Tuesday, May 19, 2026
Homeಜಿಲ್ಲಾ ಸುದ್ದಿಗಳುಬೆಳಗಾವಿಗ್ರಾಮೀಣ ಭಾಗದ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು; ಶಾಸಕ ಲಕ್ಷ್ಮಣ ಸವದಿ ಆಶಯ

ಗ್ರಾಮೀಣ ಭಾಗದ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು; ಶಾಸಕ ಲಕ್ಷ್ಮಣ ಸವದಿ ಆಶಯ

ಅಥಣಿ/ಕೊಕಟನೂರ”ಗ್ರಾಮೀಣ ಭಾಗದ ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ವಿದ್ಯಾರ್ಥಿಗಳಿಗೆ ತಮ್ಮದೇ ಗ್ರಾಮಗಳಲ್ಲಿ ಉನ್ನತ ಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವುದು ನನ್ನ ಮುಖ್ಯ ಉದ್ದೇಶವಾಗಿದೆ,” ಎಂದು ಶಾಸಕ ಲಕ್ಷ್ಮಣ ಸವದಿ ಅವರು ತಿಳಿಸಿದರು.
ಇಲ್ಲಿನ ಕಾಲೇಜು ಶಿಕ್ಷಣ ಇಲಾಖೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್, ರೆಡ್ ಕ್ರಾಸ್, ಸ್ಕೌಟ್ ಮತ್ತು ಗೈಡ್ಸ್ ಚಟುವಟಿಕೆಗಳ ಸಮಾರೋಪ, ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ನೂತನ ಸಭಾಂಗಣದ ಉದ್ಘಾಟನಾ ಸಮಾರಂಭ ವನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.

ನೂತನ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, “ಈ ಭಾಗದಲ್ಲಿ ಶಿಕ್ಷಣದ ಹಬ್ಬವನ್ನು ಆಚರಿಸಬೇಕೆಂಬುದು ನನ್ನ ಆಸೆಯಾಗಿದೆ. ಅದನ್ನು ಪೂರ್ಣ ಪ್ರಮಾಣದಲ್ಲಿ ನನಸು ಮಾಡಲು ನಾನು ಬದ್ಧನಾಗಿದ್ದೇನೆ. ಕ್ಷೇತ್ರ ಹಾಗೂ ಶಿಕ್ಷಣ ಸಂಸ್ಥೆಯ ಯಾವುದೇ ಅಭಿವೃದ್ಧಿ ಕೆಲಸಗಳು ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬರೂ ಕೈಜೋಡಿಸಿ ಸಹಕಾರ ನೀಡಬೇಕು,” ಎಂದು ಕರೆ ನೀಡಿದರು.

ಈ ಕಾಲೇಜಿಗೆ ಬೇಕಾಗುವ ಎಲ್ಲ ಅಗತ್ಯ ಮೂಲಸೌಲಭ್ಯಗಳನ್ನು ಶೀಘ್ರದಲ್ಲೇ ತಂದುಕೊಡುವ ಕೆಲಸ ಮಾಡುತ್ತೇನೆ. ಕಾಲೇಜಿನ ಆವರಣದಲ್ಲಿ ಪರಿಸರವನ್ನು ರಕ್ಷಿಸಲು ಮತ್ತು ಉತ್ತಮ ವಾತಾವರಣ ನಿರ್ಮಿಸಲು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ನೆಡುವ ಕೆಲಸ ಮಾಡಬೇಕು,” ಎಂದು ಶಾಸಕರು ಕಿವಿಮಾತು ಹೇಳಿದರು.

