Wednesday, April 15, 2026
Homeಜಿಲ್ಲಾ ಸುದ್ದಿಗಳುವಿಠ್ಠಲ್ ಹೇರೂರ ಸಾಮಾಜಿಕ ನ್ಯಾಯದ ಹರಿಕಾರ: ಡಾ. ಮುಕ್ಕಾ

ವಿಠ್ಠಲ್ ಹೇರೂರ ಸಾಮಾಜಿಕ ನ್ಯಾಯದ ಹರಿಕಾರ: ಡಾ. ಮುಕ್ಕಾ

ವಿಠ್ಠಲ್ ಹೇರೂರವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಏಕೆಂದರೆ ಅವರು ಹಿಂದುಳಿದ, ದೀನ ದಲಿತ, ಶೋಷಿತ ಸಮುದಾಯಗಳ ಶಕ್ತಿಯಾಗಿ ಅವರಿಗಾದ ಅನ್ಯಾಯವನ್ನು ಗಟ್ಟಿ ಧ್ವನಿಯಲ್ಲಿ ಖಂಡಿಸಿ ಅವರಿಗೆ ನ್ಯಾಯ ಕೊಡಿಸುವ ಮೂಲಕ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ ಎಂದು ಮಹರ್ಷಿ ವೇದ ವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟಿನ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಮುಕ್ಕಾ ಅವರು ಹೇಳಿದ್ದಾರೆ.

ನಗರದ ಹಿರಾಪುರ ರಸ್ತೆಯ ಜಿಡಿಎ ಬಡಾವಣೆಯಲ್ಲಿರುವ ಶ್ರೀ ಸ್ವಾಭಿಮಾನಿ ವಿಠ್ಠಲ್ ಹೇರೂರವರ ಮೆಟ್ರಿಕ್ ನಂತರದ ಬಾಲಕರ ಉಚಿತ ವಸತಿ ನಿಲಯದಲ್ಲಿ ಆಯೋಜಿಸಿರುವ ವಿಠ್ಠಲ್ ಹೇರೂರವರ ಜನ್ಮದಿನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಠ್ಠಲ್ ಹೇರೂರವರು ಕೋಲಿ ಸಮಾಜದ ಎಸ್.ಟಿ ಪಡಿಬೇಕೆನ್ನುವ ಹೋರಾಟದ ಜೊತೆಗೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ದೃಷ್ಟಿಯಿಂದ ಇತರ ಸಣ್ಣ ಸಮುದಾಯಗಳನ್ನು ಒಗ್ಗೂಡಿಸಿ ಅವರಲ್ಲಿ ಜಾಗೃತಿ ಮೂಡಿಸಿದ್ದಾರೆ. ಕೋಲಿ ಸಮಾಜ ಅಲ್ಲದೆ ಇತರೆ ಯಾವುದೇ ಜಾತಿ, ಧರ್ಮದ ಜನರು ತಮಗೆ ಅನ್ಯಾಯವಾದರೆ ಅವರಿಗೆ ನ್ಯಾಯ ಕೊಡಿಸುವವರೆಗೂ ಆ ಮನುಷ್ಯ ಹೋರಾಟ ನಿಲ್ಲಿಸುತ್ತಿರಲಿಲ್ಲ. ಎದುರಾಳಿ ಆರ್ಥಿಕವಾಗಿ, ರಾಜಕೀಯವಾಗಿ ಸಾಮಾಜಿಕವಾಗಿ ಎಷ್ಟೇ ಬಲಿಷ್ಠವಾಗಿದ್ದರೂ ಯಾವುದೇ ರೀತಿಯಲ್ಲಿ ಹೆದರದೆ ನಿರ್ಭೀತಿಯಿಂದ, ಮುಲಾಜಿಲ್ಲದೆ ಖಂಡಿಸುತ್ತಿದ್ದರು. ಮತ್ತೆ ಅವರಿಗೆ ನ್ಯಾಯ ಸಿಗುವವರೆಗೂ ಹೇರೂರವರು ಎಂದೂ ಹೋರಾಟ ನಿಲ್ಲಿಸುತ್ತಿರಲಿಲ್ಲ. ಹೀಗೆ ಅವರು ತಾವು ನಂಬಿರುವ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟು, ಅವುಗಳೊಂದಿಗೆ ಬದ್ಧತೆ ಮತ್ತು ಗಟ್ಟಿ ನಿಲುವುಗಳಿಂದ ಸಮುದಾಯಗಳನ್ನು ಕಟ್ಟುತ್ತಿದ್ದರು. ಹೀಗೆ ಅವರು ಸಾಮಾಜಿಕ ನ್ಯಾಯದ ವಿಷಯದಲ್ಲಿ ಯಾವುದೇ ಅಧಿಕಾರ, ಆಸ್ತಿ ಅಂತಸ್ತು ಆಸೆಗೆ ಕಟ್ಟಿ ಬಿದ್ದು ರಾಜಿ ಮಾಡಿ ಕೊಳ್ಳುತ್ತಿರಲಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ಅವರು ತಮ್ಮ ಜೀವನದುದ್ದಕ್ಕೂ ಎಲ್ಲವನ್ನು ತ್ಯಾಗ ಮಾಡಿದ್ದಾರೆ.

