Wednesday, February 18, 2026
Homeಟಾಪ್ ನ್ಯೂಸ್ಸಾರ್ವಜನಿಕ ಉದ್ಯಾನವನ ಜಾಗ ಕಬಳಿಕೆ ಯತ್ನ; ಶಾಸಕ ಯತ್ನಾಳ್ ಭೇಟಿ, ಭೂಮಾಫಿಯಾಗೆ ಎಚ್ಚರಿಕೆ

ಸಾರ್ವಜನಿಕ ಉದ್ಯಾನವನ ಜಾಗ ಕಬಳಿಕೆ ಯತ್ನ; ಶಾಸಕ ಯತ್ನಾಳ್ ಭೇಟಿ, ಭೂಮಾಫಿಯಾಗೆ ಎಚ್ಚರಿಕೆ

ವಿಜಯಪುರ: ನಗರದ ವಾರ್ಡ್ ನಂ. 10ರ ಗಚ್ಚಿನಕಟ್ಟಿ ಕಾಲೊನಿಯಲ್ಲಿ ಸಾರ್ವಜನಿಕ ಉದ್ಯಾನವನಕ್ಕಾಗಿ ಮೀಸಲಿಟ್ಟಿದ್ದ ಬೆಲೆಬಾಳುವ ಸರ್ಕಾರಿ ಜಾಗವನ್ನು ಭೂಮಾಫಿಯಾ ಅಕ್ರಮವಾಗಿ ಕಬಳಿಸಲು ಯತ್ನಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯ ವಿವರ :
ಗಚ್ಚಿನಕಟ್ಟಿ ಕಾಲೊನಿಯ ಸ.ನಂ. 21/ಹ, ಪ್ಲಾಟ್ ನಂ. 21ರಲ್ಲಿ ಉದ್ಯಾನವನಕ್ಕೆಂದು ವಿಶಾಲವಾದ ಜಾಗವನ್ನು ಮೀಸಲಿಡಲಾಗಿತ್ತು. ಈ ಜಾಗವನ್ನು ಭೂಮಾಫಿಯಾದವರು ಅಕ್ರಮವಾಗಿ ವಶಪಡಿಸಿಕೊಳ್ಳಲು ಸಂಚು ರೂಪಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ, ಸ್ಥಳೀಯ ನಿವಾಸಿಗಳ ಮನವಿ ಮೇರೆಗೆ ಶಾಸಕರು ಇಂದು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ತಹಶಿಲ್ದಾರರು, ಪಾಲಿಕೆ ಆಯುಕ್ತರು ಹಾಗೂ ಭೂ ದಾಖಲೆ ಅಧಿಕಾರಿಗಳು ಇದು ಸಂಪೂರ್ಣವಾಗಿ ಸರ್ಕಾರಿ ಜಾಗವೆಂದು ಸ್ಪಷ್ಟಪಡಿಸಿದ್ದಾರೆ.

ಶಾಸಕರ ಸೂಚನೆ:
ಸ್ಥಳ ಪರಿಶೀಲನೆಯ ನಂತರ ಮಾತನಾಡಿದ ಶಾಸಕರು, “ಸದರಿ ಜಾಗಕ್ಕೆ ತಕ್ಷಣವೇ ಸುತ್ತಲೂ ತಂತಿ ಬೇಲಿ ಅಳವಡಿಸಿ, ಇದು ‘ಮಹಾನಗರ ಪಾಲಿಕೆಯ ಆಸ್ತಿ’ ಎಂದು ನಾಮಫಲಕ ಹಾಕುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಶೀಘ್ರದಲ್ಲೇ ಈ ಜಾಗಕ್ಕೆ ಆವರಣ ಗೋಡೆ ನಿರ್ಮಿಸಿ, ಸಾರ್ವಜನಿಕರ ಅನುಕೂಲಕ್ಕಾಗಿ ಸುಸಜ್ಜಿತ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುವುದು,” ಎಂದು ಭರವಸೆ ನೀಡಿದರು.

ಭೂಮಾಫಿಯಾ ಬಗ್ಗೆ ಆಕ್ರೋಶ:
ನಗರದಲ್ಲಿ ಕೆಲ ಮಾಜಿ ಕಾರ್ಪೊರೇಟರ್‌ಗಳು ಮತ್ತು ಸಮಾಜಘಾತುಕ ಶಕ್ತಿಗಳು ಸೇರಿಕೊಂಡು ಒಂದು ಜಾಲವನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಗುಂಪು ಬಡವರ ಆಸ್ತಿ, ಬಯಲು ಜಾಗ, ಗಾರ್ಡನ್ ಸ್ಥಳಗಳು ಮತ್ತು ದೀರ್ಘಕಾಲದಿಂದ ಹೊರರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವವರ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಕಬಳಿಸುತ್ತಿದೆ. ಅಷ್ಟೇ ಅಲ್ಲದೆ, ವಕ್ಫ್ ಆಸ್ತಿಗಳನ್ನು ಸಹ ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಕಂಡುಬಂದಿವೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು.

ಸಾರ್ವಜನಿಕರಿಗೆ ಕರೆ:
“ಇಂತಹ ಅಕ್ರಮ ಕಬಳಿಕೆ ಪ್ರಕರಣಗಳು ಅಥವಾ ಭೂಮಾಫಿಯಾದ ಬೆದರಿಕೆಗಳು ಕಂಡುಬಂದರೆ ಸಾರ್ವಜನಿಕರು ಭಯಪಡದೆ ತಕ್ಷಣವೇ ಶಾಸಕರ ಕಾರ್ಯಾಲಯಕ್ಕೆ ಮಾಹಿತಿ ನೀಡಬೇಕು. ನಿಮ್ಮ ಆಸ್ತಿಯ ರಕ್ಷಣೆಗೆ ನಾವು ಸದಾ ಬದ್ಧ,” ಎಂದು ಯತ್ನಾಳ್ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು

ಹೆಚ್ಚಿನ ಸುದ್ದಿ