Monday, February 16, 2026
HomeUncategorizedಕೊಡೇಕಲ್ಲ ಕಾಲಜ್ಞಾನ ನುಡಿ: ದೇಶಕ್ಕೆ ಅಭಿವೃದ್ಧಿ, ಜಗತ್ತಿಗೆ ಯುದ್ಧ ಭೀತಿ - ಕೊಡೇಕಲ್ಲ ಬಸವಣ್ಣನವರ ಭವಿಷ್ಯವಾಣಿ

ಕೊಡೇಕಲ್ಲ ಕಾಲಜ್ಞಾನ ನುಡಿ: ದೇಶಕ್ಕೆ ಅಭಿವೃದ್ಧಿ, ಜಗತ್ತಿಗೆ ಯುದ್ಧ ಭೀತಿ – ಕೊಡೇಕಲ್ಲ ಬಸವಣ್ಣನವರ ಭವಿಷ್ಯವಾಣಿ


ಕಣ್ಣಿದ್ದು ಕುರುಡರು ಅಣ್ಣನ ಕುಲಚಲಕೆˌ
ಬಣ್ಣ ಬಣ್ಣದ ಮಾತುಗಳು
ಹೆಣ್ಣು ಹೊನ್ನು ಮಣ್ಣು ಮೂರಕ್ಕೆ ಮುಗಿಬಿದ್ದು
ಕನ್ನಗಾರರು ಆದರೆಲ್ಲ

ಕೊಡೇಕಲ್ಲ:

ಕಾಲ‌ ಜ್ಞಾನ ಅರ್ಥ
ಆಧ್ಯಾತ್ಮಿಕ ಮತ್ತು ಕಾಲಜ್ಞಾನದ ತವರೂರು ಕೊಡೇಕಲ್ಲನಲ್ಲಿ 2026ರ ಶಿವರಾತ್ರಿಯ ಪ್ರಯುಕ್ತ ಕಾಲಜ್ಞಾನ ನುಡಿ ಹೊರಬಿದ್ದಿದ್ದು, ಮುಂಬರುವ ದಿನಗಳಲ್ಲಿನ ಜಾಗತಿಕ ಏರಿಳಿತಗಳು ಹಾಗೂ ಸಾಮಾಜಿಕ ಬದಲಾವಣೆಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಹೆಣ್ಣು-ಹೊನ್ನು-ಮಣ್ಣಿನ ವ್ಯಾಮೋಹಕ್ಕೆ ಎಚ್ಚರಿಕೆ:
ಕಣ್ಣಿದ್ದೂ ಕುರುಡರಂತೆ ವರ್ತಿಸುವ ಮಾನವ ಕುಲಕ್ಕೆ ಎಚ್ಚರಿಕೆ ನೀಡಿರುವ ನುಡಿಯು, ಮನುಷ್ಯ ಸತ್ಯದ ಮಾರ್ಗ ಬಿಟ್ಟು ಅಸತ್ಯದ ದಾರಿ ಹಿಡಿದಿದ್ದಾನೆ ಎಂದು ವಿಷಾದಿಸಿದೆ. “ಹೆಣ್ಣು, ಹೊನ್ನು ಮತ್ತು ಮಣ್ಣಿನ ವ್ಯಾಮೋಹಕ್ಕೆ ಬಿದ್ದು ಪರಸ್ತ್ರೀ ವ್ಯಾಮೋಹ ಹಾಗೂ ಆಸ್ತಿಗಾಗಿ ಸಂಘರ್ಷಕ್ಕಿಳಿಯುವವರಿಗೆ ಮುಂದಿನ ದಿನಗಳು ಕಠಿಣವಾಗಿರಲಿವೆ. ಸತ್ಯ ಮತ್ತು ಧರ್ಮದ ಹಾದಿಯಲ್ಲಿ ನಡೆದರೆ ಮಾತ್ರ ಸುಖಮಯ ಜೀವನ ಸಾಧ್ಯ” ಎಂದು ಕಾಲಜ್ಞಾನವು ಎಚ್ಚರಿಸಿದೆ.
ರೈತರಿಗೆ ಮತ್ತು ಮಳೆಗೆ ಸಂಬಂಧಿಸಿದ ಮುನ್ಸೂಚನೆ:
ಈ ಬಾರಿಯ ನುಡಿಯು ರೈತ ಸಮುದಾಯಕ್ಕೆ ಆಶಾದಾಯಕವಾಗಿದೆ. ಮಳೆ ಉತ್ತಮವಾಗಿರಲಿದ್ದು, ಮುಂಗಾರು ಮಳೆ ಅಲ್ಪ ಪ್ರಮಾಣದಲ್ಲಿದ್ದರೂ, ಹಿಂಗಾರು ಬೆಳೆಗಳು ಲಾಭದಾಯಕವಾಗಿರಲಿವೆ ಎಂದು ಭವಿಷ್ಯ ನುಡಿಯಲಾಗಿದೆ.
ರಾಜಕೀಯ ಮತ್ತು ದೇಶದ ಸ್ಥಿತಿಗತಿ:
ರಾಜ್ಯ ರಾಜಕೀಯದಲ್ಲಿ ಪ್ರಜೆಗಳ ನಡುವೆ ಕಲಹ ಉಂಟಾಗುವ ಸಾಧ್ಯತೆಯಿದ್ದು, ಆಡಳಿತಗಾರರು ರಕ್ಷಣೆಗೆ ಮುಂದಾದರೆ ಮಾತ್ರ ಸುಸ್ಥಿರ ಆಡಳಿತ ನೀಡಲು ಸಾಧ್ಯ. ಆದರೆ, ರಾಷ್ಟ್ರ ಮಟ್ಟದಲ್ಲಿ “ಹೆಣ್ಣು-ಹೊನ್ನು-ಮಣ್ಣಿನ ಆಸೆಯಿಲ್ಲದವರು” ಅಧಿಕಾರ ನಡೆಸುತ್ತಿರುವುದರಿಂದ ಭಾರತವು ಅಭಿವೃದ್ಧಿ ಪಥದತ್ತ ಸಾಗಲಿದೆ. ಭಾರತದ ಮೇಲೆ ಕಣ್ಣಿಟ್ಟಿರುವ ಅಥವಾ ವಿರೋಧಿಸುವ ರಾಷ್ಟ್ರಗಳು ತಾವಾಗಿಯೇ ಸಂಕಷ್ಟಕ್ಕೆ ಸಿಲುಕಲಿವೆ ಎಂದು ನುಡಿಯು ತಿಳಿಸಿದೆ.
ಜಾಗತಿಕ ಕಳವಳ ಮತ್ತು ಪ್ರಾಕೃತಿಕ ವಿಕೋಪ:
ವಿಶ್ವ ಮಟ್ಟದಲ್ಲಿ ಪರಿಸ್ಥಿತಿ ಗಂಭೀರವಾಗಿರಲಿದೆ ಎಂದು ಕೊಡೇಕಲ್ಲ ನುಡಿ ಭವಿಷ್ಯ ನುಡಿದಿದೆ:
ಯುದ್ಧ ಭೀತಿ: ಪ್ರಪಂಚದಲ್ಲಿ ಯುದ್ಧದ ಛಾಯೆ ಹೆಚ್ಚಾಗಲಿದ್ದು, ಶಾಂತಿ ಭಂಗವಾಗುವ ಲಕ್ಷಣಗಳಿವೆ.
ಪಶ್ಚಿಮ ರಾಷ್ಟ್ರಗಳ ವಿಭಜನೆ: ಪಶ್ಚಿಮದ ಪ್ರಬಲ ರಾಷ್ಟ್ರವೊಂದು ಇಬ್ಬಾಗವಾಗುವ ಸಂಭವವಿದೆ.
ಗಣ್ಯರಿಗೆ ಅಪಾಯ: ಜಗತ್ತಿನ ಪ್ರಭಾವಿ ರಾಷ್ಟ್ರದ ನಾಯಕರಿಗೆ ಪ್ರಾಣಾಪಾಯವಿದ್ದು, ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ನೈಸರ್ಗಿಕ ವಿಕೋಪ: ಭೂಕಂಪ, ಸುನಾಮಿ ಮತ್ತು ಚಂಡಮಾರುತಗಳಂತಹ ಪ್ರಾಕೃತಿಕ ವಿಕೋಪಗಳಿಂದ ಜಗತ್ತಿಗೆ ಅಪಾಯ ಕಾದಿದೆ.
ಸಾರಾಂಶ:
“ಕೊಡೇಕಲ್ಲ ಕಾಲಜ್ಞಾನವು ಜನರನ್ನು ಭಯಪಡಿಸಲು ಅಲ್ಲ, ಬದಲಾಗಿ ಎಚ್ಚರಿಸಲು ಇರುವುದು” ಎಂದು ಭಕ್ತಾದಿಗಳಿಗೆ ತಿಳಿಸಲಾಗಿದೆ. ಪಾಪಿಗಳಿಗೆ ಶಿಕ್ಷೆ ಮತ್ತು ಸತ್ಯಕ್ಕೆ ಜಯ ಸಿಗುವ ಕಾಲ ಹತ್ತಿರವಿದ್ದು, ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ನಡೆಯಬೇಕು ಎಂಬುದು ಈ ಬಾರಿಯ ನುಡಿಯ ಸಂದೇಶವಾಗಿದೆ.

ವರದಿ : ಅಮರೇಶಣ್ಣ ಕಾಮಕೇರಿ

ಹೆಚ್ಚಿನ ಸುದ್ದಿ