ಮುಂಡಗೋಡ: ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ನಡೆದ ಲೋಪಗಳಿಂದ ಸಮಸ್ಯೆಗೆ ಒಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ,
ಹಾಗೂ ಕೆಪಿಎಸ್‌ಸಿ (KPSC) ಯಲ್ಲಿ ನಡೆದಿರುವ ಹಗರಣದ ಕುರಿತು ಉನ್ನತ ಮಟ್ಟದ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ ನಡೆಸುವಂತೆ
ಮತ್ತು
ಆದಷ್ಟು ಬೇಗ ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಖಾಯಂ ನೇಮಕಾತಿ ಮಾಡಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದರು.




ಸರ್ಕಾರಿ ನೌಕರಿ ಅದು ಕೇವಲ ಕೆಲಸವಲ್ಲ ಅದೆಷ್ಟೋ ಯುವಕ, ಯುವತಿಯರ ಜೀವನದ ಕನಸಾಗಿರುತ್ತದೆ . ಅಂತಃ ಸಂಧರ್ಬದಲ್ಲಿ ಕೆಪಿಎಸ್ಸಿಯ ನೇಮಕಾತಿಯಲ್ಲಿ ಆದ ಬ್ರಷ್ಟಾಚಾರದ ಹಗರಣವನ್ನು ಹಾಗೂ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಸಂಧರ್ಬದಲ್ಲಿ ವಿಜಯಪುರದ ತಿಕೋಟಾದಲ್ಲಿ ಆದ ಗೊಂದಲದ ಘಟನೆಯನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ .
ಇತ್ತೀಚೆಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸುಮಾರು 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ಜುಲೈ 17 ರಂದು ಹೊರಬಿದ್ದ ಫಲಿತಾಂಶದಲ್ಲಿ ಅಕ್ರಮ ನಡೆದಿರುವುದು ಬಯಲಾಗಿದೆ. ಒಂದು ಹುದ್ದೆಗೆ ಬರೋಬ್ಬರಿ ₹80 ಲಕ್ಷ ರೂಪಾಯಿವರೆಗೆ ಬೆಲೆ ಕಟ್ಟಿ ಮಾರಾಟ ಮಾಡಿರುವುದು, ಅಭ್ಯರ್ಥಿಗಳಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಹಾಗೂ OMR ಶೀಟ್ ಟ್ಯಾಂಪರಿಂಗ್‌ನಂತಹ ಆರೋಪಗಳು ಕೇಳಿಬಂದಿವೆ. ಕಷ್ಟಪಟ್ಟು ಪರೀಕ್ಷೆ ಬರೆದ ಪ್ರತಿಭಾವಂತ ಅಭ್ಯರ್ಥಿಗಳು 300 ಅಂಕ ದಾಟಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರೆ, KPSC ಯಲ್ಲಿ ಪ್ರಭಾವ ಹೊಂದಿದವರು, ಹಣ ನೀಡಿದವರು ಮೆರಿಟ್ ಲಿಸ್ಟ್‌ನಲ್ಲಿ ಜಾಗ ಕಷ್ಟಪಟ್ಟು ಶ್ರಮಿಸಿದ ಲಕ್ಷಾಂತರ ಆಕಾಂಕ್ಷಿಗಳಿಗೆ ಎಸಗಿದ ದ್ರೋಹವಾಗಿದೆ” ಎಂದು ದೂರಿದರು.
