Thursday, May 28, 2026
Homeಟಾಪ್ ನ್ಯೂಸ್ಸರ್‌, ಪ್ಲೀಸ್‌ ರಿಸೈನ್‌ ಮಾಡ್ಬೇಡಿ, ಭಾವುಕ ಕ್ಷಣಕ್ಕೆ ಸಾಕ್ಷಿಯಾದ ವಿಧಾನಸೌಧ

ಸರ್‌, ಪ್ಲೀಸ್‌ ರಿಸೈನ್‌ ಮಾಡ್ಬೇಡಿ, ಭಾವುಕ ಕ್ಷಣಕ್ಕೆ ಸಾಕ್ಷಿಯಾದ ವಿಧಾನಸೌಧ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳು ದಟ್ಟವಾಗುತ್ತಿದ್ದಂತೆ, ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೆ ಮುಖ್ಯಮಂತ್ರಿಗಳ ಕಚೇರಿಯಲ್ಲೂ ಭಾವುಕ ವಾತಾವರಣ ನಿರ್ಮಾಣವಾಗಿದೆ.

ಇಂದು ಸಂಜೆ ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು (CM Siddaramaiah) ಕಂಡು ಅವರ ಕಚೇರಿಯ ಸಿಬ್ಬಂದಿ ಕಣ್ಣೀರು ಹಾಕಿದ ಹೃದಯಸ್ಪರ್ಶಿ ಘಟನೆ ನಡೆದಿದೆ.

ಕಣ್ಣೀರು ಹಾಕಿದ ಸಿಬ್ಬಂದಿಗಳು
ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಜಾತಿಗಣತಿ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಅವರು ಇಂದು ಸಂಜೆ ವಿಧಾನಸೌಧಕ್ಕೆ ಆಗಮಿಸಿದ್ದರು. ಈ ವೇಳೆ ಅಲ್ಲಿ ನೆರೆದಿದ್ದ ಮುಖ್ಯಮಂತ್ರಿ ಕಚೇರಿಯ ಕಾಯಂ ನೌಕರರು ಹಾಗೂ ವಿಶೇಷವಾಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿ, ಸಿಎಂ ಅವರ ರಾಜೀನಾಮೆ ನಿರ್ಧಾರದ ಬಗ್ಗೆ ತೀವ್ರ ಬೇಸರಗೊಂಡು ಕಣ್ಣೀರು ಹಾಕತೊಡಗಿದರು.

ರಾಜೀನಾಮೆ ನೀಡಬೇಡಿ ಎಂದು ಕೈಮುಗಿದು ಮನವಿ
“ಸರ್, ನೀವು ಏನೇ ಆದರೂ ಸರಿ ದಯವಿಟ್ಟು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಡಿ ಪ್ಲೀಸ್…” ಎಂದು ಕಣ್ಣೀರಿಡುತ್ತಾ ಮುಖ್ಯಮಂತ್ರಿಗಳ ಮುಂದೆ ಕೈಮುಗಿದು ವಿನಂತಿಸಿಕೊಂಡರು. ಸಿಬ್ಬಂದಿಯ ಈ ಭಾವುಕತೆಯನ್ನು ಕಂಡು ಕೊಂಚ ಮರುಗಿದ ಸಿದ್ದರಾಮಯ್ಯ ಅವರು, ತಕ್ಷಣವೇ ತಮ್ಮ ವಿಶಿಷ್ಟ ಶೈಲಿಯ ಕೈಸನ್ನೆಯ ಮೂಲಕವೇ ಎಲ್ಲರನ್ನೂ ಸಮಾಧಾನಪಡಿಸಿ, ಧೈರ್ಯ ತುಂಬಿ ಮುನ್ನಡೆದರು. ಸಿಎಂ ಕಚೇರಿಯ ಇತಿಹಾಸದಲ್ಲೇ ಇಂತಹದೊಂದು ಘಟನೆ ನಡೆದಿರುವುದು ಇದೇ ಮೊದಲು ಎನ್ನಲಾಗಿದೆ.

ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ! ಸಿಎಂ ಸಿದ್ದರಾಮಯ್ಯ ಮೇಲೆ ಆಪ್ತ ಶಾಸಕರು, ಸಚಿವರ ಒತ್ತಡ!

ಕರ್ನಾಟಕ ಕಾಂಗ್ರೆಸ್‌ನಲ್ಲಿ (Karnataka Congress) ಮುಖ್ಯಮಂತ್ರಿ (CM Post) ಬದಲಾವಣೆಯ ಹೈಡ್ರಾಮಾ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಹೈಕಮಾಂಡ್ (High Command) ಸೂಚನೆ ಬೆನ್ನಲ್ಲೇ ಗುರುವಾರ ರಾಜೀನಾಮೆ (Resign) ನೀಡಲಿದ್ದಾರೆ ಎಂಬ ವದಂತಿಗಳ ನಡುವೆ, ಸಿದ್ದರಾಮಯ್ಯ (Siddaramaiah) ಅವರ ಆಪ್ತ ವಲಯದ ಸಚಿವರು ಮತ್ತು ಶಾಸಕರು ನೀವು ಯಾವುದೇ ಕಾರಣಕ್ಕೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಡಿ ಎಂದು ಮುಖ್ಯಮಂತ್ರಿಗಳ ಮೇಲೆ ತೀವ್ರ ಒತ್ತಡ ಹೇರಿದ್ದಾರೆ. ದೆಹಲಿಯಿಂದ (Delhi) ವಾಪಸ್ ಬಂದ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಆಪ್ತ ಶಾಸಕರ ದಂಡು, ಹೈಕಮಾಂಡ್ ತೀರ್ಮಾನಕ್ಕೆ ಭಿನ್ನವಾಗಿ ರಾಜ್ಯದಲ್ಲೇ ಪಟ್ಟು ಹಿಡಿಯುವಂತೆ ಕಟ್ಟುನಿಟ್ಟಿನ ಸಲಹೆ ನೀಡಿದೆ ಎನ್ನಲಾಗುತ್ತಿದೆ.

ಸಿಎಲ್‌ಪಿ ಸಭೆಗೂ ಮುನ್ನ ರಿಸೈನ್ ಬೇಡ
ಶಾಸಕಾಂಗ ಪಕ್ಷದ (CLP) ಸಭೆಗೂ ಮುನ್ನ ನೀವು ರಾಜೀನಾಮೆ ನೀಡುವ ಅಗತ್ಯವಿಲ್ಲ. ಬೇಕಿದ್ದರೆ ಸ್ವಲ್ಪ ಸಮಯ ತೆಗೆದುಕೊಳ್ಳಿ, ಆದರೆ ಈಗಲೇ ನಿರ್ಧಾರ ಪ್ರಕಟಿಸಬೇಡಿ ಎಂದು ಆಪ್ತರು ಪಟ್ಟು ಹಿಡಿದಿದ್ದಾರೆ. ಸಭೆಯಲ್ಲಿ ಶಾಸಕರು ಭಾವನಾತ್ಮಕವಾಗಿ ಮಾತನಾಡಿದ್ದು, ರಾಜ್ಯದ ಜನತೆ ಹೈಕಮಾಂಡ್ ನೋಡಿ ವೋಟ್ ಹಾಕಿಲ್ಲ, ನಿಮ್ಮ ಮುಖ ಮತ್ತು ಗ್ಯಾರಂಟಿ ಯೋಜನೆಗಳನ್ನು ನೋಡಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ನಾವೆಲ್ಲರೂ ನಿಮ್ಮ ಹೆಸರಿನಲ್ಲಿ ಗೆದ್ದು ಬಂದಿರುವುದು. ನಮ್ಮ ಮತ್ತು ನಮ್ಮ ಬೆಂಬಲಿಗರ ಭವಿಷ್ಯದ ದೃಷ್ಟಿಯಿಂದ ನೀವು ಸಿಎಂ ಸ್ಥಾನದಲ್ಲೇ ಮುಂದುವರಿಯಬೇಕು ಎಂದು ಮನವಿ ಮಾಡಿದ್ದಾರೆ.

ಹೆಚ್ಚಿನ ಸುದ್ದಿ