Monday, August 17, 2026
HomeUncategorizedತರಬೇತಿ ಹಂತದಲ್ಲೇ ಕೋಟಿ ಲಂಚ ಪಡೆದು ಜೈಲು ಪಾಲಾದ 2022ರ ಬ್ಯಾಚ್‌ನ ಐಪಿಎಸ್ ಅಧಿಕಾರಿ

ತರಬೇತಿ ಹಂತದಲ್ಲೇ ಕೋಟಿ ಲಂಚ ಪಡೆದು ಜೈಲು ಪಾಲಾದ 2022ರ ಬ್ಯಾಚ್‌ನ ಐಪಿಎಸ್ ಅಧಿಕಾರಿ

ರಾಯ್‌ಪುರ: ದೇಶದ ಅತ್ಯಂತ ಕಠಿಣ ಪರೀಕ್ಷೆ ಯುಪಿಎಸ್‌ಸಿ ತೇರ್ಗಡೆಯಾಗಿ ಐಪಿಎಸ್ ಅಧಿಕಾರಿಯಾದಾಗ ಊರ ತುಂಬಾ ಸಿಹಿ ಹಂಚಿ ಸಂಭ್ರಮಿಸಿದ ತಂದೆ-ತಾಯಿಯ ಹೆಮ್ಮೆ, ಅಕ್ಕಪಕ್ಕದ ಯುವಕರಿಗೆ ಮಾದರಿಯಾಗಬೇಕಿದ್ದ ಕನಸುಗಳೆಲ್ಲಾ ಕೆಲವೇ ತಿಂಗಳಲ್ಲಿ ಮಣ್ಣುಪಾಲಾಗಿವೆ. ಛತ್ತೀಸ್‌ಗಢ ಕೇಡರ್‌ನ 2022ರ ಬ್ಯಾಚ್‌ನ ಟ್ರೈನಿಂಗ್ ಐಪಿಎಸ್ ಅಧಿಕಾರಿ ರಾಹುಲ್ ಬನ್ಸಲ್, ಕೋಟಿ ರೂಪಾಯಿ ಲಂಚದ ಪ್ರಕರಣದಲ್ಲಿ ಸಿಲುಕಿ ಜೈಲಿನ ಕಂಬಿ ಎಣಿಸುವಂತಾಗಿದೆ.

​ಆನ್‌ಲೈನ್ ಸೈಬರ್ ವಂಚನೆ ಮತ್ತು ಅಕ್ರಮ ಲಾಟರಿ ದಂಧೆಯ ಹೈಪ್ರೊಫೈಲ್ ಪ್ರಕರಣವೊಂದನ್ನು ರಕ್ಷಿಸಲು ಹಾಗೂ ಆರೋಪಿಗಳಿಂದ ಪ್ರಕರಣವನ್ನು ಮುಚ್ಚಿಹಾಕಲು ಬರೋಬ್ಬರಿ 1 ಕೋಟಿ ರೂಪಾಯಿ ಹಣದ ಬೇಡಿಕೆಯಿಟ್ಟು, ಮುಂಗಡವಾಗಿ ಲಂಚ ಪಡೆದಿರುವುದು ಸಿಬಿಐ ಮತ್ತು ಭ್ರಷ್ಟಾಚಾರ ವಿರೋಧಿ ದಳದ (ACB) ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಇದರ ಬೆನ್ನಲ್ಲೇ ಅಧಿಕಾರಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

​ಐಐಟಿಯನ್‌ನಿಂದ ಆದಾಯ ತೆರಿಗೆ ಇಲಾಖೆ, ಅಲ್ಲಿಂದ ಐಪಿಎಸ್!
ರಾಜಸ್ಥಾನ ಮೂಲದ ರಾಹುಲ್ ಬನ್ಸಲ್ ಪ್ರತಿಷ್ಠಿತ ಐಐಟಿ ಬಿಎಚ್‌ಯುನಿಂದ (IIT BHU) ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ತದನಂತರ ಕೇಂದ್ರ ಸರ್ಕಾರದ ಎಸ್‌ಎಸ್‌ಸಿ (SSC) ಪರೀಕ್ಷೆ ಬರೆದು ಆದಾಯ ತೆರಿಗೆ ಇಲಾಖೆಯಲ್ಲಿ ನಿರೀಕ್ಷಕರಾಗಿ (Inspector) ಸೇವೆ ಸಲ್ಲಿಸಿದ್ದರು. 2022ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಫಲರಾಗಿ ಛತ್ತೀಸ್‌ಗಢ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಹಿನ್ನೆಲೆ ಎಷ್ಟೇ ಉತ್ತಮವಾಗಿದ್ದರೂ, ತರಬೇತಿಯ ಆರಂಭಿಕ ಹಂತದಲ್ಲೇ ವ್ಯವಸ್ಥೆಯ ಭ್ರಷ್ಟ ಸುಳಿಗೆ ಸಿಲುಕಿರುವುದು ಪೊಲೀಸ್ ಇಲಾಖೆಯನ್ನು ತೀವ್ರ ಮುಜುಗರಕ್ಕೀಡುಮಾಡಿದೆ.

​ವ್ಯವಸ್ಥೆಯ ವಿರುದ್ಧ ಜಾಲತಾಣಗಳಲ್ಲಿ ಆಕ್ರೋಶ:
ಯುಪಿಎಸ್‌ಸಿ ಪರೀಕ್ಷೆಯಲ್ಲಿ ‘ನೈತಿಕತೆ’ (Ethics) ವಿಷಯದಲ್ಲಿ ಅತ್ಯುತ್ತಮ ಅಂಕ ಪಡೆದು ಅಧಿಕಾರ ವಹಿಸಿಕೊಳ್ಳುವ ಯುವ ಅಧಿಕಾರಿಗಳು ವಾಸ್ತವದಲ್ಲಿ ಹೀಗೆ ಭ್ರಷ್ಟರಾಗುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಐಎಎಸ್ ಹಾಗೂ ಐಪಿಎಸ್ ಹುದ್ದೆಗಳಿಗೆ ನಡೆಯುವ ನೇರ ನೇಮಕಾತಿ ಪದ್ಧತಿ ಮತ್ತು ಅಧಿಕಾರಿಗಳ ಪ್ರೊಬೇಷನರಿ ಅವಧಿಯ ಉಸ್ತುವಾರಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗಳು ಆರಂಭವಾಗಿವೆ.

ಹೆಚ್ಚಿನ ಸುದ್ದಿ