Thursday, May 28, 2026
Homeಟಾಪ್ ನ್ಯೂಸ್ಸಿದ್ದರಾಮಯ್ಯ ವಿರುದ್ಧ 37 ಶಾಸಕರ ಸಹಿ ಸಂಗ್ರಹ ಆರೋಪ! ಏನಿದು ಸಾಹುಕಾರ್ ವಿರುದ್ಧದ ಆಪಾದನೆ?

ಸಿದ್ದರಾಮಯ್ಯ ವಿರುದ್ಧ 37 ಶಾಸಕರ ಸಹಿ ಸಂಗ್ರಹ ಆರೋಪ! ಏನಿದು ಸಾಹುಕಾರ್ ವಿರುದ್ಧದ ಆಪಾದನೆ?

ರಾಜ್ಯ ರಾಜಕಾರಣದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ನಡೆಯುತ್ತಿದ್ದಂತೆಯೇ, ಆಡಳಿತಾರೂಢ ಕಾಂಗ್ರೆಸ್ (Karnataka Politics) ವಲಯದಲ್ಲಿ ಆಕ್ರೋಶ ಮತ್ತು ಆಂತರಿಕ ಪಿತೂರಿಗಳ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ.

ಸಾಮಾಜಿಕ ಜಾಲತಾಣದಲ್ಲಿ ವಾಯ್ಸ್ ಆಫ್ ಮಾದಿಗ (ಮಾದಿಗ ಧ್ವನಿ) ಪುಟದಲ್ಲಿ ಪ್ರಕಟವಾಗಿರುವ ಪೋಸ್ಟ್‌ವೊಂದು ಕಾಂಗ್ರೆಸ್ ನಾಯಕರ ನಡುವಿನ ಆಂತರಿಕ ಕಲಹವನ್ನು ಬೀದಿಗೆ ತಂದಿದೆ. ಸಿದ್ದರಾಮಯ್ಯ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೇ ಸಿಎಂಗೆ ಹಾಫ್ ಇಟ್ಟಿದ್ದಾರೆ ಎಂಬ ಗಂಭೀರ ಆರೋಪ ಈ ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಪೋಸ್ಟ್‌ನಲ್ಲಿರುವ ಗಂಭೀರ ಆರೋಪಗಳೇನು?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಸತೀಶ್ ಜಾರಕಿಹೊಳಿ ಒಟ್ಟಿಗೆ ಕುಳಿತಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಅದರೊಂದಿಗೆ ಸಿಎಂ ಆಪ್ತ ಸಚಿವ, ಸಿಎಂ ಆಪ್ತ ಸಚಿವ ಅಂತಾನೇ ಸಿದ್ದರಾಮಯ್ಯಗೆ ಹಾಫ್ ಇಟ್ಟು ಬಿಟ್ರಲ್ಲಪ್ಪ.. ಸಿದ್ದರಾಮಯ್ಯಗೆ ದ್ರೋಹ ಬಗೆದ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ವಿರುದ್ಧ 37 ಶಾಸಕರ ಸಹಿ ಸಂಗ್ರಹಿಸಿ, ಆ ಪಟ್ಟಿಯನ್ನು ಡಿ.ಕೆ. ಶಿವಕುಮಾರ್ ಕೈಗೆ ಕೊಟ್ಟಿದ್ದೇ ಇವರು. ಈ ಮೂಲಕ ಸಿದ್ದರಾಮಯ್ಯ ಅವರ ಬೆನ್ನಿಗೆ ಅವರ ಆಪ್ತರೇ ಚೂರಿ ಹಾಕಿದ್ದಾರೆ ಮತ್ತು ಹೈಕಮಾಂಡ್ ಮಟ್ಟದಲ್ಲಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಈ 37 ಶಾಸಕರ ಸಹಿಗಳ ಪಟ್ಟಿಯೇ ಪ್ರಮುಖ ಅಸ್ತ್ರವಾಯಿತು ಎಂಬ ಅರ್ಥದಲ್ಲಿ ಗಂಭೀರ ಆರೋಪ ಮಾಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ
ಈ ಪೋಸ್ಟ್ ಸದ್ಯ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ನೆಟ್ಟಿಗರು ಹಾಗೂ ರಾಜಕೀಯ ಕಾರ್ಯಕರ್ತರು ಈ ವಿಚಾರವಾಗಿ ಎರಡು ಬಣಗಳಾಗಿ ವಾದ ಮಂಡಿಸುತ್ತಿದ್ದಾರೆ. ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ. ಅಧಿಕಾರದ ಹಂಚಿಕೆ ಮತ್ತು ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಆಂತರಿಕವಾಗಿ ಇಂತಹ ತಂತ್ರಗಳು ನಡೆದಿರುವುದು ನಿಜವಿರಬಹುದು ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಆರಂಭದಿಂದಲೂ ಸಿದ್ದರಾಮಯ್ಯ ಹಾಗೂ ಅಹಿಂದ (AHINDA) ಸಿದ್ಧಾಂತದ ಗಟ್ಟಿ ಬೆಂಬಲಿಗರು. ಅವರ ಹೆಸರಿಗೆ ಮಸಿ ಬಳಿಯಲು ಮತ್ತು ಕಾಂಗ್ರೆಸ್ ಒಗ್ಗಟ್ಟನ್ನು ಮುರಿಯಲು ಯಾರೋ ಸೃಷ್ಟಿಸಿರುವ ಸುಳ್ಳು ಸುದ್ದಿ (Fake News) ಇದಾಗಿದೆ ಎಂದು ಮತ್ತೊಂದು ವರ್ಗ ವಾದಿಸುತ್ತಿದೆ.

ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಕಂಡ ಒಗ್ಗಟ್ಟು
ಒಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪಿತೂರಿಯ ಆರೋಪಗಳು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಇಂದು ಬೆಳಗ್ಗೆ ಸಿಎಂ ನಿವಾಸದಲ್ಲಿ ನಡೆದ ಬ್ರೇಕ್‌ಫಾಸ್ಟ್ ಮೀಟಿಂಗ್ ಭಿನ್ನವಾದ ಚಿತ್ರಣವನ್ನು ನೀಡಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅತ್ಯಂತ ಸೌಹಾರ್ದಯುತವಾಗಿ ಕಾಣಿಸಿಕೊಂಡಿದ್ದು, ಡಿಕೆಶಿ ಅವರು ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಅಲ್ಲದೆ, ನಾನು ಮನಃಪೂರ್ವಕವಾಗಿ ಸಿಎಂ ಸ್ಥಾನ ಬಿಟ್ಟುಕೊಡುತ್ತಿದ್ದೇನೆ, ಒಗ್ಗಟ್ಟೇ ನಮ್ಮ ಮಂತ್ರ ಎಂದು ಸಿದ್ದರಾಮಯ್ಯ ಹೇಳಿರುವುದು ಹಾಗೂ ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಲ್ಲಿ ಒಗ್ಗಟ್ಟಿನ ಪೋಸ್ಟ್ ಹಂಚಿಕೊಂಡಿರುವುದು ಸದ್ಯಕ್ಕೆ ಹೈಕಮಾಂಡ್ ಮಟ್ಟದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದಿದೆ ಎಂಬುದನ್ನು ತೋರಿಸಲು ಯತ್ನಿಸುತ್ತಿದೆ.

ಹೆಚ್ಚಿನ ಸುದ್ದಿ