ಬೆಂಗಳೂರು :: ಬಡವರ ಹೊಟ್ಟೆ ಸೇರಬೇಕಾದ ಪಡಿತರ ಅಕ್ಕಿಯನ್ನು ಕಳ್ಳಸಂತೆಯಲ್ಲಿ ಮಾರಾಟ ಮಾಡುವ ಜಾಲದ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಅಕ್ರಮವಾಗಿ ಅಕ್ಕಿ ಸಂಗ್ರಹಿಸುವವರ ಮೇಲೆ ಗುಂಡಾ ಕಾಯ್ದೆ ಅಡಿ ಕೇಸು ದಾಖಲಿಸಿ ಅವರನ್ನು ರಾಜ್ಯದಿಂದಲೇ ಗಡಿಪಾರು ಮಾಡುವ ಕಾನೂನು ತರಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಪತ್ರಕರ್ತ ಅಮರೇಶಣ್ಣ ಕಾಮನಕೇರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಸರ್ಕಾರ ವಾರ್ಷಿಕವಾಗಿ ಸುಮಾರು ₹17,000 ಕೋಟಿಗೂ ಅಧಿಕ ಹಣವನ್ನು ವ್ಯಯಿಸುತ್ತಿದೆ. ಇಷ್ಟೊಂದು ಬೃಹತ್ ಮೊತ್ತದ ಸಾರ್ವಜನಿಕ ಹಣ ಮಾಫಿಯಾ ಪಾಲಾಗುವುದನ್ನು ತಡೆಯಲು ಈ ಕೆಳಗಿನ ಕ್ರಮಗಳು ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ:
೧. ಪಡಿತರ ಚೀಟಿ ರದ್ದು: ಯಾವ ಪಡಿತರದಾರರು ತಮಗೆ ಸಿಕ್ಕ ಅಕ್ಕಿಯನ್ನು ಸ್ವತಃ ಬಳಸದೆ ಕಳ್ಳಸಂತೆಯಲ್ಲಿ ಮಾರಾಟ ಮಾಡುತ್ತಾರೋ, ಅಂತಹವರ ಪಡಿತರ ಚೀಟಿಯನ್ನು ತಕ್ಷಣವೇ ರದ್ದುಗೊಳಿಸಬೇಕು. ಬಡತನದ ಹೆಸರಿನಲ್ಲಿ ಸಿಗುವ ಸೌಲಭ್ಯ ದುರ್ಬಳಕೆಯಾಗಲು ಬಿಡಬಾರದು.
೨. ಗುಂಡಾ ಕಾಯ್ದೆ ಮತ್ತು ಗಡಿಪಾರು: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸುವ ಮತ್ತು ಸಾಗಾಟ ಮಾಡುವವರ ವಿರುದ್ಧ ಕೇವಲ ದಂಡ ಹಾಕಿದರೆ ಸಾಲದು. ಅವರನ್ನು ಸಮಾಜದ್ರೋಹಿಗಳು ಎಂದು ಪರಿಗಣಿಸಿ ಅವರ ಮೇಲೆ ಗುಂಡಾ ಕಾಯ್ದೆ (Goonda Act) ಅಡಿ ಮೊಕದ್ದಮೆ ಹೂಡಬೇಕು. ಅಂತಹ ಕಿಡಿಗೇಡಿಗಳನ್ನು ರಾಜ್ಯದಿಂದಲೇ ಗಡಿಪಾರು ಮಾಡುವ ಕಾನೂನು ರೂಪಿಸಿದರೆ ಮಾತ್ರ ಈ ದಂಧೆಗೆ ಕಡಿವಾಣ ಬೀಳಲಿದೆ.
೩. ಸಿಸಿಟಿವಿ ಮತ್ತು ಬಾರ್ ಕೋಡ್ ತಂತ್ರಜ್ಞಾನ: ಅಕ್ಕಿ ಚೀಲಗಳ ಬದಲಿಗೆ ಬಾರ್ ಕೋಡ್ ಹೊಂದಿರುವ ೨ ಕೆಜಿ ಪ್ಯಾಕೆಟ್ ವ್ಯವಸ್ಥೆ ತರಬೇಕು. ವಿತರಣಾ ಕೇಂದ್ರ ಹಾಗೂ ಲಾರಿಗಳಿಗೆ ಸಿಸಿಟಿವಿ ಅಳವಡಿಸಿ, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ನಿರ್ವಹಣಾ ಕೇಂದ್ರಗಳನ್ನು ಸ್ಥಾಪಿಸಿ ನಿಗಾ ಇಡಬೇಕು. ಈ ತಂತ್ರಜ್ಞಾನದ ವೆಚ್ಚಕ್ಕಾಗಿ ನೀಡುವ ಅಕ್ಕಿಯಲ್ಲಿ ೧-೨ ಕೆಜಿ ಕಡಿತ ಮಾಡುವುದು ಸೂಕ್ತ.
೪. ಖಾಸಗಿ ಜಾಗೃತ ದಳ: ಅಕ್ರಮಗಳನ್ನು ಪತ್ತೆ ಹಚ್ಚಲು ವಿಶೇಷ ಖಾಸಗಿ ಜಾಗೃತ ದಳ ಹಾಗೂ ಪಡಿತರ ವ್ಯವಸ್ಥೆಯಲ್ಲಿ ಖಾಸಗಿ ಸಹಭಾಗಿತ್ವ ತರುವ ಮೂಲಕ ಪಾರದರ್ಶಕತೆ ಹೆಚ್ಚಿಸಬೇಕು.
“ಪತ್ರಿಕೆಗಳಲ್ಲಿ ದಿನನಿತ್ಯ ಅಕ್ಕಿ ಅಕ್ರಮದ ಸುದ್ದಿಗಳು ಬರುತ್ತಲೇ ಇವೆ. ಸರ್ಕಾರಿ ವ್ಯವಸ್ಥೆಯ ಕಣ್ತಪ್ಪಿಸಿ ನಡೆಯುವ ಈ ದಂಧೆಯನ್ನು ಬುಡಸಮೇತ ಕಿತ್ತೆಸೆಯಲು ಸರ್ಕಾರ ಈಗಲಾದರೂ ಇಂತಹ ಕಠಿಣ ಕಾನೂನುಗಳನ್ನು ಜಾರಿಗೆ ತರಲಿ” ಎಂದು ಅಮರೇಶಣ್ಣ ಕಾಮನಕೇರಿ ಅವರು ಈ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
