ವಡಗೇರಾ: ಸಾಧನೆಗೆ ಬಡತನವಾಗಲಿ ಅಥವಾ ಸೌಲಭ್ಯಗಳ ಕೊರತೆಯಾಗಲಿ ಅಡ್ಡಿಯಾಗದು ಎಂಬುದನ್ನು ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಹಾಲಗೇರಾ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿ ಕು. ಮಹಮ್ಮದ ಉಮರ ಸಾಬೀತುಪಡಿಸಿದ್ದಾರೆ.
ಹುಸೇನಸಾಬ ನಾಶಿ ಅವರ ಪುತ್ರರಾದ ಮಹಮ್ಮದ ಉಮರ, ಹಾಲಗೇರಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲೇ ಅಭ್ಯಾಸ ಮಾಡಿದ್ದರು. ಯಾವುದೇ ವಿಶೇಷ ತರಬೇತಿ ಅಥವಾ ಕೋಚಿಂಗ್ ಇಲ್ಲದೆಯೇ ಕಠಿಣ ಪರಿಶ್ರಮದಿಂದ ಓದಿದ ಇವರು, ಈ ಬಾರಿಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶೇ. 91 ರಷ್ಟು ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಯೊಬ್ಬ ವಿಜ್ಞಾನ ವಿಭಾಗದಂತಹ ಕಠಿಣ ವಿಷಯದಲ್ಲಿ ಇಂತಹ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಇವರ ಈ ಅಪ್ರತಿಮ ಸಾಧನೆಗೆ ಹಾಲಗೇರಾ ಸರ್ಕಾರಿ ಪ್ರೌಢಶಾಲೆಯ
ಮುಖ್ಯಗುರುಗಳು ಹಾಗೂ ಸಮಸ್ತ ಗುರುವೃಂದದವರು ಹರ್ಷ ವ್ಯಕ್ತಪಡಿಸಿ, ವಿದ್ಯಾರ್ಥಿಯ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ
