ಬಸವನಬಾಗೇವಾಡಿ: ಶಿಕ್ಷಣ ಕ್ಷೇತ್ರದಲ್ಲಿನ ಗಣನೀಯ ಸೇವೆ ಹಾಗೂ ಶಾಲೆ ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ನೀಡಿದ ಅನುಪಮ ಕೊಡುಗೆಯನ್ನು ಪರಿಗಣಿಸಿ, ದಿಂಡವಾರದ ಸರಕಾರಿ ಕನ್ನಡ ಗಂಡು ಮಕ್ಕಳ ಕಿರಿಯ ಪ್ರಾಥಮಿಕ ಶಾಲೆ (ತಿಮ್ಮಾಪೂರ ಬಡಾವಣೆ) ಮುಖ್ಯಗುರುಗಳಾದ ಶ್ರೀ ಮಹಬೂಬ ನದಾಫ ಅವರಿಗೆ ‘ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಯಲಹಂಕದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. TV 4 ವಾಹಿನಿ ಮತ್ತು ಶ್ರೀ ಶಿರಡಿ ಸಾಯಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮ ಆಯೋಜಿತವಾಗಿತ್ತು.
ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಸಾಯಿ ಸತೀಶ, ಖ್ಯಾತ ಆಧ್ಯಾತ್ಮಿಕ ಚಿಂತಕರಾದ ಶ್ರೀ ಆನಂದ ಗುರೂಜಿ, ಹೆಸರಾಂತ ವೈದ್ಯರಾದ ಶ್ರೀ ಅಂಜನಪ್ಪ ಹಾಗೂ ಚಲನಚಿತ್ರ ರಂಗದ ಖ್ಯಾತ ನಟ-ನಟಿಯರು ಉಪಸ್ಥಿತರಿದ್ದು, ಮಹಬೂಬ ನದಾಫ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಮಹಬೂಬ ನದಾಫ ಅವರು ತಮ್ಮ ಶಾಲೆಯಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಿಸುವುದರ ಜೊತೆಗೆ, ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಬೋಧಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅವರ ಈ ಸಾಧನೆಗೆ ಶಾಲೆಯ ಶಿಕ್ಷಕ ಬಳಗ, SDMC ಸಮಿತಿ ಹಾಗೂ ಊರಿನ ಗಣ್ಯರು ಹರ್ಷ ವ್ಯಕ್ತಪಡಿಸಿ ಶುಭ ಕೋರಿದ್ದಾರೆ ಎಂದು ಬಸವರಾಜ ನಂ. ಬಾಗೇವಾಡಿ (ಸಾ|| ಉತ್ನಾಳ) ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
