ಅಥಣಿ ತಾಲೂಕಿನ ಹಳ್ಯಾಳ ಏತ ನೀರಾವರಿ ಯೋಜನೆಯ ಜಾಕ್ವೆಲ್ ಕಂ ಪಂಪ್ಹೌಸ್ನಲ್ಲಿ ಬುಧವಾರ ಶಾಸಕ ಲಕ್ಷ್ಮಣ ಸವದಿ ಅವರು ಪಂಪ್ಸೆಟ್ಗೆ ಚಾಲನೆ ನೀಡಿ ಕೆನಾಲ್ಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು, ” ಕೆನಾಲ್ಗಳನ್ನು ಸುಮಾರು ಒಂದು ತಿಂಗಳ ಮೊದಲೇ ಆರಂಭಿಸುವ ಉದ್ದೇಶವಿತ್ತು. ಆದರೆ ಕೃಷ್ಣಾ ನದಿಗೆ ನೀರಿನ ಹರಿವು ತಡವಾಗಿ ಬಂದ ಕಾರಣ ಕೆನಾಲ್ಗಳಿಗೆ ನೀರು ಹರಿಸುವಲ್ಲಿಯೂ ವಿಳಂಬವಾಯಿತು. ಆದರೂ ಜೂನ್ ತಿಂಗಳಲ್ಲಿ ಎರಡು ಬಾರಿ ಉತ್ತಮ ಮಳೆಯಾಗಿದ್ದರಿಂದ ರೈತರು ಮುಂಗಾರು ಬಿತ್ತನೆ ಪೂರ್ಣಗೊಳಿಸಿದ್ದಾರೆ. ಈಗ ಕೆನಾಲ್ ನೀರನ್ನು ಮೊದಲ ಆದ್ಯತೆಯಾಗಿ ರೈತರ ಬೆಳೆಗಳಿಗೆ ತಲುಪಿಸಲಾಗುವುದು. ರೈತರು ತಮ್ಮ ಬೆಳೆಗಳಿಗೆ ಅಗತ್ಯವಿರುವಷ್ಟು ನೀರನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆಯಬೇಕು,” ಎಂದು ಹೇಳಿದರು.
ಮುಂದುವರಿದು ಅವರು, “ಬೆಳೆಗಳಿಗೆ ನೀರು ಹರಿಸಿದ ಬಳಿಕ ಕೆರೆಗಳು, ಬಂದಾರಗಳು ಹಾಗೂ ಇತರೆ ಜಲಮೂಲಗಳಿಗೂ ನೀರು ಹರಿಸಲಾಗುವುದು. ನೀರಿನ ಸಮರ್ಪಕ ಬಳಕೆಗಾಗಿ ರೈತರು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕಾರ ನೀಡಿ, ಅನಗತ್ಯವಾಗಿ ನೀರು ವ್ಯರ್ಥ ಮಾಡದೆ ಎಲ್ಲರಿಗೂ ಸಮಾನವಾಗಿ ತಲುಪುವಂತೆ ಸಹಕರಿಸಬೇಕು. ಸರ್ಕಾರ ರೈತರ ಹಿತಾಸಕ್ತಿಯನ್ನು ಸದಾ ಕಾಪಾಡಲು ಬದ್ಧವಾಗಿದೆ,” ಎಂದು ತಿಳಿಸಿದರು.
“ನೀರಾವರಿ ಸೌಲಭ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಕೃಷಿ ಉತ್ಪಾದನೆ ಹೆಚ್ಚಾಗಿ ರೈತರ ಆದಾಯವೂ ವೃದ್ಧಿಯಾಗುತ್ತದೆ. ಪ್ರತಿಯೊಬ್ಬ ರೈತನ ಹೊಲಕ್ಕೆ ನೀರು ತಲುಪಿಸುವುದು ನಮ್ಮ ಸಂಕಲ್ಪವಾಗಿದೆ,” ಎಂದು ಶಾಸಕ ಸವದಿ ಹೇಳಿದರು.
ಈ ಸಂದರ್ಭದಲ್ಲಿ ಶೇಖರ್ ನ್ಯಾಮಗೌಡ, ಶಿವಾನಂದ ದಿವಾನಮಳ, ಶಾಂತಿನಾಥ ನಂದೇಶ್ವರ, ಮಹಾದೇವ ಬಿಳಿಕುರಿ, ಶಿವು ಗುಡ್ಡಾಪುರ, ನೀರಾವರಿ ಇಲಾಖೆ ಅಭಿಯಂತರ ನಾಗರಾಜ್ ಬಿ., ಪ್ರವೀಣ ಹುಣಸಿಕಟ್ಟಿ, ಸಾಯಬಣ್ಣ ಕಮತಗಿ, ಮಾನಸಿಂಗ್ ಬೋರಾಡೆ, ಪುಷ್ಪಕ ಪಾಟೀಲ್, ಅಶೋಕ್ ಮಗದು , ರಾಮನ ಗೌಡ ಪಾಟಿಲ, ಮಲ್ಲು ಕೂಳ್ಳೋಲಿ ಸೇರಿದಂತೆ ಹಲವು ರೈತರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
