿಲಯದ ಶಿಕ್ಷಕ-ಶಿಕ್ಷಕಿಯರು ಮತ್ತು ಸಿಬ್ಬಂದಿ, ಸೇಂಟ್ ಅಲೋಶಿಯಸ್ ಡೀಮ್ಡ್ ಟು ಬಿ ಯುನಿವರ್ಸಿಟಿ ವಿದ್ಯಾರ್ಥಿಗಳು, ಗ್ರಾಮ ಅಭಿವೃದ್ಧಿ ಸಮಿತಿಗಳು ಹಾಗೂ ಶಿಕ್ಷಣ ಸಮಿತಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದ ಉದ್ಘಾಟನಾ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಸುಮಾ ಜಿ., ಲೋಯೋಲ ವಿಕಾಸ ಕೇಂದ್ರದ ನಿರ್ದೇಶಕ ಫಾ. ಅನಿಲ್ ಡಿಸೋಜ, ಸಂಪನ್ಮೂಲ ವ್ಯಕ್ತಿ ಡಾ. ರಾಘವೇಂದ್ರ ಭಟ್, ಸೇಂಟ್ ಅಲೋಶಿಯಸ್ ಡೀಮ್ಡ್ ಟು ಬಿ ಯುನಿವರ್ಸಿಟಿಯ ವಿದ್ಯಾರ್ಥಿ ವಾಗು ಕೋಕರೆ ಹಾಗೂ ಸ್ಕೋಡ್‌ವೆಸ್ ಸಂಸ್ಥೆ, ಶಿರಸಿಯ ಗೀತಾ ಸಾಲಸ್ಕರ್,ಸಂಪನ್ಮೂಲ ವ್ಯಕ್ತಿಗಳು. ಡಾ. ರಾಘವೇಂದ್ರ ಭಟ್, ಪ್ರಾದೇಶಿಕ ಸಂಯೋಜಕರು, ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಕೊಪ್ಪಳ ಜಿಲ್ಲೆ. ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಮಂಗಳಾ ಮೊರೆ ನಿವ೯ಹಿಸಿದರು. ಸಂವಿಧಾನದ ಪೀಠಿಕೆಯನ್ನು ತೇಜಸ್ವಿನಿ ಬೇಗೂರು ವಾಚಿಸಿದರು. ಲಕ್ಷ್ಮಣ ಮುಳೆ ಸ್ವಾಗತಿಸಿದರು. ದೀಪಾ ಕೋಳೂರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ನಾಗರಾಜ ಕಟ್ಟಿಮನಿ ವಂದಿಸಿದರು.

ಕಾರ್ಯಕ್ರಮದ ವರದಿಯನ್ನು ಮಲ್ಲಮ್ಮ ನೀರಲಗಿ ಹಾಗೂ ಭರಮಣ್ಣ ಚಕ್ರಸಾಲಿ ನಿರ್ವಹಿಸಿದರು. ತರಬೇತಿಯಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಹೆಚ್ಚಿನ ಸುದ್ದಿ