ಕಾಮನಕೇರಿ : ಶ್ರಾವಣ ಮಾಸದ ವಿಶೇಷ ಧಾರ್ಮಿಕ ಆಚರಣೆಗಳ ಹಿನ್ನೆಲೆಯಲ್ಲಿ ಕಾಮನಕೇರಿ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ಜ್ಞಾನೇಶ್ವರ ಸ್ವಾಮಿಗಳು ಸಾರ್ವಜನಿಕರಿಗೆ ಅರ್ಥಪೂರ್ಣ ಪುರಾಣ ಪ್ರವಚನವನ್ನು ಜರುಗಿಸುತ್ತಿದ್ದಾರೆ. ಶ್ರಾವಣದ ಈ ವಿಶೇಷ ದಿನಗಳಲ್ಲಿ ಅಣ್ಣ-ತಂಗಿಯರ ಅಪರೂಪದ ಸಂಬಂಧ, ರಕ್ಷಾ ಬಂಧನ ಹಾಗೂ ನಾಗರಪಂಚಮಿಯ ಸಾಂಸ್ಕೃತಿಕ ಮಹತ್ವವನ್ನು ಸ್ವಾಮಿಗಳು ತಮ್ಮ ಪ್ರವಚನದ ಮೂಲಕ ಭಕ್ತರಿಗೆ ತಿಳಿಸಿಕೊಟ್ಟರು.


ರಕ್ಷಾ ಬಂಧನ ಮತ್ತು ನಾಗರಪಂಚಮಿಯ ಪೌರಾಣಿಕ ಹಿನ್ನೆಲೆ
ಪ್ರವಚನದ ವೇಳೆ ರಕ್ಷಾಬಂಧನದ ಕುರಿತು ವಿವಿಧ ಪ್ರತೀತಿಗಳನ್ನು ಸ್ವಾಮಿಗಳು ವಿವರಿಸಿದರು. ದ್ರೌಪದಿಯು ಶ್ರೀಕೃಷ್ಣನಿಗೆ ತನ್ನ ಸೀರೆಯಂಚನ್ನು ಹರಿದು ಕಟ್ಟಿ ರಕ್ಷೆ ಬೇಡಿದ್ದು ಮತ್ತು ಕೃಷ್ಣ ಕಷ್ಟಕಾಲದಲ್ಲಿ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿದ ಕಥೆಯನ್ನು ಸ್ಮರಿಸಲಾಯಿತು. ಇದೇ ರೀತಿ, ಲಕ್ಷ್ಮೀ ದೇವಿಯು ಬಲಿ ಚಕ್ರವರ್ತಿಯ ಬಳಿ ಹೋಗಿ ಅಣ್ಣ-ತಂಗಿ ಸಂಬಂಧ ಬೆಳೆಸಿ ರಾಖಿ ಕಟ್ಟಿ ತನ್ನ ಪತಿಯನ್ನು ಮುಕ್ತಗೊಳಿಸಲು ಕೋರಿದ ಪೌರಾಣಿಕ ಹಿನ್ನೆಲೆಯನ್ನು ಹಾಗೂ ಗಣೇಶನಿಗೆ ಮಾನಸಾದೇವಿ ರಾಖಿ ಕಟ್ಟಿದ ಕಥೆಯನ್ನು ಉದಾಹರಿಸಲಾಯಿತು.
