ಬೆಂಗಳೂರು, ಸೆ. 24: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯಗಳ ಹಿತಾಸಕ್ತಿಗಳನ್ನು ಪರಿಣಾಮಕಾರಿಯಾಗಿ ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಜ್ಯದಲ್ಲೂ ಪ್ರತ್ಯೇಕ ಆಯೋಗಗಳನ್ನು ರಚಿಸುವಂತೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (NCST) ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಆಯೋಗದ ಅಧ್ಯಕ್ಷ ಅಂತರ್ ಸಿಂಗ್ ಆರ್ಯ ತಿಳಿಸಿದ್ದಾರೆ.
ನಗರದಲ್ಲಿ ನಡೆದ ರಾಜ್ಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ, ದೂರುಗಳ ತ್ವರಿತ ಪರಿಹಾರ ಹಾಗೂ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗೆ ಪ್ರತ್ಯೇಕ ಎಸ್ಟಿ ಆಯೋಗದ ಅಗತ್ಯವಿದೆ ಎಂದು ಹೇಳಿದರು.
ಭಾರತ ಸಂವಿಧಾನದ 338ಎನೇ ವಿಧಿ ಅಡಿಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ರಚನೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವುದು, ಪರಿಶಿಷ್ಟ ಪಂಗಡಗಳ ರಕ್ಷಣೆ, ಕಲ್ಯಾಣ ಹಾಗೂ ಸಾಮಾಜಿಕ–ಆರ್ಥಿಕ ಅಭಿವೃದ್ಧಿಗೆ ಅಗತ್ಯ ಶಿಫಾರಸುಗಳನ್ನು ನೀಡುವುದು ಆಯೋಗದ ಪ್ರಮುಖ ಕರ್ತವ್ಯವಾಗಿದೆ ಎಂದು ಅವರು ವಿವರಿಸಿದರು.
ದಕ್ಷಿಣ ಭಾರತದ ಮೂರು ದಿನಗಳ ಪ್ರವಾಸದ ಅಂಗವಾಗಿ ತಮಿಳುನಾಡಿನ ಬಳಿಕ ಕರ್ನಾಟಕದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಪ್ರಧಾನಮಂತ್ರಿಯವರ ವಿಶೇಷ ಅಭಿಯಾನದ ಭಾಗವಾಗಿ ಪರಿಶಿಷ್ಟ ಪಂಗಡಗಳ ನೈಜ ಸ್ಥಿತಿಗತಿಗಳ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ, ಜಿಲ್ಲಾ ಮಟ್ಟದಲ್ಲಿ ದಾಖಲಾಗಿರುವ ಪರಿಶಿಷ್ಟ ಪಂಗಡಗಳ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಸುಮಾರು ಶೇ. 7 ಇದ್ದರೂ, ಮೀಸಲಾತಿ ಕೇವಲ ಶೇ. 3 ಮಾತ್ರ ಇರುವುದನ್ನು ದುರದೃಷ್ಟಕರ ಎಂದು ಅಭಿಪ್ರಾಯಪಟ್ಟ ಅವರು, ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಶೇ. 7ಕ್ಕೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಪರಿಶಿಷ್ಟ ಪಂಗಡಗಳ ವಿರುದ್ಧ ಅನ್ಯಾಯವಾಗಿರುವ ಪ್ರಕರಣಗಳಲ್ಲಿ ಸಾರ್ವಜನಿಕರು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಆನ್ಲೈನ್ ದೂರು ಪೋರ್ಟಲ್ ಮೂಲಕ ದೂರು ದಾಖಲಿಸಬಹುದಾಗಿದೆ ಎಂದು ತಿಳಿಸಿದ ಅವರು, ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಸ್ಥಳಾಂತರಗೊಳ್ಳುವ ಬುಡಕಟ್ಟು ಸಮುದಾಯಗಳ ಸಮಸ್ಯೆಗಳ ಬಗ್ಗೆ ಆಯೋಗ ಗಂಭೀರ ಗಮನಹರಿಸಿದೆ ಎಂದರು.
ರಾಜ್ಯದಲ್ಲಿ ಪಂಚಾಯತ್ ಚುನಾವಣೆಗಳು ನಡೆಯದೇ ಇರುವುದೂ ಪ್ರಮುಖ ಸಮಸ್ಯೆಯಾಗಿದ್ದು, ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡಗಳ ಸಮಸ್ಯೆಗಳನ್ನು ಆಲಿಸಲು ಒಂದು ತಿಂಗಳೊಳಗೆ ಸಂಬಂಧಿತ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಅವರು ಘೋಷಿಸಿದರು.
ಸಭೆಯಲ್ಲಿ ಆಯೋಗದ ಸದಸ್ಯ ಜಾಟೂತು ಹುಸೇನ್, ಜಂಟಿ ಕಾರ್ಯದರ್ಶಿ ಅಮಿತ್ ನಿರ್ಮಲ್, ನಿರ್ದೇಶಕರಾದ ಪೂರ್ಣೇಂದು ಕಾಂತ್, ಡಾ. ಪಿ. ಕಲ್ಯಾಣ ರೆಡ್ಡಿ ಹಾಗೂ ಕರ್ನಾಟಕದ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಗದೇವಿ ಹಿರೇಮಠ ಉಪಸ್ಥಿತರಿದ್ದರು.
ಎರಡು ದಿನಗಳ ಸಭೆಗಳ ಮುಖ್ಯಾಂಶಗಳು
ಸೆಪ್ಟೆಂಬರ್ 23ರಂದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವು ರಾಜ್ಯ ಮಟ್ಟದ ಲೀಡ್ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಶಿಷ್ಟ ಪಂಗಡದವರಿಗೆ ಬ್ಯಾಂಕಿಂಗ್ ಯೋಜನೆಗಳು ಸಮರ್ಪಕವಾಗಿ ತಲುಪುವಂತೆ ಸೂಚಿಸಿತು.
ನಂತರ ನಡೆದ ಸಭೆಯಲ್ಲಿ ಸಚಿವರು ಹಾಗೂ ಶಾಸಕರು ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಉಪಯೋಜನೆ (SCSP) ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ (TSP) ಅಡಿಯಲ್ಲಿ ಶೇ. 24.04ರಷ್ಟು ಅನುದಾನ ಮೀಸಲಿಟ್ಟು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿರುವುದಾಗಿ ತಿಳಿಸಿ, ಕೇಂದ್ರ ಸರ್ಕಾರವೂ ಇದೇ ಮಾದರಿಯಲ್ಲಿ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.
ಅದೇ ವೇಳೆ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ. 7ಕ್ಕೆ ಹೆಚ್ಚಿಸುವುದು, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಅನುದಾನ, ಮಹಿಳಾ ಸಬಲೀಕರಣಕ್ಕೆ ಹೆಚ್ಚುವರಿ ನೆರವು ಹಾಗೂ ಏಕಲವ್ಯ ಮಾದರಿ ವಸತಿ ಶಾಲೆಗಳ ನಿಯಮಗಳಲ್ಲಿ ಸಡಿಲಿಕೆ ನೀಡಿ ರಾಜ್ಯಕ್ಕೆ ಹೆಚ್ಚಿನ ಶಾಲೆಗಳನ್ನು ಮಂಜೂರು ಮಾಡುವಂತೆ ರಾಷ್ಟ್ರೀಯ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು.
