Wednesday, August 12, 2026
Homeಜಿಲ್ಲಾ ಸುದ್ದಿಗಳುಲಿಂಗಸೂಗೂರು ಸಾರ್ವಜನಿಕ ಉದ್ಯಾನವನ ಅವ್ಯವಸ್ಥೆನಿರ್ವಹಣೆ ಕೊರತೆಯಿಂದ ಅಪಾಯದ ತಾಣವಾಗಿರುವ ಪಾರ್ಕ್

ಲಿಂಗಸೂಗೂರು ಸಾರ್ವಜನಿಕ ಉದ್ಯಾನವನ ಅವ್ಯವಸ್ಥೆನಿರ್ವಹಣೆ ಕೊರತೆಯಿಂದ ಅಪಾಯದ ತಾಣವಾಗಿರುವ ಪಾರ್ಕ್


ಲಿಂಗಸೂಗೂರು: ಪಟ್ಟಣದ ಸಾರ್ವಜನಿಕ ಉದ್ಯಾನವನ ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗುತ್ತಿದ್ದು, ಮಕ್ಕಳು ಹಾಗೂ ವಾಯುವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂಬ ಆರೋಪಗಳು ಕೇಳಿಬಂದಿವೆ.


ಉದ್ಯಾನವನದಲ್ಲಿ ಮಕ್ಕಳ ಆಟೋಪಕರಣಗಳಾದ ಜೋಕಾಲಿ, ಜಾರುಬಂಡಿ, ತಿರುಗುವ ಚಕ್ರ ಸೇರಿದಂತೆ ಹಲವು ಸಾಮಗ್ರಿಗಳು ಮುರಿದು ಹಾಳಾಗಿವೆ. ಅಲ್ಲದೆ ಸಾರ್ವಜನಿಕರು ಕುಳಿತುಕೊಳ್ಳಲು ಅಳವಡಿಸಿದ್ದ ಆಸನಗಳೂ ಹಾನಿಗೊಳಗಾಗಿದ್ದು, ಮುಂಜಾನೆ ಹಾಗೂ ಸಂಜೆ ವಾಯುವಿಹಾರಕ್ಕೆ ಬರುವ ಜನರಿಗೆ ತೊಂದರೆಯಾಗುತ್ತಿದೆ.
ವಾಯುವಿಹಾರಕ್ಕಾಗಿ ಅಳವಡಿಸಿದ್ದ ವ್ಯಾಯಾಮ ಸಲಕರಣೆಗಳೂ ನಿರ್ವಹಣೆ ಕೊರತೆಯಿಂದ ಬಳಕೆಗೆ ಯೋಗ್ಯವಾಗಿಲ್ಲ. ಕೆಲ ಸಾಧನಗಳು ಮುರಿದು ಬಿದ್ದಿರುವುದರಿಂದ ಮಕ್ಕಳು ಹಾಗೂ ಹಿರಿಯರು ಕೈಕಾಲುಗಳಿಗೆ ಗಾಯ ಮಾಡಿಕೊಂಡಿರುವ ಘಟನೆಗಳು ನಡೆದಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇಷ್ಟಾದರೂ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಉದ್ಯಾನವನಕ್ಕೆ ಆಗಮಿಸುವ ನಾಗರಿಕರು, “ಉದ್ಯಾನವನವನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸಿ, ಮಕ್ಕಳ ಆಟೋಪಕರಣಗಳು ಹಾಗೂ ವ್ಯಾಯಾಮ ಸಾಧನಗಳನ್ನು ದುರಸ್ತಿ ಮಾಡಿ, ಸ್ವಚ್ಛತೆ ಮತ್ತು ಭದ್ರತೆ ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.
ಪಟ್ಟಣದ ಜನರಿಗೆ ಆರೋಗ್ಯಕರ ವಾತಾವರಣದಲ್ಲಿ ವಾಯುವಿಹಾರ ಹಾಗೂ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಪುರಸಭೆ ತಕ್ಷಣ ಉದ್ಯಾನವನ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಹೆಚ್ಚಿನ ಸುದ್ದಿ