ನಾಗರಪಂಚಮಿಯ ಉಗಮ ಮತ್ತು ಅಣ್ಣ-ತಂಗಿಯ ಪವಿತ್ರ ಬಾಂಧವ್ಯ
ನಾಗರಪಂಚಮಿ ಆಚರಣೆಯ ಹಿಂದಿರುವ ಮರ್ಮವನ್ನು ವಿವರಿಸುತ್ತಾ ಸ್ವಾಮಿಗಳು ಒಂದು ಭಾವುಕ ಕಥೆಯನ್ನು ಪ್ರಸ್ತಾಪಿಸಿದರು. ತಂಗಿಯನ್ನು ತವರುಮನೆಗೆ ಕರೆದೊಯ್ಯುವ ದಾರಿಯಲ್ಲಿ ಬಂಗಾರದ ದುರಾಶೆಗೆ ಒಳಗಾದ ಅಣ್ಣ, ತನ್ನ ಆಸೆ ತೀರಿಸಿಕೊಳ್ಳಲು ತಂಗಿಯ ಮೇಲೆಯೇ ಕಲ್ಲು ಎತ್ತಿಹಾಕಿ ಕೊಲೆ ಮಾಡಲು ಸಂಚು ಹೂಡುತ್ತಾನೆ. ಇದನ್ನು ಗಮನಿಸಿದ ಪಾರ್ವತೀ-ಪರಮೇಶ್ವರರು ಅಣ್ಣನ ದುರಾಶೆಗೆ ಪಾಠ ಕಲಿಸಲು ಮುಂದಾಗುತ್ತಾರೆ. ಕಲ್ಲಬಂಡೆಯ ಕೆಳಗೆ ನಾಗರಸರ್ಪವಾಗಿ ಕುಳಿತುಕೊಳ್ಳುತ್ತಾರೆ. ಅಣ್ಣ ಕಲ್ಲು ಎತ್ತುವ ವೇಳೆ ಆ ನಾಗರಸರ್ಪವು ಅಣ್ಣನಿಗೆ ಕಚ್ಚುತ್ತದೆ (ಮೂರ್ಛೆ ಹೋಗಿ ಸಾವಿನಂಚಿಗೆ ಹೋಗಿದ ತಂಗಿ ).
ಆದರೆ, ತಂಗಿಯ ನಿಸ್ವಾರ್ಥ ಪ್ರೀತಿ ಹಾಗೂ ದೈವಭಕ್ತಿಗೆ ಮೆಚ್ಚಿದ ನಾಗದೇವತೆ/ಪರಮಾತ್ಮರು ಅವಳಿಗೆ ಆಶೀರ್ವಾದ ಮಾಡಿ ಮೂರ್ಚೆಯಿಂದ ಎಬ್ಬಿಸುತ್ತಾರೆ. ಎಚ್ಚೆತ್ತ ತಂಗಿ ತನ್ನ ದುರಾಸೆಯಿಂದ ತನ್ನ ತೆಗೆಯಬೇಕು ಎಂದ ಅಣ್ಣನ ಪ್ರಾಣದ ಬಗ್ಗೆ ಚಿಂತಿಸಿ, “ಪರಮಾತ್ಮನೇ, ನನ್ನ ಅಣ್ಣನಿಗೆ ಯಾವುದೇ ತೊಂದರೆ ನೀಡಬೇಡ, ಅವನಿಗೆ ಜೀವ ನೀಡಿ ಕಾಪಾಡು” ಎಂದು ದೇವರಿಗೆ ಮೊರೆ ಹೋಗುತ್ತಾಳೆ. ತನ್ನ ಪ್ರಾಣಕ್ಕಿಂತಲೂ ಅಣ್ಣನೇ ತನಗೆ ಹೆಚ್ಚು ಎಂದು ತಂಗಿ ಈ ಮೂಲಕ ಸಾಬೀತುಪಡಿಸುತ್ತಾಳೆ. ತಂಗಿಯ ಈ ನಿಷ್ಕಲ್ಮಶ ಪ್ರೀತಿಗೆ ಒಲಿದು ಅಣ್ಣ ಬದುಕುಳಿಯುತ್ತಾನೆ. ಅಂದಿನಿಂದ ಅಣ್ಣನು ತಂಗಿಯನ್ನು ನಾಗರಪಂಚಮಿಗೆ ತವರುಮನೆಗೆ ಕರೆಯಿಸಿಕೊಳ್ಳುವ ಪದ್ಧತಿ ಆರಂಭವಾಯಿತು. ತವರುಮನೆಗೆ ಬಂದ ತಂಗಿ, ತನ್ನ ಅಣ್ಣ-ತಮ್ಮಂದಿರ ಒಳಿತಿಗಾಗಿ ಹಾಗೂ ರಕ್ಷಣೆಗಾಗಿ ನಾಗದೇವತೆಗಳಿಗೆ ಹಾಲು ಎರೆಯುವ ಸಂಪ್ರದಾಯ ರೂಢಿಗೆ ಬಂತು ಎಂದು ವಿವರಿಸಿದರು.