ವಿಠ್ಠಲ್ ಹೇರೂರವರು ರಾಜ್ಯದ ಒಂಬತ್ತು ವಿಶ್ವವಿದ್ಯಾಲಯಗಳಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಅಧ್ಯಯನ ಪೀಠವನ್ನು ಆರಂಭಿಸಿದ್ದಾರೆ. ಇದರೊಂದಿಗೆ ಇತರ ಸಮುದಾಯಗಳ ಶರಣ, ಶರಣೆಯರ ಅಧ್ಯಯನ ಪೀಠಗಳನ್ನು ಆರಂಭಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗೆ ವಿಠ್ಠಲ್ ಹೇರೂರವರು ತಮ್ಮ ಇಡೀ ಜೀವನವನ್ನು ಸಮಾಜ ಸೇವೆಗಾಗಿ ಮುಡಿಪಾಗಿಟ್ಟಿದ್ದರು. ಅವರ ತ್ಯಾಗಕ್ಕೆ ನಾವಿಂದು ರುಣಿಯಾಗಿರಲೇಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶರಣಪ್ಪ ಕುಮಸಗಿ ರವರು ವಿಟ್ಟಲ್ ಹೇರೂರವರ ನಿಸ್ವಾರ್ಥ ಹೋರಾಟವನ್ನು ನೆನೆಯುತ್ತಾ ಇವತ್ತು ವಿಠ್ಠಲ್ ಹೇರೂರು ರವರ ಸಾಮರ್ಥ್ಯ ಇರುವಂತಹ ನಾಯಕರು ನಮ್ಮ ಸಮಾಜಕ್ಕೆ ಬೇಕಾಗಿದೆ ಎಂದು ಹೇಳಿದರು

ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಮಾಜಿ ಸದಸ್ಯ ಶ್ರೀ ಮಹಾಂತೇಶ್ ಪಾಟೀಲ್ ರವರು ವಿಟ್ಟಲ್ ಹೇರೂರವರು ನಾಯಕನಾಗಿ ಬೆಳೆಯಬೇಕಾದರೆ ಅವರ ಹತ್ತಿರ ಜೊತೆಗಾರರಿಗೆ ಚಹಾ ಕುಡಿಸಲಿಕ್ಕೂ ಸಹ ಹಣ ಇರ್ಲಿಲ್ಲ ಅಂತಹ ಮನುಷ್ಯ ಮಹಾನ್ ನಾಯಕನಾಗಿ ಬೆಳೆದಿದ್ದೆ ರೋಮಾಂಚನಕಾರಿಯಾಗಿದೆ, ಅವರು ಮನಸ್ಸು ಮಾಡಿದರೆ ಯಡಿಯೂರಪ್ಪನವರ ಕಾಲದಲ್ಲಿ ಸಚಿವ ಸ್ಥಾನ ಪಡೆಯುವಂತಹ ಎಲ್ಲಾ ಅವಕಾಶಗಳು ಅವರ ಮನೆ ಬಾಗಿಲಿಗೆ ಬಂದಿದ್ದು ಅವರ ನಿಸ್ವಾರ್ಥ ಭಾವನೆ, ಮುಗ್ಧತೆ, ಕೆಲವು ಬಾರಿ ಕೆಲವರನ್ನು ಅತಿಯಾಗಿ ನಂಬಿದ್ದನ್ನು ಅವರ ರಾಜಕೀಯ ಭವಿಷ್ಯಕ್ಕೆ ಮುಳ್ಳಾಯಿತು ಎಂದು ಹೇಳಿದರು

ಶ್ರೀ ಎಲ್ಲಪ್ಪ ತಳವಾರ್ ಸ್ವಾಗತಿಸಿದರು, ಎಸ್. ಶಾಮ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಸತೀಶ್ ಕುಮಾರ್ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ರಾಮಕೃಷ್ಣ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಎಸ್ ಶಾಮಕುಮಾರ,
ಪ್ರಧಾನ ಕಾರ್ಯದರ್ಶಿ,
ಈರಣ್ಣ ಜಮಾದಾರ್, ಶರಣಬಸಪ್ಪ ದೊಡ್ಡಮನಿ, ಗಿರಿಮಲ್ಲಪ್ಪ ಹರವಾಳ್, ಸೋಮರಾಯ ನಾಗಾವಿ , ವಿಜಯ್ ಕುಮಾರ್ ನಾಟೇಕರ್, ಚಂದ್ರಶೇಖರ್ ಕೋಟಾರ್ ಗಸ್ತಿ, ನೀಲಕಂಠ ಜಮಾದಾರ್, ರಾಯಪ್ಪ, ಕಮಾನ್ ಮನಿ, ಸಾವಿತ್ರಿ ಇತರ ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ಹೆಚ್ಚಿನ ಸುದ್ದಿ