Tuesday, August 11, 2026
Homeಟಾಪ್ ನ್ಯೂಸ್ಕೆಂಪೇಗೌಡ ಜಯಂತಿಯನ್ನು ವಿಧಾನಸೌಧ ಮುಂಭಾಗದಲ್ಲೂ ಆಚರಿಸಬೇಕು: ಡಾ. ಎಸ್. ಸಂಗಮೇಶ್

ಕೆಂಪೇಗೌಡ ಜಯಂತಿಯನ್ನು ವಿಧಾನಸೌಧ ಮುಂಭಾಗದಲ್ಲೂ ಆಚರಿಸಬೇಕು: ಡಾ. ಎಸ್. ಸಂಗಮೇಶ್

ಬೆಂಗಳೂರು: ಜೂನ್ 27 ರಂದು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ರಾಜ್ಯ ಸರ್ಕಾರ ವಿಧಾನಸೌಧ ಮುಂಭಾಗದಲ್ಲೂ ವಿಜೃಂಭಣೆಯಿಂದ ಆಚರಿಸಬೇಕು ಎಂದು ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷರಾದ ಡಾ. ಎಸ್. ಸಂಗಮೇಶ್ ಸರ್ಕಾರವನ್ನು ಆಗ್ರಹಿಸಿದ್ದಾರೆ.


ಬೆಂಗಳೂರು ನಗರ ನಿರ್ಮಾತೃ, ದೂರದೃಷ್ಟಿಯ ಆಡಳಿತಗಾರ ಹಾಗೂ ಕನ್ನಡ ನಾಡಿನ ಹೆಮ್ಮೆಯ ಪ್ರತೀಕವಾಗಿರುವ ನಾಡಪ್ರಭು ಕೆಂಪೇಗೌಡರ ಕೊಡುಗೆಗಳನ್ನು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವುದು ಸರ್ಕಾರದ ಕರ್ತವ್ಯವಾಗಿದೆ. ಅವರ ಆದರ್ಶಗಳು, ಆಡಳಿತ ದಕ್ಷತೆ ಹಾಗೂ ಅಭಿವೃದ್ಧಿ ಪರಿಕಲ್ಪನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ಸ್ಮರಣಾರ್ಥ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ವಿಧಾನಸೌಧ ಮುಂಭಾಗದಲ್ಲಿ ಆಯೋಜಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಕೆಂಪೇಗೌಡ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕೆಂಪೇಗೌಡರ ಜೀವನ, ಸಾಧನೆ, ಇತಿಹಾಸ ಮತ್ತು ಕನ್ನಡ ನಾಡಿಗೆ ನೀಡಿದ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಯುವಜನರಲ್ಲಿ ಬಿತ್ತರಿಸುವ ಉದ್ದೇಶದಿಂದ ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು ಹಾಗೂ ಯುವ ಸಮಾವೇಶಗಳನ್ನು ಆಯೋಜಿಸಲು ಸರ್ಕಾರ ಮುಂದಾಗಬೇಕು. ಕೆಂಪೇಗೌಡರ ಆಡಳಿತ ನೀತಿಗಳು, ದೂರದೃಷ್ಟಿ ಮತ್ತು ಅಭಿವೃದ್ಧಿ ಚಿಂತನೆಗಳು ಇಂದಿನ ಆಡಳಿತ ವ್ಯವಸ್ಥೆಗೆ ಮಾದರಿಯಾಗಿವೆ ಎಂದು ಅವರು ಹೇಳಿದ್ದಾರೆ.
ಸರ್ಕಾರವು ಕೆಂಪೇಗೌಡ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಕನ್ನಡ ನಾಡಿನ ಸ್ವಾಭಿಮಾನ, ಸಂಸ್ಕೃತಿ ಹಾಗೂ ಪರಂಪರೆಯ ಸಂಕೇತವಾಗಿ ಆಚರಣೆ ಮಾಡಬೇಕು. ಈ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಡಾ. ಎಸ್. ಸಂಗಮೇಶ್ ಎಚ್ಚರಿಕೆ ನೀಡಿದ್ದಾರೆ.

ಹೆಚ್ಚಿನ ಸುದ್ದಿ