ಗವಾಯಿಗಳ ಮಧುರ ಪದಗಳು ಮತ್ತು ಹಬ್ಬದ ಸಂಭ್ರಮ
ಕಾರ್ಯಕ್ರಮದಲ್ಲಿ ಸ್ಥಳೀಯ ಗವಾಯಿಗಳು ಅಣ್ಣ-ತಂಗಿಯರ ಪ್ರೀತಿ ಹಾಗೂ ಬಾಂಧವ್ಯವನ್ನು ಬಿಂಬಿಸುವ ಜನಪದ ಶೈಲಿಯ ಪದಗಳನ್ನು ಅತ್ಯಂತ ರಾಗಬದ್ಧವಾಗಿ ಹಾಡಿ ರಂಜಿಸಿದರು. “ರಂಗೋಲಿ ಮನೆಯ ಮುಂದೆ ಹಾಕಿಳ ನನ್ನ ತಂಗಿ…” ಹಾಗೂ “ನಾಗರಪಂಚಮಿ ಯಾರಿಗೆ ಹೇಳಲಿ…” ಎಂಬ ಹಾಡುಗಳು ಸಭಿಕರ ಮನಸೂರೆಗೊಂಡವು. ತವರುಮನೆಗೆ ಬರುವ ಹೆಣ್ಣುಮಗಳ ಉತ್ಸಾಹ, ಜೋಕಾಲಿ ಆಟ, ಮತ್ತು ಅಣ್ಣ-ತಂಗಿಯರ ಮಧುರ ನೆನಪುಗಳನ್ನು ಪದಗಳ ಮೂಲಕ ಕಟ್ಟಿಕೊಡಲಾಯಿತು. ಗಂಜಿ ಕುಡಿದರೂ ತವರುಮನೆಯೇ ಸ್ವರ್ಗ ಎಂಬ ಹೆಣ್ಣಿನ ಭಾವನೆಯನ್ನು ಗವಾಯಿಗಳು ತಮ್ಮ ಗಾಯನದ ಮೂಲಕ ಅಭಿವ್ಯಕ್ತಗೊಳಿಸಿದರು.
ಮೌಢ್ಯ ರಹಿತ ಸಮಾಜ ನಿರ್ಮಾಣದ ಸಂದೇಶ
ಪ್ರವಚನದ ಅಂತಿಮ ಭಾಗದಲ್ಲಿ ಜ್ಞಾನೇಶ್ವರ ಸ್ವಾಮಿಗಳು ಸಮಾಜಕ್ಕೆ ಪ್ರಮುಖ ಸಂದೇಶವೊಂದನ್ನು ನೀಡಿದರು. “ಮನದಲ್ಲಿ ಕಪಟ ಇಟ್ಟುಕೊಂಡು ಏನೇ ಮಾಡಿದರೂ ಅದು ಕಪಟವಾಗಿಯೇ ಉಳಿಯುತ್ತದೆ; ಕಪಟವಿಲ್ಲದ ಶುದ್ಧ ಸೇವೆಯೇ ಸಾರ್ಥಕ” ಎಂದು ತಿಳಿಸಿದರು. ಮನೆಯ ಮುಂದೆ ನಿಂಬೆಹಣ್ಣಿಗೆ ಕುಂಕುಮ-ಭಂಡಾರ ಹಚ್ಚುವಂತಹ ಮೂಢನಂಬಿಕೆಗಳಿಂದ ಹೊರಬಂದು, ವೈಜ್ಞಾನಿಕ ಹಾಗೂ ಮೌಢ್ಯರಹಿತ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು. ಅಣ್ಣ-ತಂಗಿಯರ ಶುದ್ಧ ಪ್ರೇಮ ಮತ್ತು ನಿಸ್ವಾರ್ಥ ಬಾಂಧವ್ಯವೇ ಈ ಹಬ್ಬಗಳ ಮೂಲ ಉದ್ದೇಶ ಎಂದು ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿ ಕಾರ್ಯಕ್ರಮವನ್ನು ಮಂಗಳಗೊಳಿಸಿದರು.
