ನವದೆಹಲಿ :: ಕರ್ನಾಟಕದ ರೈತರ ಜಲ ಹಕ್ಕುಗಳು ಹಾಗೂ ರಾಜ್ಯದ ಮಹತ್ವಾಕಾಂಕ್ಷೆಯ ನೀರಾವರಿ ಯೋಜನೆಗಳ ಶಾಸನಬದ್ಧ ಅನುಮೋದನೆಗಳ ರಕ್ಷಣೆಗೆ ರಾಜ್ಯ ಸರ್ಕಾರ ಸತತ ಪ್ರಯತ್ನ ಮುಂದುವರಿಸಿದ್ದು, ಜಲಸಂಪನ್ಮೂಲ ಸಚಿವರಾದ ಶ್ರೀ ಎನ್. ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಇಂದು ನವದೆಹಲಿಯಲ್ಲಿ ರಾಜ್ಯದ ಕಾನೂನು ಮತ್ತು ತಾಂತ್ರಿಕ ತಜ್ಞರ ತಂಡದೊಂದಿಗೆ ಉನ್ನತ ಮಟ್ಟದ ಮಹತ್ವದ ಸಮಾಲೋಚನಾ ಸಭೆ ನಡೆಯಿತು. ಈ ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಗೌರವ್ ಗುಪ್ತಾ, ಸುಪ್ರೀಂ ಕೋರ್ಟ್ನ ಹಿರಿಯ ವಕೀಲರಾದ ಶ್ರೀ ಕುಶ್ವಿಂದರ್ ಮೋಹ್ರಾ, ಶ್ರೀ ಮಯಾಂಕ್ ಜೈನ್, ಸುಪ್ರೀಂ ಕೋರ್ಟ್ನ ಅಡ್ವೊಕೇಟ್ ಆನ್ ರೆಕಾರ್ಡ್ (AOR) ಶ್ರೀ ನಿಶಾಂತ್ ಪಾಟೀಲ್, ಐ.ಎಸ್.ಡಬ್ಲ್ಯೂ ಮುಖ್ಯ ಎಂಜಿನಿಯರ್ ಶ್ರೀ ನಂದೀಶ್, ಉಪ ತಾಂತ್ರಿಕ ಸಲಹೆಗಾರರಾದ ಶ್ರೀ ಅನಂತ್ ಹಾಗೂ ದೆಹಲಿ ಐ.ಎಸ್.ಡಬ್ಲ್ಯೂ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಮತಿ ಸ್ವೀಟಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಕಾವೇರಿ, ಕೃಷ್ಣಾ, ಮಹದಾಯಿ, ಪೆನ್ನೈಯಾರ್ ಜಲವಿವಾದಗಳು ಹಾಗೂ ನೆರೆ ರಾಜ್ಯದ ಕಾವೇರಿ-ವೈಗೈ-ಗುಂಡಾರ್ (CVG) ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಈ ವೇಳೆ ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಸಚಿವರು, ನ್ಯಾಯಾಲಯದಲ್ಲಿ ರಾಜ್ಯದ ಪರವಾಗಿ ಅತ್ಯಂತ ಪ್ರಬಲ, ಸ್ಪಷ್ಟ ಹಾಗೂ ರಾಜಿರಹಿತ ವಾದಗಳನ್ನು ಮಂಡಿಸುವಂತೆ ಕಾನೂನು ತಂಡಕ್ಕೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದರು.
ರಾಜ್ಯದ ಹಿತದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಮತ್ತು ಅರಣ್ಯ ಅನುಮೋದನೆ ಪ್ರಕ್ರಿಯೆಗಳಿಗೆ ವೇಗ ನೀಡಲು ಸರ್ಕಾರ ಎಲ್ಲಾ ಹಂತಗಳಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಅನುಮೋದನೆ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಲು ಕೇಂದ್ರ ಜಲ ಆಯೋಗದ (CWC) ಅಧ್ಯಕ್ಷರಾದ ಶ್ರೀ ಅನುಪಮ್ ಪ್ರಸಾದ್ ಅವರೊಂದಿಗೆ ನಾಳೆ (ಸೆಪ್ಟೆಂಬರ್ 2 ರಂದು ಬೆಳಗ್ಗೆ 10:30ಕ್ಕೆ) ಸಚಿವರು ನೇರ ಮಾತುಕತೆ ನಡೆಸಲಿದ್ದಾರೆ. ಇದರೊಂದಿಗೆ, ಕೃಷ್ಣಾ ಮೇಲ್ದಂಡೆ ಯೋಜನೆ (UKP) ಹಾಗೂ ಮಹದಾಯಿ ಕೊಳ್ಳದ ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರ ಮಟ್ಟದಲ್ಲಿ ಬಾಕಿ ಇರುವ ಅನುಮತಿಗಳನ್ನು ತ್ವರಿತವಾಗಿ ಪಡೆದುಕೊಳ್ಳಲು ನ್ಯಾಯಾಲಯ ಹಾಗೂ ಆಡಳಿತಾತ್ಮಕವಾಗಿ ಕೈಗೊಳ್ಳಬೇಕಾದ ಮುಂದಿನ ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
