Saturday, August 1, 2026
Homeಉದ್ಯೋಗಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಕಟ್ಟುನಿಟ್ಟಿನ ಡ್ರೆಸ್ ಕೋಡ್ ಜಾರಿ

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಕಟ್ಟುನಿಟ್ಟಿನ ಡ್ರೆಸ್ ಕೋಡ್ ಜಾರಿ

ಬೆಂಗಳೂರು, ಜುಲೈ 31: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿರುವ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕಾದ ಡ್ರೆಸ್ ಕೋಡ್ (ವಸ್ತ್ರ ಸಂಹಿತೆ) ಹಾಗೂ ಪರೀಕ್ಷಾ ಕೇಂದ್ರದಲ್ಲಿ ನಿಷೇಧಿತ ವಸ್ತುಗಳ ಕುರಿತು ಸಮಗ್ರ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಪರೀಕ್ಷೆಯನ್ನು ಪಾರದರ್ಶಕ, ನ್ಯಾಯಸಮ್ಮತ ಹಾಗೂ ನಕಲುಮುಕ್ತವಾಗಿ ನಡೆಸುವ ಉದ್ದೇಶದಿಂದ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.

ಪ್ರಾಧಿಕಾರದ ಸೂಚನೆಯಂತೆ, ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಫೋನ್, ಬ್ಲೂಟೂತ್ ಸಾಧನಗಳು, ಇಯರ್‌ಫೋನ್, ಮೈಕ್ರೋಫೋನ್, ಪೇಜರ್, ಮೈಕ್ರೋಚಿಪ್, ಕ್ಯಾಮೆರಾ, ಪೆನ್ ಡ್ರೈವ್, ಎಲೆಕ್ಟ್ರಾನಿಕ್ ಪೆನ್, ಸ್ಕ್ಯಾನರ್, ಕೈಗಡಿಯಾರ, ಸ್ಮಾರ್ಟ್ ವಾಚ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಅಥವಾ ಸಂವಹನ ಸಾಧನಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿರುವುದಿಲ್ಲ.

ಇದರ ಜೊತೆಗೆ, ಯಾವುದೇ ರೀತಿಯ ಆಹಾರ ಪದಾರ್ಥಗಳು, ನೀರಿನ ಬಾಟಲಿ, ಪಾನೀಯಗಳು, ಪುಸ್ತಕಗಳು, ಚೀಟಿಗಳು, ಜ್ಯಾಮಿತಿ ಬಾಕ್ಸ್, ಪೆನ್ಸಿಲ್ ಬಾಕ್ಸ್, ಪ್ಲಾಸ್ಟಿಕ್ ಪೌಚ್, ಕ್ಯಾಲ್ಕುಲೇಟರ್, ಸ್ಕೇಲ್, ಬರೆಯುವ ಕಾಗದ, ಎರೇಸರ್, ಲಾಗ್ ಟೇಬಲ್ ಸೇರಿದಂತೆ ಬರಹವಿರುವ ಯಾವುದೇ ವಸ್ತುಗಳನ್ನು ಪರೀಕ್ಷಾ ಕೇಂದ್ರದೊಳಗೆ ತರಲು ಸಂಪೂರ್ಣ ನಿಷೇಧಿಸಲಾಗಿದೆ.

ಉಡುಪುಗಳ ವಿಷಯದಲ್ಲಿಯೂ ವಿಶೇಷ ನಿಯಮಗಳನ್ನು ರೂಪಿಸಲಾಗಿದ್ದು, ಶೂ ಅಥವಾ ಬೂಟು, ಕ್ಯಾಪ್, ಕಿವಿ, ತಲೆ ಅಥವಾ ಮುಖ ಮುಚ್ಚುವ ಉಡುಪುಗಳು, ಬ್ಯಾಗ್, ಪರ್ಸ್ ಹಾಗೂ ಹೆಚ್ಚು ಜೇಬುಗಳಿರುವ ಜೀನ್ಸ್ ಪ್ಯಾಂಟ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶವಿರುವುದಿಲ್ಲ. ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಭದ್ರತಾ ತಪಾಸಣೆಗೆ ಸಹಕರಿಸಬೇಕೆಂದು ಸೂಚಿಸಲಾಗಿದೆ.

ಆದಾಗ್ಯೂ, ಪುರುಷ ಅಭ್ಯರ್ಥಿಗಳು ಜನಿವಾರ, ಶಿವಧಾರ, ಲಿಂಗ ಹಾಗೂ ಸೊಂಟದ ದಾರ ಧರಿಸಬಹುದಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಮಾಂಗಲ್ಯ ಸರ, ಬಳೆಗಳು, ಮೂಗುತಿ, ಕಾಲುಂಗುರ, ಕಾಲ್ಗೆಜ್ಜೆ, ಕುಂಕುಮ ಅಥವಾ ಹಣೆಬೊಟ್ಟು ಹಾಗೂ ಉಂಗುರ ಧರಿಸಲು ಅವಕಾಶ ನೀಡಲಾಗಿದೆ.

ಧಾರ್ಮಿಕ ಸಂಪ್ರದಾಯದ ಉಡುಪು ಧರಿಸಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೂ 2½ ಗಂಟೆಗಳ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಡ್ರೆಸ್ ಕೋಡ್ ಅಧಿಕಾರಿಯ ಮುಂದೆ ಹಾಜರಾಗಬೇಕು. ಪ್ರತ್ಯೇಕ ಕೊಠಡಿಯಲ್ಲಿ ತಪಾಸಣೆ ನಡೆಸಿದ ನಂತರವೇ ಅವರಿಗೆ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಗುವುದು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಪರೀಕ್ಷೆಯ ಪಾವಿತ್ರ್ಯ, ಪಾರದರ್ಶಕತೆ ಹಾಗೂ ನಿಷ್ಪಕ್ಷಪಾತತೆಯನ್ನು ಕಾಪಾಡುವ ಉದ್ದೇಶದಿಂದ ಎಲ್ಲ ಅಭ್ಯರ್ಥಿಗಳು ಪ್ರಕಟಿಸಿರುವ ಡ್ರೆಸ್ ಕೋಡ್ ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಪ್ರವೇಶ ನಿರಾಕರಿಸುವ ಸಾಧ್ಯತೆ ಇರುವುದರಿಂದ, ಅಭ್ಯರ್ಥಿಗಳು ಮುಂಚಿತವಾಗಿ ಅಗತ್ಯ ಸಿದ್ಧತೆ ಮಾಡಿಕೊಂಡು ನಿಗದಿತ ಸಮಯಕ್ಕಿಂತ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮನವಿ ಮಾಡಿದೆ.

ಅಭ್ಯರ್ಥಿಗಳಿಗೆ ವಿಶೇಷ ಸಲಹೆ: ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಬ್ಯಾಗ್, ಶೂ ಸೇರಿದಂತೆ ನಿಷೇಧಿತ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರದೇ ಇರುವುದು ಉತ್ತಮ. ಅಂತಹ ವಸ್ತುಗಳನ್ನು ಸಾಧ್ಯವಾದರೆ ಮನೆಯಲ್ಲಿಯೇ ಬಿಟ್ಟು ಬನ್ನಿ. ಅನಿವಾರ್ಯವಾಗಿ ತಂದಿದ್ದರೆ, ನಿಮ್ಮೊಂದಿಗೆ ಬಂದಿರುವ ಪೋಷಕರು ಅಥವಾ ಸಂಬಂಧಿಕರ ವಶಕ್ಕೆ ನೀಡಿ ನಂತರವೇ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಿ. ಇದರಿಂದ ಅನಗತ್ಯ ತೊಂದರೆಗಳನ್ನು ತಪ್ಪಿಸಿಕೊಳ್ಳಬಹುದು.

ಹೆಚ್ಚಿನ ಸುದ್ದಿ