ಕ್ಷೇತ್ರದ ಶೈಕ್ಷಣಿಕ ಅಭಿವೃದ್ಧಿ ಕುರಿತು ಮಾತನಾಡಿದ ಶಾಸಕರು ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಾಲೂಕಿನಲ್ಲಿ ಈಗಾಗಲೇ 11 ಹೊಸ ಹೈಸ್ಕೂಲ್*ಗಳನ್ನು ಆರಂಭಿಸಲಾಗಿದೆ.
ತಾಲೂಕಿಗೆ ಒಟ್ಟು 3 ಕರ್ನಾಟಕ ಪಬ್ಲಿಕ್ ಶಾಲೆಗಳು (KPS)ಮಂಜೂರಾಗಿದ್ದು, ಅದರಲ್ಲಿ ಒಂದು ಶಾಲೆಯನ್ನು ಕೊಕಟನೂರ ಗ್ರಾಮಕ್ಕೇ ನೀಡಲಾಗಿದೆ.
ಈ ಭಾಗದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ಮಹಿಳೆಯರಿಗಾಗಿ ಪ್ರತ್ಯೇಕ ವಸತಿ ಶಾಲೆ ನಿರ್ಮಾಣಕ್ಕೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ತಾಲೂಕಿನ ಶಾಲಾ-ಕಾಲೇಜುಗಳಲ್ಲಿ ಡಿಜಿಟಲ್ ಕ್ಲಾಸ್‌ರೂಂ, ಸುಸಜ್ಜಿತ ಪ್ರಯೋಗಾಲಯ ಹಾಗೂ ಗ್ರಂಥಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

“ಕೊಕಟನೂರ ಗ್ರಾಮದಲ್ಲಿ ಸರಕಾರಿ ಜಾಗ ಹೆಚ್ಚಿಗೆ ಇರುವುದರಿಂದಲೇ ನಮಗೆ ಎಲ್ಲ ರೀತಿಯ ಶಾಲಾ-ಕಾಲೇಜುಗಳನ್ನು ಮತ್ತು ಸರಕಾರಿ ಯೋಜನೆಗಳನ್ನು ಇಲ್ಲಿಗೆ ತರಲು ಸಾಧ್ಯವಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಯಾರೂ ಕೂಡ ಸರಕಾರಿ ಜಾಗವನ್ನು ಒತ್ತುವರಿ ಮಾಡಬಾರದು. ಕಾಲೇಜು ಆಡಳಿತ ಮಂಡಳಿಯು ಸಹ ತಮಗೆ ಸೇರಿದ ಜಾಗದ ಹದ್ದುಬಸ್ತಿ (ಸರ್ವೆ) ಮಾಡಿಸಿ, ಜಾಗವನ್ನು ವ್ಯವಸ್ಥಿತವಾಗಿ ರಕ್ಷಿಸಿಕೊಳ್ಳಬೇಕು,” ಎಂದು ಶಾಸಕರು ಸೂಚನೆ ನೀಡಿದರು.

ಮೇ 24 ರಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ
ಇದೇ ವೇಳೆ ಶಾಸಕರು ಪ್ರಮುಖ ಪ್ರಕಟಣೆಯೊಂದನ್ನು ನೀಡಿ, “ಇದೇ ದಿನಾಂಕ 24 ರಂದು ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಅಂಕ ಪಡೆದು ಸಾಧನೆಗೈದ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಕೃಷ್ಣಾ ರೈತ ಭವನ’ದಲ್ಲಿ ಸತ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು,” ಎಂದು ವಿನಂತಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜು ಮಟ್ಟದ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಅಂತಿಮ ವರ್ಷದ ವಿದ್ಯಾರ್ಥಿಗಳು ಶಾಸಕ ಲಕ್ಷ್ಮಣ ಸವದಿ ಅವರಿಗೆ ಆತ್ಮೀಯವಾಗಿ ಸತ್ಕರಿಸಿ ಗೌರವ ಸಲ್ಲಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಶಾಮ್ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನ ಬೆಳವಣಿಗೆಯನ್ನು ವಿವರಿಸಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಭಾಕರ ಆರ್. ಖ್ಯಾಡಿ, ಪ್ರಮುಖರಾದ ವಿಶಾಲ ದೇಸಾಯಿ, ಶಾಮ ಪೂಜಾರಿ, ಶಿವಾನಂದ ದಿವಾನಮಳ, ಅಬ್ದುಲ್ ಹಮೀದ್, ಕುಮಾರಿ ಡಾಕ್ಟರ್ ಉಮಾಶ್ರೀ ಕುಲಕರ್ಣಿ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹುಸೇನ ಗಡ್ಡೆಕರ ಅತ್ಯಾಕರ್ಷಕವಾಗಿ ನಿರೂಪಿಸಿದರು, ವಿಜಯಕುಮಾರ್ ಬಡಿಗೇರ ಸ್ವಾಗತಿಸಿದರು ಹಾಗೂ ರಮೇಶ ಸಕ್ರಿ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.

ಹೆಚ್ಚಿನ ಸುದ್ದಿ