ಅತ್ಯಂತ ಜವಾಬ್ದಾರಿಯುತ ಹಾಗೂ ಸಾಂವಿಧಾನಿಕ ಉನ್ನತ ಸ್ಥಾನದಲ್ಲಿರುವ KPSC ಯ ಅಧ್ಯಕ್ಷರು ಸುಳ್ಳು ದಾಖಲೆ ಹಾಗೂ ತಮ್ಮ ಪ್ರಭಾವವನ್ನು ಬಳಸಿ ತಮ್ಮ ಮಕ್ಕಳಿಗೆ ಸರ್ಕಾರಿ ಹುದ್ದೆಯು ದೊರೆಯುವಂತೆ ಮಾಡಿರುವುದು ಅವರ ಹುದ್ದೆಗೆ ಅವರು ಮಾಡಿದ ಒಂದು ಕಳಂಕವಾಗಿದೆ. ಇಂತಹ ಘಟನೆಗಳ ನಡುವೆ ರಾಜ್ಯ ಸರ್ಕಾರವು ತಮ್ಮ ಕಣ್ಣಮುಂದೆಯೇ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ವಿಫಲವಾಗಿರುವುದು ಅತ್ಯಂತ ಶೋಚನೀಯ ಸಂಗತಿ. ಲೋಕಸೇವಾ ಆಯೋಗದಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಇಂತಹ ಅಸಹ್ಯಕರ ಕೆಲಸಕ್ಕೆ ಆಸ್ಪದ ನೀಡಿರುವುದು ರಾಜ್ಯದ ಲಕ್ಷಾಂತರ ಯುವಜನತೆಯ ಕೋಪ ಮತ್ತು ನಿರಾಶೆಗೆ ಕಾರಣವಾಗಿದೆ. ಇಂತಹ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳಿಂದಾಗಿ, ರಾಜ್ಯದ ಪ್ರಾಮಾಣಿಕ ಹಾಗೂ ಶ್ರಮಜೀವಿ ಯುವಜನತೆಗೆ KPSC ಸಂಸ್ಥೆಯ ಮೇಲಿದ್ದ ಕನಿಷ್ಠ ಗೌರವ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಆ ಕಾರಣದಿಂದ ಸರ್ಕಾರ ಕೆಪಿಎಸ್ಸಿ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ವಹಿಸುವಂತೆ ಎಬಿವಿಪಿ ಆಗ್ರಹಿಸುತ್ತದೆ .
ದೇಶದಲ್ಲಿ ಪರೇಕ್ಷೆಯ ವಿಚಾರದಲ್ಲಿ ಎಷ್ಟೆಲ್ಲಾ ಚರ್ಚೆಗಳು ನಡೆಯುತ್ತಿರುವ ಸಂಧರ್ಭದಲ್ಲೂ ರಾಜ್ಯ ಸರಕಾರ ಪೋಲಿಸ್ ಕಾನ್ಸ್ಟೇಬಲ್ ಪರೀಕ್ಷೆಯನ್ನು ಸೂಕ್ತವಾಗಿ ನಡೆಸಲು ಸಾಧ್ಯವಗಡಿರುವುದು ವಿಪರ್ಯಾಸವಾಗಿದೆ .
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ದಿನಾಂಕ 03-08-2026 ರಂದು ನಡೆದ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ನಿಗದಿತ ಸಮಯಕ್ಕೆ ವಿತರಣೆ ಮಾಡದ ಪರಿಣಾಮ ಗಂಭೀರ ಅವ್ಯವಸ್ಥೆ ಉಂಟಾಗಿದೆ. ಈ ಘಟನೆಯಿಂದ ಅನೇಕ ಅಭ್ಯರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಪರೀಕ್ಷೆಯನ್ನು ಸಮರ್ಪಕವಾಗಿ ಬರೆಯಲು ಸಾಧ್ಯವಾಗದೆ ಅನ್ಯಾಯಕ್ಕೆ ಒಳಗಾಗಿದ್ದಾರೆ.
ಪೊಲೀಸ್ ನೇಮಕಾತಿ ಪರೀಕ್ಷೆಯಂತಹ ಮಹತ್ವದ ಪರೀಕ್ಷೆಗಳು ಅತ್ಯಂತ ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಯಬೇಕು. ಆದರೆ ನಡೆದಿರುವ ಲೋಪದಿಂದ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಈ ಘಟನೆಯ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಸಮಸ್ಯೆಗೆ ಒಳಗಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವ ಮುಖಾಂತರ ಅವರಿಗೆ ಅವಕಾಶ ನೀಡಬೇಕೆಂದು ಆಗ್ರಹಿಸುತ್ತೇವೆ. ಇದರ ಸಂಪೂರ್ಣ ಹೊಣೆಯನ್ನು ಗೃಹ ಮಂತ್ರಿಗಳು ಹಾಗೂ
ಕೆ. ಇ. ಏ ಯ ನಿರ್ದೇಶಕರು ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತೇವೆ .
ಇವತ್ತಿನ ರಾಜ್ಯದ ಶೈಕ್ಷಣಿಕ ಪರಿಸ್ತಿಯನ್ನು ಅವಲೋಕನ ಮಾಡಿದಾಗ ರಾಜ್ಯದ 450 ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಶೂನ್ಯ ಪ್ರವೇಶಾತಿ ಆಗಿದೆ . ಇದಕ್ಕೆಲ್ಲ ಮುಖ್ಯ ಕಾರಣ ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು . ಆ ಕಾರಣದಿಂದ ಅದಷ್ಟು ಬೇಗ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಖಾಯಂ ನೇಮಕಾತಿ ಮಾಡಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ .
ವರದಿ: ಬಸಯ್ಯ ತೋಟಯ್ಯನವರ ಮುಂಡಗೋಡ
